ಯಲ್ಲಾಪುರ: ನಮ್ಮ ಸನ್ನಡತೆ, ಉತ್ತಮ ನುಡಿ, ಒಳ್ಳೆಯ ಆಚಾರ, ಉದಾತ್ತ ವಿಚಾರಗಳ ಮೂಲಕ ನಾವು ಮಾನವರಾಗಬಹುದು. ಏನಾದರೂ ಆಗು ಮೊದಲು ಮಾನವನಾಗು ಎನ್ನುವ ಚಿಂತನೆಯಲ್ಲಿ ನಾವು ಬದುಕು ಕಟ್ಟಿಕೊಳ್ಳಬೇಕಾಗಿದೆ ಎಂದು ನಿವೃತ್ತ ಪ್ರಾಂಶುಪಾಲ, ಬರಹಗಾರ ಬೀರಣ್ಣಾ ನಾಯಕ ಮೊಗಟಾ ಹೇಳಿದರು.
ಅವರು ತಾಲೂಕಿನ ಚಿನ್ನಾಪುರ ಸರ್ಕಾರಿ ಪ್ರಾಥಮಿಕ ಶಾಲೆ ಸಭಾಂಗಣದಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಮ್ಮಿಕೊಂಡ ಸಾಲಿನ ವಾರ್ಷಿಕ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದ ಕಾರ್ಯಕ್ರಮದಲ್ಲಿ ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಸ.ಪ್ರ.ದ. ಕಾಲೇಜು ಪ್ರಾಚಾರ್ಯ ಡಾ.ಆರ್.ಡಿ. ಜನಾರ್ದನ ಮಾತನಾಡಿ, ಎಲ್ಲರ ದೃಷ್ಟಿಕೋನ ಒಂದೇ ಆಗಿರುವುದಿಲ್ಲ. ಶಿಕ್ಷಣ ವಿಭಿನ್ನವಾಗಿ ಯೋಚಿಸುವುದನ್ನು ಕಲಿಸುತ್ತದೆ. ಹೊಸ ಚಿಂತನೆಗಳಿಗೆ ಇಂತಹ ಶಿಬಿರ ವೇದಿಕೆಯಾಗಿದೆ ಎಂದರು.
ಪತ್ರಕರ್ತೆ ಪ್ರಭಾವತಿ ಗೋವಿ ಮಾತನಾಡಿ, ವಿದ್ಯಾರ್ಥಿಗಳಿಗೆ ಎನ್‌ಎಸ್‌ಎಸ್ ಶಿಬಿರ ಉತ್ತಮ ಮಾರ್ಗದರ್ಶಿಯಾಗಿದೆ. ಅಧ್ಯಯನಶೀಲರಾಗಿ ನಾಯಕತ್ವ ಗುಣ ಬೆಳೆಸಿಕೊಂಡು, ಜೀವನದಲ್ಲಿ ಹತ್ತಾರು ಸಮಸ್ಯೆಗಳು ಎದುರಾಗುವುದು ಸಹಜ. ಅವುಗಳನ್ನು ಧೈರ್ಯದಿಂದ ಎದುರಿಸಿ, ಕೀಳರಿಮೆ ತೊರೆದು, ಕ್ರಿಯಾಶೀಲತೆ ಮುನ್ನಡೆಯಿರಿ ಎಂದರು.ಜನಜಾಗೃತಿ ವೇದಿಕೆಯ ಡಿ.ಎನ್. ಗಾಂವಕರ ಮಾತನಾಡಿದರು.
ಪತ್ರಕರ್ತ ಜಿ.ಎನ್. ಭಟ್ಟ ಯುಜನತೆ ಜೀವನ ಕೌಶಲ್ಯಗಳು ಮತ್ತು ವ್ಯಕ್ತಿತ್ವ ಕುರಿತು ಮಾತನಾಡಿದರು. ಧಗ್ರಾಯೋ ಸೇವಾಪ್ರತಿನಿಧಿ ರಾಜೀವಿ ನಾಯ್ಕ ಮಾತನಾಡಿದರು. ಪತ್ರಕರ್ತ ಜಯರಾಜ್ ಗೋವಿ, ಗ್ರಾಪಂ ಸದಸ್ಯ ವಿ.ಎನ್. ಹೆಗಡೆ, ಎಸ್‌ಡಿಎಂಸಿ ಅಧ್ಯಕ್ಷ ಶೇಖರ ನಾಯ್ಕ, ಉಪನ್ಯಾಸಕ ಶರತಚಂದ್ರ ಉಪಸ್ಥಿತರಿದ್ದರು.ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ರವಿ ಶೇಷಗಿರಿ ನಿರ್ವಹಿಸಿದರು. ವಿದ್ಯಾರ್ಥಿಗಳಾದ ಅಕ್ಷತಾ ಸಂಗಡಿಗರು ಪ್ರಾರ್ಥಿಸಿದರು. ಧನುಷ ಸ್ವಾಗತಿಸಿದರು. ಪಲ್ಲವಿ ವಂದಿಸಿದರು.
ಯಲ್ಲಾಪುರ ತಾಲೂಕಿನ ಚಿನ್ನಾಪುರ ಸರ್ಕಾರಿ ಶಾಲೆಯ ಆವರಣದಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಮ್ಮಿಕೊಂಡ ವಾರ್ಷಿಕ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು.