ಡಾ. ಬಿ.ಆರ್. ಅಂಬೇಡ್ಕರ್, ಡಾ. ಬಾಬು ಜಗಜೀವನ್ ರಾಂ ಜನ್ಮ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ
ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಶ್ರೇಷ್ಠ ಸಂವಿಧಾನ ರಚಿಸುವ ಮೂಲಕ ದೇಶಕ್ಕೆ ಗೌರವ ತಂದುಕೊಟ್ಟಿದ್ದಾರೆ. ಅಂಬೇಡ್ಕರ್ ಜ್ಞಾನಕ್ಕೆ ಹೆಚ್ಚಿನ ಮಹತ್ವ ನೀಡಿದ್ದರು. ನಾವು ಈಗ ಹಚ್ಚಿರುವ ದೀಪ ಹಣತೆ ಆಗದೇ ಜ್ಞಾನ ದೀಪ ಆಗಲಿ ಎಂದು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಹೇಳಿದರು.
ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆ, ನಗರಸಭೆ, ಜಿಲ್ಲಾ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಡಾ. ಬಾಬು ಜಗಜೀವನ್ ರಾಮ್ ಸಂಘದ ವತಿಯಿಂದ ನಗರದ ಜೈಭೀಮ್ ವೃತ್ತದಲ್ಲಿ ಸೋಮವಾರ ನಡೆದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 134ನೇ ಹಾಗೂ ಹಸಿರು ಕ್ರಾಂತಿ ಹರಿಕಾರ ಡಾ. ಬಾಬು ಜಗಜೀವನ್ ರಾಂ ಅವರ 118ನೇ ಜನ್ಮ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಮಹಾನ್ ಮಾನವತಾವಾದಿ ಆಗಿದ್ದ ಅಂಬೇಡ್ಕರ್ ಅವರು ಬರೆದ ಸಂವಿಧಾನ ಮಾನವಧರ್ಮ, ಸಮಾನತೆ, ಕೃಷಿ, ಕೈಗಾರಿಕೆ, ಮಹಿಳೆ ಸೇರಿದಂತೆ ಎಲ್ಲ ವರ್ಗದವರ ಅಭಿವೃದ್ಧಿ ಮಂತ್ರ ಒಳಗೊಂಡಿದೆ. ಮನುಷ್ಯರಲ್ಲಿ ಎಲ್ಲರೂ ಸಮಾನರು ಎಂಬ ಭಾವನೆ ಇರಬೇಕು ಎಂದರು
ಅಂಬೇಡ್ಕರ್ ಭವನ, ಸ್ಮಶಾನದ ಬೇಡಿಕೆಯನ್ನು ಸಮಾಜದವರು ನೀಡಿದ್ದಾರೆ. ಈಗಾಗಲೇ ಭವನಕ್ಕಾಗಿ ಮೂರು ಕಡೆ ಜಾಗ ನೋಡಲಾಗಿದೆ. ಯಾವ ಜಾಗ ಸೂಕ್ತವಾಗಲಿದೆ, ಅದನ್ನು ಗುರುತಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸೋಣ. ಸ್ಮಶಾನಕ್ಕೂ ಜಾಗ ಮೀಸಲಿರಿಸಲಾಗುವುದು. ಉಳಿದ ಬೇಡಿಕೆಗಳ ಈಡೇರಿಕೆಗೂ ನಿಯಮಾನುಸಾರ ಕ್ರಮವಹಿಸಲಾಗುವುದು ಎಂದರು.
ಹಸಿರು ಕ್ರಾಂತಿ ಹರಿಕಾರ ಡಾ. ಬಾಬು ಜಗಜೀವನ್ ರಾಮ್ ಅವರು ದೇಶದಲ್ಲಿ ಹಸಿವು, ಬಡತನ ಇದ್ದಾಗ ಪಂಜಾಬ್, ಹರ್ಯಾಣ ಭಾಗದಲ್ಲಿ ಕೃಷಿ ಕ್ಷೇತ್ರದಲ್ಲಿ ಹಸಿರು ಕ್ರಾಂತಿ ಮಾಡಿದರು. ಅವರ ಶ್ರಮದ ಫಲವಾಗಿ ದೇಶ ಆಹಾರ ಉತ್ಪಾದನೆಯಲ್ಲಿ ಸಬಲತೆ ಸಾಧಿಸಿತು ಎಂದರು.ಚಳ್ಳಕೆರೆಯ ಉಪನ್ಯಾಸಕ ಡಾ. ರಾಜಕುಮಾರ ಕೆಆರ್‌ಜೆ, ಡಾ. ಬಿ.ಆರ್. ಅಂಬೇಡ್ಕರ್ ಕುರಿತು ಉಪನ್ಯಾಸ ನೀಡಿದರು. ಉಪನ್ಯಾಸಕ ಡಾ. ತಿಪ್ಪೇಸ್ವಾಮಿ ಎಚ್., ಡಾ. ಬಾಬು ಜಗಜೀವನ್ ರಾಂ ಕುರಿತು ಉಪನ್ಯಾಸ ನೀಡಿದರು.
ಹುಡಾ ಅಧ್ಯಕ್ಷ ಎಚ್‌ಎನ್‌ಎಫ್ ಇಮಾಮ್ ನಿಯಾಜಿ, ಜಿಪಂ ಸಿಇಒ ಅಕ್ರಂ ಶಾ, ಎಸ್ಪಿ ಬಿ.ಎಲ್. ಶ್ರೀಹರಿಬಾಬು, ಸಹಾಯಕ ಆಯುಕ್ತ ವಿವೇಕಾನಂದ, ತಹಸೀಲ್ದಾರ ಶೃತಿ, ಅಂಬೇಡ್ಕರ್ ಸಂಘದ ಅಧ್ಯಕ್ಷ ಕೆ.ಪಿ. ಉಮಾಪತಿ, ಗೌರವಾಧ್ಯಕ್ಷ ಎಂ.ಸಿ. ವೀರಸ್ವಾಮಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎಚ್.ವಿ. ಮಂಜುನಾಥ ಮತ್ತಿತರರಿದ್ದರು. ನಗರದ ಬಳ್ಳಾರಿ ರಸ್ತೆಯ ಅಂಬೇಡ್ಕರ್ ವೃತ್ತದಲ್ಲಿ ಶಾಸಕ ಎಚ್.ಆರ್. ಗವಿಯಪ್ಪನವರು ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು. ಹಂಪಿಯಿಂದ ಜ್ಯೋತಿ ತರಲಾಯಿತು. ನಗರದಲ್ಲಿ ಭವ್ಯ ಮೆರವಣಿಗೆ ನಡೆಯಿತು. ಶಿಕ್ಷಕ ಬಸವರಾಜ ನಿರ್ವಹಿಸಿದರು.