ಕಾರವಾರ: ಸಮುದ್ರದಲ್ಲಿನ ಪ್ಲಾಸ್ಟಿಕ್ ತ್ಯಾಜ್ಯವನ್ನು ಮೀನು ಮತ್ತಿತರ ಕಡಲ ಜೀವಿಗಳು ಸೇವಿಸುವುದರಿಂದ ಆಹಾರಕ್ಕಾಗಿ ಇವುಗಳನ್ನು ಉಪಯೋಗಿಸುವ ಮಾನವನ ಆರೋಗ್ಯದ ಮೇಲೆಯೂ ಇದರ ದುಷ್ಪರಿಣಾಮ ಉಂಟಾಗುತ್ತಿದೆ. ಸಮುದ್ರ ಮತ್ತು ಸಮುದ್ರ ತೀರವನ್ನು ಸ್ವಚ್ಛವಾಗಿಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಜಿಪಂ ಸಿಇಒ ಡಾ.ದಿಲೀಷ್ ಶಶಿ ಹೇಳಿದರು.
ಅವರು ಭಾನುವಾರ ರವೀಂದ್ರನಾಥ್ ಠಾಗೂರ್ ಬೀಚ್ ನಲ್ಲಿ ಭಾರತೀಯ ಕೋಸ್ಟ್ ಗಾರ್ಡ್ ನಿಂದ ಅಂತಾರಾಷ್ಟ್ರೀಯ ಕಡಲತೀರ ಸ್ವಚ್ಛತಾ ದಿನದ ಅಂಗವಾಗಿ ಆಯೋಜಿಸಿದ್ದ ಬೀಚ್ ಸ್ವಚ್ಛತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಜಗತ್ತಿನಲ್ಲಿ ಜೀವಿಗಳ ಉದಯ ಸಮುದ್ರದಿಂದಲೇ ಆಗಿದೆ. ಆದರೆ ಪ್ರಸ್ತುತ ಮಾನವನಿಂದಲೇ ಸಮುದ್ರವು ಅತೀ ಹೆಚ್ಚು ಮಲಿನಗೊಳ್ಳುತ್ತಿದೆ. ಸಮುದ್ರಕ್ಕೆ ಸೇರುತ್ತಿರುವ ಮೈಕ್ರೋ ಪ್ಲಾಸಿಕ್ಟ್ ವಸ್ತುಗಳು ಸಮುದ್ರ ಜೀವಿಗಳ ಮೂಲಕ ನಮ್ಮ ಮನೆಗಳಿಗೆ ತಲುಪುತ್ತಿದೆ. ಪ್ಲಾಸ್ಟಿಕ್ ಬಳಕೆ ತಡೆಯುವುದು ಯಾವುದೋ ಒಂದು ಇಲಾಖೆಯ ಕರ್ತವ್ಯವಾಗದೇ, ಪ್ರತೀ ಮನೆಗಳಿಂದಲೂ ಸ್ವಚ್ಚತೆಯ ಪಾಠ ಆರಂಭವಾಬೇಕು. ಸಮುದ್ರ ತೀರವನ್ನು ಮಲಿನಗೊಳಿಸದೇ , ಸ್ವಚ್ಚತೆಯನ್ನು ಕಾಪಾಡಬೇಕು. ಜಿಲ್ಲೆಯಲ್ಲಿ ಸೆ.17ರಿಂದ ಅ.2ರವರೆಗೆ ಸ್ವಚ್ಛತಾ ಹೀ ಸೇವಾ ಪಾಕ್ಷಿಕ ಕಾರ್ಯಕ್ರಮ ನಡೆಯುತ್ತಿದೆ. ಎಲ್ಲ ಇಲಾಖೆಗಳ ಅಧಿಕಾರಿಗಳು ಇದರಲ್ಲಿ ಭಾಗವಹಿಸಿದ್ದು ಜಿಲ್ಲೆಯಾದ್ಯಂತ ಸ್ವಚ್ಚತಾ ಕಾರ್ಯಕ್ರಮಗಳು ನಡೆಯುತ್ತಿವೆ ಎಂದರು.
ಕಡಲ ತೀರವನ್ನು ಸ್ವಚ್ಛವಾಗಿಡುವ ಕುರಿತಂತೆ ಪ್ರತಿಯೊಬ್ಬರು ಪ್ರಮಾಣ ಸ್ವೀಕರಿಸಬೇಕು. ಮನೆಯಲ್ಲಿಯೇ ತ್ಯಾಜ್ಯವನ್ನು ನಿಯಂತ್ರಿಸುವ ಮೂಲಕ ಸ್ವಚ್ಛತೆಯನ್ನು ಕಾಪಾಡಬೇಕಿದೆ ಎಂದು ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಹೇಳಿದರು.ಕೋಸ್ಟ್ ಗಾರ್ಡ್ ಕಮಾಂಡೆಂಟ್ ಕಿರಣ್ ಕುಮಾರ್ ಸಿನ್ಹಾ, ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ನಿಯಂತ್ರಿಸಿ ಅದಕ್ಕೆ ಪರ್ಯಾಯವಾಗಿರುವ ಇತರೇ ಪರಿಸರ ಸ್ನೇಹಿ ವಸ್ತುಗಳನ್ನು ಬಳಸಬೇಕು. ಕಡಲತೀರ ಸ್ವಚ್ಛತೆಯನ್ನು ಕಾಪಾಡುವಲ್ಲಿ ಯುವಜನತೆಯ ಪಾತ್ರ ಪ್ರಮುಖವಾಗಿದ್ದು, ಸಾರ್ವಜನಿಕರೆಲ್ಲರೂ ಇದರಲ್ಲಿ ಕೈಜೋಡಿಸಬೇಕಿದೆ ಎಂದರು.
ನಗರಸಭೆ ಅಧ್ಯಕ್ಷ ರವಿರಾಜ್ ಅಂಕೋಲೆಕರ್, ನೌಕಾಪಡೆಯ ಅಧಿಕಾರಿ ರಜತ್ ಕುಮಾರ್, ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ ರವೀಂದ್ರ ತಾಳೇಕರ್, ಗ್ರಾಸಿಂ ಇಂಡಸ್ಟ್ರೀಸ್ ನ ಕುಶ್ ಶರ್ಮಾ , ಕೋಸ್ಟ್ ಗಾರ್ಡ್ ನ ಡೆಪ್ಯುಟಿ ಕಮಾಂಡೆಂಟ್ ವಿವೇಕ್ ದೀಕ್ಷಿತ್ ಮತ್ತಿತರರು ಇದ್ದರು.ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಕೋಸ್ಟ್ ಗಾರ್ಡ್ ಸಿಬ್ಬಂದಿ, ಮೀನುಗಾರರು ಹಾಗೂ ಸಾರ್ವಜನಿಕರು ಬೀಚ್ ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.