ಪರಿಸರ ಮಾಲಿನ್ಯದಿಂದ ಉಂಟಾಗುವ ಬೆಂಕಿ ಅನಾಹುತ ಹಾಗೂ ದುರ್ವಾಸನೆ ಬೀರುವ ಅವಘಡ ತಪ್ಪಿಸಬೇಕು. ಪಾಲಿಕೆಯಿಂದ ವೃಕ್ಷ ಕಡಿಯದಂತೆ ನಿರ್ಣಯ ಕೈಗೊಳ್ಳುವ ಜತೆಗೆ ಗಿಡ ನೆಟ್ಟು ಪೋಷಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಲಾಯಿತು.
ಧಾರವಾಡ:
ಹೊಸಯಲ್ಲಾಪುರದ ತ್ಯಾಜ್ಯ ಘಟಕದ ಬೆಂಕಿ ಅನಾಹುತ ತಡೆಗಾಗಿ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ಪರಿಸರಕ್ಕಾಗಿ ನಾವು ಸಂಘಟನೆಯ ನೇತೃತ್ವದಲ್ಲಿ ನೂರಾರು ಸಾರ್ವಜನಿಕರು ಮಂಗಳವಾರ ಬೃಹತ್ ಪಾದಯಾತ್ರೆ ನಡೆಸಿದರು.
ಹೊಸಯಲ್ಲಾಪುರದ ತ್ಯಾಜ್ಯ ಘಟಕದಿಂದ ಪ್ರಾರಂಭವಾದ ಪಾದಯಾತ್ರೆ ನಗರದ ಬಾಗಲಕೋಟೆ ಪೆಟ್ರೋಲ್ ಪಂಪ್, ಕೋರ್ಟ್ ವೃತ್ತ, ಜ್ಯುಬ್ಲಿ ವೃತ್ತದ ಮೂಲಕ ಧಾರವಾಡ ಮಹಾನಗರ ಪಾಲಿಕೆ ಕಚೇರಿ ತಲುಪಿ, ಒಂದು ಗಂಟೆ ಕೆಲ ಕಾಲ ಪ್ರತಿಭಟಿಸಿದರು.
ನೇತೃತ್ವ ವಹಿಸಿದ್ದ ನಿಡಸೋಸಿ ನಿಜಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಕಸವನ್ನು ಬೇಕಾಬಿಟ್ಟಿ ವಿಲೇವಾರಿ ಮಾಡದೆ, ವೈಜ್ಞಾನಿಕ ಮತ್ತು ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ಅಂದಾಗಲೇ ಪರಿಸರ ಮಾಲಿನ್ಯ ತಡೆಗಟ್ಟಲು ಸಾಧ್ಯವಿದೆ ಎಂದು ಹೇಳಿದರು.
ಪರಿಸರ ಮಾಲಿನ್ಯದಿಂದ ಉಂಟಾಗುವ ಬೆಂಕಿ ಅನಾಹುತ ಹಾಗೂ ದುರ್ವಾಸನೆ ಬೀರುವ ಅವಘಡ ತಪ್ಪಿಸಬೇಕು. ಪಾಲಿಕೆಯಿಂದ ವೃಕ್ಷ ಕಡಿಯದಂತೆ ನಿರ್ಣಯ ಕೈಗೊಳ್ಳುವ ಜತೆಗೆ ಗಿಡ ನೆಟ್ಟು ಪೋಷಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಪರಿಸರವಾದಿ ಸಂಘಟಕ ಡಾ. ರಾಜೇಂದ್ರ ಪೋದ್ದಾರ ಮಾತನಾಡಿ, ಹುಬ್ಬಳ್ಳಿ-ಧಾರವಾಡದಲ್ಲಿ ವೈಜ್ಞಾನಿಕವಾಗಿ ಘನತ್ಯಾಜ್ಯ ಸಂಪೂರ್ಣ ವಿಲೇವಾರಿ ಮಾಡುವಲ್ಲಿ ಪಾಲಿಕೆಯು ವಿಫಲವಾಗಿದೆ. ಇದಕ್ಕೆ ಹೊಸಯಲ್ಲಾಪೂರದ ದಶಕಗಳಿಂದ ಕಸದ ಗುಡ್ಡಿ ಬಿದ್ದಿರುವುದೇ ಸಾಕ್ಷಿ. ಘನತ್ಯಾಜ್ಯದ ಗುಡ್ಡಕ್ಕೆ ಆಗಾಗ್ಗೆ ಬೆಂಕಿ ಹೊತ್ತಿ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ವಿಷಕಾರಿ ಗಾಳಿಯಿಂದ ಜನರಲ್ಲಿ ಉಸಿರಾಟ ಸಮಸ್ಯೆ, ಕಣ್ಣುರಿ, ಅಸ್ತಮಾ ಮತ್ತು ಚರ್ಮದ ಕಾಯಿಲೆಯಿಂದ ನರಳುವಂತಾಗಿದೆ ಎಂದು ಹೇಳಿದರು.
ಧಾರವಾಡ ಇಂದು ಮಾಲಿನ್ಯಕ್ಕೆ ಹೆಸರಾಗಿದೆ. ಗುಡ್ಡಕ್ಕೆ ಹೊತ್ತಿದ ಬೆಂಕಿ, ಹೊಗೆಯಿಂದ ಶಾಲಾ ಮಕ್ಕಳು, ವೃದ್ಧರು, ಸುತ್ತಲಿನ ನಿವಾಸಿಗಳಿಗೂ ಸಾಕಷ್ಟು ತೊಂದರೆ ಮಾಡಿದೆ. ಈ ಸಮಸ್ಯೆ ಪರಿಹರಿಸುವಲ್ಲಿ ಮಹಾನಗರ ಪಾಲಕೆಯು ವಿಫಲವಾಗಿದೆ ಎಂದರು. ಬೆಂಕಿ, ವಿಷಯುಕ್ತ ಹೊಗೆ ಬಗ್ಗೆ ಕೈಗೊಂಡ ಕ್ರಮಗಳೇನು? ಈ ಸಮಸ್ಯೆಯಿಂದ ಜನರ, ಪರಿಸರದ ಮೇಲಾದ ದುಷ್ಪರಿಣಾಮಗಳೇನು? ಎಂದು ಪ್ರಶ್ನಿಸಿ ತ್ಯಾಜ್ಯ ವಿಲೇವಾರಿಗೆ ಸೂಕ್ತ ಸ್ಥಳ ಆಯ್ಕೆ ಮಾಡಲು ಆಗ್ರಹಿಸಿ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ನಿರ್ಮಲಾ ಹಿರೇಗೌಡರ, ಶ್ರೀಶೈಲಗೌಡ ಕಮತರ, ಅರುಣಾ ಹಳ್ಳಿಕೇರಿ, ಶಂಕರ ಕುಂಬಿ, ಡಾ. ಮಾಧುರಿ ಚಿಕ್ಕೋಡಿ, ನಾಗರಾಜ ತಿಮ್ಮಾಪುರ ಧಾರವಾಡದ ವಿವಿಧ ಪರಿಸರ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.