ಕೊಪ್ಪಳ:
ಈ ದೃಶ್ಯ ಕಂಡು ಬಂದಿದ್ದು ತಾಲೂಕಿನ ಬಹದ್ದೂರಬಂಡಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ.
ಶಾಲಾ ಕಾಂಪೌಂಡ್ ಚಿಕ್ಕದಾಗಿದ್ದರಿಂದ ಪುಂಡರ ಹಾವಳಿ ಹೆಚ್ಚಾಗಿತ್ತು. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆಯಾಗಿತ್ತು. ಆದರೆ, ಕಾಂಪೌಂಡ್ ಎತ್ತರಿಸಲು ಅನುದಾನ ಇರಲಿಲ್ಲ. ಈ ಕುರಿತು ಶಾಲೆಯ ಹಳೆ ವಿದ್ಯಾರ್ಥಿಗಳು, ಶಿಕ್ಷಕರು, ಗ್ರಾಮಸ್ಥರು ಚರ್ಚಿಸಿ ತಾವೇ ಹಣ ಹೊಂದಿಸಿ ಕಾಮಗಾರಿ ಆರಂಭಿಸಿದ್ದರು. ಕಾಂಪೌಂಡ್ ಎತ್ತರಿಸುವ ಕಾರ್ಯ ಶನಿವಾರ ಮುಗಿಗಿದ್ದು ಭಾನುವಾರದಿಂದ ಪ್ಲಾಸ್ಟರ್ ಆರಂಭವಾಗಿದೆ. ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ, ಶಿಕ್ಷಕರು, ಶಾಲೆಯ ಹಳೇ ವಿದ್ಯಾರ್ಥಿಗಳು ಬಿಸಿಲ ಝಳ ಲೆಕ್ಕಸದೆ ತಮ್ಮ ಸೇವೆ ಸಲ್ಲಿಸಿದರು. ಇವರಿಗೆ ಕಾರ್ಮಿಕ ಸಂಘದ ಸದಸ್ಯರು ಸಾಥ್ ನೀಡಿದರು.ಭಾನುವಾರ ರಜಾ ದಿನವಾಗಿದ್ದರಿಂದ ಎಲ್ಲ ಶಿಕ್ಷಕರು ಬೆಳಗ್ಗೆಯಿಂದಲೇ ಕೈಯಲ್ಲಿ ಕನ್ರಿ ಹಿಡಿದು ಪರಿಣತರಂತೆ ಕೆಲಸ ಮಾಡಿದರು. ತಮ್ಮ ಶಾಲೆಗೆ ಸೇವೆ ಸಲ್ಲಿಸಬೇಕೆಂದು ಪಣ ತೊಟ್ಟು ಸೇವಾ ಕಾರ್ಯದಲ್ಲಿ ತೊಡಗಿದರು. ಇವರೊಂದಿಗೆ ಹಳೆ ವಿದ್ಯಾರ್ಥಿಗಳು ಬೆನ್ನುಲುಬಾಗಿ ನಿಂತು ಶ್ರಮದಾನ ಮಾಡಿದರು.
ಮರಳು ಸೋಸಿದ ಹೇಮಲತಾ:
ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ಸರ್ಕಾರ ಮಾಡಬೇಕಾದ ಕಾರ್ಯವನ್ನು ಹಳೆಯ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಗ್ರಾಮಸ್ಥರು ಮಾಡುತ್ತಿರುವುದು ಶ್ಲಾಘನೀಯ. ಎಲ್ಲ ಸೌಲಭ್ಯಕ್ಕೆ ಸರ್ಕಾರದ ಕಡೆಗೆ ಮಖ ಮಾಡದೆ ಈ ರೀತಿ ಸೇವಾ ಕಾರ್ಯ ಮಾಡುವುದರಿಂದ ಶಾಲೆ ಹಾಗೂ ಗ್ರಾಮ ಅಭಿವೃದ್ಧಿಯಾಗುತ್ತವೆ ಎಂದರು.
ನಮ್ಮ ಶಾಲಾ ತಡೆಗೊಡೆ ನಿರ್ಮಾಣದ ಸೇವಾ ಕಾರ್ಯಕ್ಕೆ ನಾವು ಅಳಿಲು ಸೇವೆ ಮಾಡಬೇಕೆಂದು ಸ್ವಯಂಪ್ರೇರಿತವಾಗಿ ಮುಖ್ಯಶಿಕ್ಷಕ ಬೀರಪ್ಪ ಅಂಡಗಿ, ಶಿಕ್ಷಕರಾದ ಶರಣಪ್ಪ ಕೆಳಗಿನಗೌಡ್ರ, ಭಾರತಿ ಹವಳೆ, ಭಾರತಿ ಹವಳೆ, ಭಾರತಿ ಉಪಾಧ್ಯಾಯ, ಜ್ಯೋತಿ ಲಕ್ಷ್ಮಿ, ಪೂರ್ಣಿಮಾ ತುಪ್ಪದ, ಮಮತಾ, ಗಂಗಮ್ಮ ಕಪರಶೆಟ್ಟಿ, ಮಾಧವಿ ಅಂಗಡಿ, ಹನುಮಂತಪ್ಪ, ರಾಜಾ ಹುಸೇನ ಪ್ಲಾಸ್ಟರ್ ಕಾರ್ಯದಲ್ಲಿ ಭಾಗಿಯಾಗಿದ್ದರು. ಇವರಿಗೆ ಗ್ರಾಪಂ ಅಧ್ಯಕ್ಷ ಯೋಗಾನಂದ ಲೇಬಗೇರಿ, ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ ಕುರಿ, ಗ್ರಾಪಂ ಸದಸ್ಯರು ಸಾಥ್ ನೀಡಿದರು.
ಸರ್ಕಾರದ ಅನುದಾನ ನೆಚ್ಚದೆ ಶಾಲಾ ಕಾಂಪೌಂಡ್‌ನ್ನು ಹಳೆ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಗ್ರಾಮಸ್ಥರು ಸೇರಿ ನಿರ್ಮಿಸಿರುವ ಸುದ್ದಿ ತಿಳಿದ ತಹಸೀಲ್ದಾರ್ ವಿಠ್ಠಲ್ ಚೌಗಲೆ ಭೇಟಿ ನೀಡಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.