ಚಂದ್ರು ಕೊಂಚಿಗೇರಿ ಹೂವಿನಹಡಗಲಿ: ತಾಲೂಕಿನ ಬಹುಭಾಗ ತುಂಗಭದ್ರಾ ನದಿ ಸುತ್ತುವರಿದರೂ ರೈತರ ಬದುಕು ಮಾತ್ರ ಹಸನಾಗಿಲ್ಲ. ಬರದಲ್ಲಿ ವರವಾಗಬೇಕಿದ್ದ ಏತ ನೀರಾವರಿ ಯೋಜನೆಗಳ ಕಾಲುವೆಗಳಿಗೆ ಹನಿ ನೀರು ಹರಿದಿಲ್ಲ. ನೀರಿನ ಹಸಿವಿನಲ್ಲಿದ್ದ ಬೆಳೆಗಳು ಒಣಗಿ ನಿಂತಿವೆ.
ತಾಲೂಕಿನಲ್ಲಿ ಮಳೆ ಪ್ರಮಾಣ ಗಣನೀಯ ಪ್ರಮಾಣದಲ್ಲೇನೂ ಸುರಿದಿಲ್ಲ. ಶೇ. 59ರಷ್ಟು ಮಳೆ ಕೊರತೆಯಾಗಿದೆ. ಈ ಬಾರಿ 56 ಸಾವಿರ ಹೆಕ್ಟೇರ್ ಪ್ರದೇಶದ ಬಿತ್ತನೆ ಗುರಿಯಲ್ಲಿ ಕೇವಲ 29,514 ಹೆಕ್ಟೇರ್ ಪ್ರದೇಶ ಮಾತ್ರ ಬಿತ್ತನೆಯಾಗಿದೆ. ಇದರಲ್ಲಿ ಅತಿ ಹೆಚ್ಚು ಮೆಕ್ಕಜೋಳ ಅಂದರೆ 20,990 ಹೆಕ್ಟೇರ್ ಪ್ರದೇಶ ಬಿತ್ತನೆಯಾಗಿದೆ. ಉಳಿದಂತೆ ತೊಗರಿ, ಸೂರ್ಯಕಾಂತಿ, ಸಜ್ಜೆ ಹೈಬ್ರೀಡ್ ಜೋಳ ಬಿತ್ತನೆಯಾಗಿದೆ.
ಸಿಂಗಟಾಲೂರು ಏತ ನೀರಾವರಿಯಿಂದ ಕಾಲುವೆಗಳಿಗೆ ನೀರು ಹರಿಸುತ್ತಾರೆಂದು ನಂಬಿಕೊಂಡು ಈ ಯೋಜನೆಯ ಅಚ್ಚುಕಟ್ಟು ಪ್ರದೇಶದ ರೈತರು ಬಿತ್ತನೆ ಮಾಡಿದ್ದಾರೆ. ಸಿಂಗಟಾಲೂರು ಬ್ಯಾರೇಜ್‌ಗೆ ಒಳ ಹರಿವು ಇದ್ದಾಗ ಕಾಲುವೆಗೆ ಅಲ್ಪಸ್ವಲ್ಪ ನೀರು ಹರಿಸಲಾಗಿತ್ತು. ನೀರಿನ ಒಳ ಹರಿವಿನಲ್ಲಿ ಕುಸಿತ ಕಂಡ ಕೂಡಲೇ ಕಾಲುವೆ ನೀರು ಬಂದ್ ಮಾಡಲಾಗಿದೆ. ಆಗ ಬಿಟ್ಟಿದ್ದ ಕಾಲುವೆ ನೀರು ಹತ್ತಿರದವರಿಗೆ ಮಾತ್ರ ಉಪಯೋಗವಾಗಿತ್ತು. ದೂರದ ರೈತರಿಗೆ ಕಾಲುವೆಗೆ ನೀರು ಹರಿದು ಬರಲೇ ಇಲ್ಲ. ಇದಕ್ಕಾಗಿ ರೈತರು ಹಗಲು ರಾತ್ರಿ ಜಮೀನಿನಲ್ಲೇ ಇದ್ದು ನೀರಿಗಾಗಿ ಚಾತಕ ಪಕ್ಷಿಯಂತೆ ಕಾಯ್ದು ಕುಳಿತ್ತಿದ್ದರು. ಆದರೆ ನೀರು ಮಾತ್ರ ಬರಲಿಲ್ಲ.ಸಿಂಗಟಾಲೂರು ಯೋಜನೆಯ ಬ್ಯಾರೇಜ್ ಪೂರ್ಣ ಪ್ರಮಾಣದ ನೀರು ನಿಲುಗಡೆ ಸಾಧ್ಯವಾಗಿಲ್ಲ. ಹಿನ್ನೀರಿನಲ್ಲಿ ಇನ್ನು ಕೆಲವು ಸಮಸ್ಯೆ ಇರುವ ಕಾರಣ 3 ಟಿಎಂಸಿ ಸಂಗ್ರಹವಾಗಬೇಕಿದ್ದ ನೀರು ಈಗ 2 ಟಿಎಂಸಿ ಮಾತ್ರ ಸಂಗ್ರಹಿಸಲಾಗಿದೆ. ಪೂರ್ಣ ಪ್ರಮಾಣದಲ್ಲಿ ನೀರು ಸಂಗ್ರಹಿಸಿದರೆ ಬರದಲ್ಲಿ ರೈತರಿಗೆ ಆಸರೆಯಾಗುತ್ತಿತ್ತು.
ಮಳೆ ಇಲ್ಲದೇ ರೈತರು, ಕೂಲಿ ಕಾರ್ಮಿಕರ ಕೈಗೆ ಕೆಲಸವೇ ಇಲ್ಲ. ಗುಳೆ ಹೋಗುವ ಸ್ಥಿತಿ ಇದ್ದರೂ ಶಾಲೆಗೆ ಹೋಗುವ ಮಕ್ಕಳನ್ನು ಬಿಟ್ಟು ಹೇಗೆ ಗುಳೆ ಹೋಗಬೇಕೆಂಬ ಚಿಂತೆಯಲ್ಲಿ ಕಾರ್ಮಿಕರಿದ್ದಾರೆ.
ಸಿಂಗಟಾಲೂರು ಬ್ಯಾರೇಜ್‌ಗೆ ಒಳ ಹರಿವು ಕಡಿಮೆ ಇದೆ. ಇದರಿಂದ ಕಾಲುವೆ, ಕೆರೆಗಳಿಗೆ ನೀರು ಹರಿಸುತ್ತಿಲ್ಲ. ಮೊದಲು ಕುಡಿಯುವ ನೀರಿಗೆ ಆದ್ಯತೆ ನೀಡಬೇಕೆಂಬ ನಿರ್ದೇಶನವಿದೆ ಎನ್ನುತ್ತಾರೆ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಇಇ ಎಚ್.ಸಿ. ರಾಘವೇಂದ್ರ.