ವೈಮನಸ್ಸು ಮರೆತು ಸಂಭ್ರಮದಿಂದ ಎಲ್ಲರೂ ಸೇರಿ ಜಾತ್ರೆ ಆಚರಿಸೋಣ-ಶಾಸಕ ಮಾನೆ

KannadaprabhaNewsNetwork | Published : Jan 20, 2025 1:31 AM

ಸಾರಾಂಶ

ಹಾನಗಲ್ ನಗರ 10ನೇ ಬಾರಿಗೆ ಗ್ರಾಮದೇವಿ ಜಾತ್ರಾ ಮಹೋತ್ಸವಕ್ಕೆ ಸಾಕ್ಷಿಯಾಗುತ್ತಿದೆ. ಎಲ್ಲ ಸೇರಿ ಭೇದ, ಭಾವ ಮರೆತು, ವೈಮನಸ್ಸು ತೊರೆದು, ವೈಯಕ್ತಿಕ ಸಮಸ್ಯೆಗಳನ್ನು ಮರೆತು ಸಂಭ್ರಮ, ಸಡಗರದಿಂದ ಜಾತ್ರಾ ಮಹೋತ್ಸವ ಆಚರಿಸೋಣ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಹಾನಗಲ್ಲ: ಹಾನಗಲ್ ನಗರ 10ನೇ ಬಾರಿಗೆ ಗ್ರಾಮದೇವಿ ಜಾತ್ರಾ ಮಹೋತ್ಸವಕ್ಕೆ ಸಾಕ್ಷಿಯಾಗುತ್ತಿದೆ. ಎಲ್ಲ ಸೇರಿ ಭೇದ, ಭಾವ ಮರೆತು, ವೈಮನಸ್ಸು ತೊರೆದು, ವೈಯಕ್ತಿಕ ಸಮಸ್ಯೆಗಳನ್ನು ಮರೆತು ಸಂಭ್ರಮ, ಸಡಗರದಿಂದ ಜಾತ್ರಾ ಮಹೋತ್ಸವ ಆಚರಿಸೋಣ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು. ಮಾ. 18 ರಿಂದ 26ರ ವರೆಗೆ ನಡೆಯಲಿರುವ ಗ್ರಾಮದೇವಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಮಹೋತ್ಸವದ ಕಚೇರಿ ಉದ್ಘಾಟಿಸಿ, ಪೋಸ್ಟರ್ ಅನಾವರಣಗೊಳಿಸಿ ಅವರು ಮಾತನಾಡಿದರು. ಮಾಜಿ ಸಚಿವ ದಿ.ಸಿ.ಎಂ. ಉದಾಸಿ ಅವರ ಹಿರಿತನದಲ್ಲಿ ಇದುವರೆಗೆ ಜಾತ್ರೆ ನಡೆಯುತ್ತಾ ಬಂದಿದೆ. ಆದರೆ ಸಿ.ಎಂ. ಉದಾಸಿ ಮತ್ತು ಇನ್ನೊಬ್ಬ ಮಾಜಿ ಸಚಿವ ಮನೋಹರ ತಹಶೀಲ್ದಾರ್ ಅವರು ನಮ್ಮೊಂದಿಗಿಲ್ಲ. ಹಾಗಾಗಿ ಹಿರಿತನದ ಕೊರತೆ ಕಾಡುತ್ತಿದೆ. ಇವರಿಬ್ಬರ ಮಾರ್ಗದರ್ಶನ ಸದಾ ನಮ್ಮೊಂದಿಗಿದೆ ಎಂದು ಹೇಳಿದ ಅವರು ಉತ್ತರ ಕರ್ನಾಟಕದ ದೊಡ್ಡ ಜಾತ್ರೆಗಳಲ್ಲಿ ಇದು ಒಂದಾಗಿದೆ. ಲಕ್ಷಾಂತರ ಭಕ್ತರು ಸೇರುವ ನಿರೀಕ್ಷೆಯ ಹಿನ್ನೆಲೆಯಲ್ಲಿ ಯಾರಿಗೂ ತೊಂದರೆಯಾಗದಂತೆ ಕಾಳಜಿ ವಹಿಸೋಣ. ಸಮಯ ಕಡಿಮೆ ಇರುವ ಕಾರಣ ಸಿದ್ಧತೆ ಚುರುಕುಗೊಳಿಸೋಣ. ಮಳೆ, ಬೆಳೆ ಕೊಟ್ಟು ವರ ನೀಡಿ ನಮ್ಮನ್ನೆಲ್ಲ ಕಾಯುತ್ತಿರುವ ಗ್ರಾಮದೇವಿಯ ಜಾತ್ರಾ ಮಹೋತ್ಸವದಲ್ಲಿ ಖುಷಿಯಿಂದ ಭಾಗಿಗಳಾಗೋಣ ಎಂದರು. ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಮಂಜುನಾಥ ನಾಗಜ್ಜನವರ ಮಾತನಾಡಿ, ಜಾತ್ರಾ ಮಹೋತ್ಸವದ ಯಶಸ್ಸಿಗಾಗಿ ಈಗಾಗಲೇ ಸಮಿತಿಗಳನ್ನು ರಚನೆ ಮಾಡಲಾಗಿದೆ. ಎಲ್ಲರೂ ಸಮಯ ನೀಡಿ ಪೂರ್ವ ಸಿದ್ಧತೆಗಳಲ್ಲಿ ತೊಡಗಬೇಕಿದೆ. ಸಮಿತಿಯ ಸದಸ್ಯರ ಜವಾಬ್ದಾರಿ ಹೆಚ್ಚಿದೆ. ಭಕ್ತರ ಸಹಕಾರ ಪಡೆದು ಉತ್ತಮವಾಗಿ ಆಯೋಜಿಸಬೇಕಿದೆ ಎಂದರು.ಸಮಿತಿಯ ಕೋಶಾಧ್ಯಕ್ಷ ರಾಜೂ ಗೌಳಿ ಮಾತನಾಡಿ, ದೊಡ್ಡ ಪ್ರಮಾಣದಲ್ಲಿ ಜಾತ್ರೆ ನಡೆಯಲಿರುವ ಕಾರಣ ಪ್ರಮುಖವಾಗಿ ಪುರಸಭೆ, ಪೊಲೀಸ್ ಇಲಾಖೆಗಳ ಸಹಕಾರ ಅಗತ್ಯವಾಗಿದೆ. ಸಹಜವಾಗಿ ಪ್ರತಿ ಮನೆ, ಮನೆಗಳಲ್ಲಿಯೂ ಸಹ ಹಬ್ಬದ ಸಡಗರ ಕಂಡು ಬರುತ್ತಿದೆ. 10ನೇ ಬಾರಿ ನಡೆಯುತ್ತಿರುವ ಜಾತ್ರೆ ಇತಿಹಾಸದ ಪುಟ ಸೇರಬೇಕಿದೆ ಎಂದರು. ಹಾವೇರಿಯ ಮಾಜಿ ಶಾಸಕ ಶಿವರಾಜ ಸಜ್ಜನರ, ತಹಶೀಲ್ದಾರ್ ರೇಣುಕಾ ಎಸ್., ಸಿಪಿಐ ಆಂಜನೇಯ, ಪುರಸಭೆ ಅಧ್ಯಕ್ಷೆ ಮಮತಾ ಆರೆಗೊಪ್ಪ, ಮುಖ್ಯಾಧಿಕಾರಿ ಜಗದೀಶ ವೈ.ಕೆ., ಜಾತ್ರಾ ಸಮಿತಿ ಉಪಾಧ್ಯಕ್ಷ ಸುರೇಶ ಪೂಜಾರ, ಉದ್ಯಮಿಗಳಾದ ಎಸ್.ಅಮರೇಂದ್ರ, ಆರ್.ಪ್ರತಾಪ್, ಸಿದ್ದಲಿಂಗಪ್ಪ ಕಮಡೊಳ್ಳಿ, ಗಣೇಶ ಮೂಡ್ಲಿಯವರ, ಗುರುರಾಜ್ ನಿಂಗೋಜಿ ಸೇರಿದಂತೆ ಇನ್ನೂ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Share this article