ಹುಬ್ಬಳ್ಳಿ:
ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಸ್ನಾನ ಮಾಡಿ ಬುಧವಾರ ನಗರದ ಮಠ, ಮಂದಿರಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಅಬಾಲವೃದ್ಧರಾಗಿ ಎಳ್ಳು-ಬೆಲ್ಲ ತಿಂದು ಬೆಲ್ಲದಂಗ್ಹೆ ಇರುವ ಎಂದು ಪರಿಸರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ದೇವಸ್ಥಾನದಲ್ಲಿ ರಷ್:ಸಂಕ್ರಾಂತಿ ಹಬ್ಬದಂಗವಾಗಿ ಕುಟುಂಬ ಸಮೇತರಾಗಿ ತಮ್ಮ ಇಷ್ಟ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಕೆಲವರು ಪ್ರಮುಖ ಧಾರ್ಮಿಕ ಕ್ಷೇತ್ರಗಳಿಗೆ ಪುಣ್ಯಸ್ನಾನ ಮಾಡಿ ದೇವರ ದರ್ಶನ ಪಡೆದರು. ಮಹಿಳೆಯರು ಸಾಂಪ್ರದಾಯಿಕ ಉಡುಗೆ-ತೊಡುಗೆಯಲ್ಲಿ ಕಂಗೊಳಿಸಿದರು.
ಭಕ್ಷ್ಯ ಭೋಜನ:ಹಬ್ಬದ ಹಿನ್ನೆಲೆಯಲ್ಲಿ ಮನೆಯಲ್ಲಿ ಜೋಳ, ಸಜ್ಜೆ, ಎಳ್ಳಿನ ರೊಟ್ಟಿ, ಶೇಂಗಾ ಹೋಳಿಗೆ, ಎಳ್ಳಿನ ಹೋಳಿಗೆ, ಬದನೆಕಾಯಿ ಪಲ್ಯೆ, ಅವರೆಕಾಳು, ಪುಂಡಿಪಲ್ಲೆ, ಎಣ್ಣಿಗಾಯಿ, ಹೆಸರುಕಾಳಿನ, ಶೇಂಗಾ ಚೆಟ್ನಿ, ಗುರೆಳ್ಳಿನ ಚೆಟ್ನಿ, ಕರಿಹಿಂಡಿ, ಬುಂದೆ, ಮಾದಲಿ, ಮೊಸರನ್ನ, ಚಿತ್ರನ್ನಾ ಸೇರಿದಂತೆ ವಿವಿಧ ಖಾದ್ಯಗಳನ್ನು ತಯಾರಿಸಲಾಗಿತ್ತು. ನೆಂಟರು, ಸ್ನೇಹಿತರು, ಕುಟುಂಬಸ್ಥರೆಲ್ಲರೂ ಸೇರಿ ಉದ್ಯಾನವನ, ದೇವಸ್ಥಾನದ ಆವರಣ, ಜಮೀನುಗಳಿಗೆ ತೆರಳಿ ಖಾದ್ಯಗಳನ್ನು ಸವಿದರು.
ಸಿದ್ಧಾರೂಢ ಮಠಕ್ಕೆ ಭಕ್ತರ ದಂಡು:ಸಿದ್ಧಾರೂಢ ಮಠಕ್ಕೆ ನಿತ್ಯವೂ ಸಾವಿರಾರು ಭಕ್ತರು ಆಗಮಿಸುವುದು ಸಾಮಾನ್ಯ. ಆದರೆ, ಹಬ್ಬದ ಹಿನ್ನೆಲೆಯಲ್ಲಿ ಹೆಚ್ಚಿನ ಜನ ಸಂದಣಿ ದೇವಸ್ಥಾನದಲ್ಲಿ ಕಂಡುಬಂದಿತು. ಬೆಳಗ್ಗೆಯಿಂದ ಸಂಜೆ ವರೆಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಸಿದ್ಧಾರೂಢರ, ಗುರುನಾಥ ರೂಢರ ದರ್ಶನ ಪಡೆದರು. ಉಣಕಲ್ಲ ಕೆರೆ ಉದ್ಯಾನ, ನೃಪತುಂಗ ಬೆಟ್ಟದಲ್ಲಿ ಜನತೆ ಸಹಪಂಕ್ತಿ ಭೋಜನ ಸವಿದರು. ತೋಳನಕೆರೆ ಉದ್ಯಾನದಲ್ಲಿ ಊಟಕ್ಕೆ ಅವಕಾಶವಿಲ್ಲದೆ ಇದ್ದರೂ ಸಾವಿರಾರು ಸಂಖ್ಯೆಯಲ್ಲಿ ಜನರು ಭೇಟಿ ನೀಡಿ ಉದ್ಯಾನದಲ್ಲಿ ಮಕ್ಕಳೊಂದಿಗೆ ಆಟವಾಡಿ ಸಂಭ್ರಮಿಸಿದರು.
ನೀರಸಾಗರ ಜಲಾಶಯ, ಕೆಲಗೇರಿ ಕೆರೆ, ನವೀಲುತೀರ್ಥ, ಬಾದಾಮಿ, ಬನಶಂಕರಿ, ಮಹಾಕೂಟ, ಕೂಡಲಸಂಗಮ, ಗೋಕರ್ಣ ಸೇರಿದಂತೆ ಪ್ರವಾಸಿ ತಾಣಗಳಿಗೆ ತೆರಳಿ ಪುಣ್ಯಸ್ಮಾನ ಮಾಡಿ ವಾಪಸಾದರು. ಇಲ್ಲಿನ ಹೊಸೂರು, ಗೋಕುಲ ರಸ್ತೆಯ ಬಸ್ ನಿಲ್ದಾಣದಿಂದ ಪ್ರಮುಖ ಪ್ರವಾಸಿ ತಾಣಗಳಿಗೆ ಬಸ್‌ಗಳ ಸಂಖ್ಯೆ ಹೆಚ್ಚಿಸಿದ್ದರೂ ಬೆಳಗಿನ ವೇಳೆ ಬಸ್ ನಿಲ್ದಾಣದಲ್ಲಿ ಜನದಟ್ಟಣೆ ಕಂಡುಬಂದಿತು.ಇಂದು ಸಹ ಆಚರಣೆ:
ಗುರುವಾರ ಸರ್ಕಾರಿ ರಜೆ ಹಿನ್ನೆಲೆಯಲ್ಲಿ ಸಹ ಉದ್ಯಾನಗಳಲ್ಲಿ ಹೆಚ್ಚಿನ ಜನದಟ್ಟಣೆಯಾಗುವ ನಿರೀಕ್ಷೆಯಿದೆ. ಕೆಲವರು ಬುಧವಾರ ಸಂಕ್ರಾಂತಿ ಆಚರಿಸದೆ ಗುರುವಾರ ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಹಾಗಾಗಿ ಈ ಬಾರಿ ಎರಡು ದಿನ ಸಂಕ್ರಾಂತಿ ಹಬ್ಬ ಆಚರಿಸಲು ಜನರು ಸಿದ್ಧತೆ ಮಾಡಿಕೊಂಡಿರುವುದು ಕಂಡುಬಂದಿತು.