ಬಳ್ಳಾರಿ: 12ನೇ ಶತಮಾನದ ವಚನ ಸಾಹಿತ್ಯದ ವಚನಕಾರರಲ್ಲಿ ಒಬ್ಬರಾದ ಶಿವಯೋಗಿ ಶರಣ ಸಿದ್ದರಾಮೇಶ್ವರರ ಕಾಯಕ ತತ್ವಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳೋಣ ಎಂದು ಮಹಾನಗರ ಪಾಲಿಕೆಯ ಮಹಾಪೌರ ಮುಲ್ಲಂಗಿ ನಂದೀಶ್ ಹೇಳಿದರು.
ಸಿದ್ದರಾಮೇಶ್ವರರ ತತ್ವ ಮನುಕುಲದ ಸೇವೆ, ಶಿವಯೋಗದ ಮಾರ್ಗವಾಗಿತ್ತು. ವಚನ ಸಾಹಿತ್ಯವನ್ನು ವಿನಾಶದಿಂದ ಪಾರು ಮಾಡುವಲ್ಲಿ ಸಿದ್ದರಾಮೇಶ್ವರರೂ ಒಬ್ಬರಾಗಿದ್ದರು ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಮಹಮ್ಮದ್ ಎನ್. ಝುಬೇರ್ ಮಾತನಾಡಿ, ಸಿದ್ದರಾಮೇಶ್ವರರು ಜಾತಿ ಮತ್ತು ಲಿಂಗ ತಾರತಮ್ಯದ ಕುರುಡು ಸಂಪ್ರದಾಯಗಳನ್ನು ತಿರಸ್ಕರಿಸಿದ್ದರು. ವೈಯಕ್ತಿಕ ಅನುಭವದ ಮೂಲಕ ಸಾಕ್ಷರತೆಗೆ ಒತ್ತು ನೀಡಿದ್ದರು. ಸಮ ಸಮಾಜ ಕಟ್ಟುವ ಕನಸು ಕಂಡಿದ್ದವರು ಎಂದು ಹೇಳಿದರು.ಸಿದ್ದರಾಮೇಶ್ವರರು 12ನೇ ಶತಮಾನದ ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಅವರಂತಹ ವಚನ ಸಾಹಿತ್ಯಕಾರರ ಸಾಲಿನಲ್ಲಿ ಪ್ರಬುದ್ಧ ವಚನಕಾರರಾಗಿದ್ದರು ಎಂದು ತಿಳಿಸಿದರು.
ಸಿದ್ದರಾಮೇಶ್ವರರು ಸೊನ್ನಲಿಗೆ ಎಂಬ ಪುಟ್ಟ ಹಳ್ಳಿಯಲ್ಲಿ (ಮಹಾರಾಷ್ಟçದ ಸೊಲ್ಲಾಪುರ) ಜನಿಸಿದವರು. ಅವರ ತಂದೆ ಮುದ್ದುಗೌಡ, ತಾಯಿ ಸುಗ್ಗವ್ವ. ಸಿದ್ಧರಾಮೇಶ್ವರರು ವಚನಗಳನ್ನು ರಚಿಸಿರುವುದು ಮಾತ್ರವಲ್ಲದೆ, ವಚನ ಸಂರಕ್ಷಣೆಯೂ ಮಾಡಿದ್ದಾರೆ. ಕೆರೆ, ಕಟ್ಟೆ ಕಟ್ಟಿಸಿ ಜನೋಪಯೋಗಿ ಕಾರ್ಯ ಕೈಗೊಂಡರು. ಶರಣತತ್ವದ ಪರಿಪಾಲಕರಾಗಿದ್ದರು ಎಂದರು.
ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಅಂಗವಾಗಿ ನಗರದಲ್ಲಿ ಅದ್ದೂರಿ ಮೆರವಣಿಗೆ ನಡೆಯಿತು. ಮೆರವಣಿಗೆಗೆ ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಮುಲ್ಲಂಗಿ ನಂದೀಶ್ ಅವರು ಸಿದ್ದರಾಮೇಶ್ವರ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಚಾಲನೆ ನೀಡಿದರು.
ಸಹಾಯಕ ಆಯುಕ್ತ ಪ್ರಮೋದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ, ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ. ಹನುಮಂತಪ್ಪ, ಜಿಲ್ಲಾ ಭೋವಿ ಸಂಘ ಅಧ್ಯಕ್ಷ ವಿ. ರಾಮಾಂಜನೇಯ ಸೇರಿದಂತೆ ಮಹಾನಗರ ಪಾಲಿಕೆಯ ಸದಸ್ಯರು, ಸಮುದಾಯದ ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಹಾಗೂ ಇತರರು ಉಪಸ್ಥಿತರಿದ್ದರು.