ನವೆಂಬರ್‌ನೊಳಗೆ ಅಂಜನಾದ್ರಿ ಕಾಮಗಾರಿ ಮುಗಿಸಿ: ಡಿಸಿ

KannadaprabhaNewsNetwork |  
Published : Sep 22, 2025, 01:01 AM IST
21ಕೆಪಿಎಲ್21 ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ  ಅಂಜನಾದ್ರಿಯಲ್ಲಿ ಗಂಗಾವತಿ ಶಾಸಕರೊಂದಿಗೆ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ವಿವಿಧ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ ಮಾಡಿ, ನಂತರ ಪ್ರವಾಸೋದ್ಯಮ ಇಲಾಖೆಯಿಂದ ಆಯೋಜಿಸಲಾದ  ಪ್ರಗತಿ ಪರಿಶೀಲನಾ ಸಭೆ | Kannada Prabha

ಸಾರಾಂಶ

ಅಂಜನಾದ್ರಿಗೆ ಸಂಬಂಧಿಸಿದ ಕಾಮಗಾರಿಗಳ ಬಾರ್ ಚಾಟ್ ತಕ್ಷಣ ಒದಗಿಸಿ, ಈಗಾಗಲೇ ಕೈಗೊಂಡಿರುವ ಕಾಮಗಾರಿ ನವೆಂಬರ್ ಅಂತ್ಯದಲ್ಲಿ ಪೂರ್ಣಗೊಳಿಸಲು ಪ್ರಯತ್ನಿಸಬೇಕು.

ಕೊಪ್ಪಳ:

ಅಂಜನಾದ್ರಿಯಲ್ಲಿ ನಡೆಯುತ್ತಿರುವ ಎಲ್ಲ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕೆಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಸೂಚಿಸಿದರು.

ಅಂಜನಾದ್ರಿಯಲ್ಲಿ ಶಾಸಕ ಜನಾರ್ದನ ರೆಡ್ಡಿ ಅವರೊಂದಿಗೆ ಆಂಜನೇಯ ಸ್ವಾಮಿ ದೇವಸ್ಥಾನದ ವಿವಿಧ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ ಬಳಿಕ ಪ್ರವಾಸೋದ್ಯಮ ಇಲಾಖೆಯಿಂದ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಂಜನಾದ್ರಿಗೆ ಸಂಬಂಧಿಸಿದ ಕಾಮಗಾರಿಗಳ ಬಾರ್ ಚಾಟ್ ತಕ್ಷಣ ಒದಗಿಸಿ, ಈಗಾಗಲೇ ಕೈಗೊಂಡಿರುವ ಕಾಮಗಾರಿ ನವೆಂಬರ್ ಅಂತ್ಯದಲ್ಲಿ ಪೂರ್ಣಗೊಳಿಸಲು ಪ್ರಯತ್ನಿಸಬೇಕು. ಮೊದಲು ಅಂಜನಾದ್ರಿ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ಹಿಂಬದಿ ರಸ್ತೆಗಳಿಗೆ ಒತ್ತು ನೀಡಬೇಕೆಂದು ಸೂಚಿಸಿದರು.

ಬೆಟ್ಟದ ಹತ್ತಿರ ಪ್ರಗತಿಯಲ್ಲಿರುವ ಪ್ರವಾಸಿ ಮಂದಿರ ಕಾಮಗಾರಿ ವೀಕ್ಷಿಸಿ, ಡಿಸೆಂಬರ್‌ನಲ್ಲಿ ಹನುಮಮಾಲಾ ಕಾರ್ಯಕ್ರಮ ನಡೆಯಲಿದ್ದು ಪ್ರವಾಸಿಗರು ಹಾಗೂ ಭಕ್ತರ ಅನುಕೂಲಕ್ಕಾಗಿ ತ್ವರಿತಗತಿ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಹಾಗೂ ಡಾರ್ಮಿಟರಿ ಬ್ಲಾಕ್‌ಗಳಿಗೆ ಅಗತ್ಯವಿರುವ ವಿದ್ಯುತ್ ಸಂಪರ್ಕ, ಕುಡಿಯುವ ನೀರು, ಸೆಪ್ಟಿಕ್ ಟ್ಯಾಂಕ್, ಬೊರ್‌ವೇಲ್‌, ಪಾತ್ ವೇ ಕಾಮಗಾರಿಗಳಿಗೆ ಶೀಘ್ರ ಟೆಂಡರ್ ಕರೆದು ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ಹೇಳಿದರು.

ಪ್ರದಕ್ಷಿಣ ಪಥ ಹಾಗೂ ಥೀಮ್ ಆಧಾರಿತ ಮೆಟ್ಟಿಲುಗಳ ಕಾಮಗಾರಿಗಳಿಗೆ ಅಗತ್ಯವಿರುವ ಭೂಮಿಗೆ ಅರಣ್ಯ ಇಲಾಖೆಯಿಂದ ನಿರಾಕ್ಷೇಪಣ ಪತ್ರ ಪಡೆಯಲು ಎಲ್ಲ ದಾಖಲೆಯನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಪರಿಶೀಲಿಸಿದ ನಂತರ ಪರಿವೇಶ್ 2.0 ವೆಬ್‌ಸೈಟ್‌ ಮೂಲಕ ಅರ್ಜಿ ಸಲ್ಲಿಸಬೇಕು ಹಾಗೂ ಅಂಜನಾದ್ರಿ ಬೆಟ್ಟದ ಮುಖ್ಯರಸ್ತೆ ಅಗಲೀಕರಣ ಮತ್ತು ವಿದ್ಯುತ್ ಕಂಬ ಅಳವಡಿಸಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಶಾಸಕ ಜನಾರ್ದನ ರೆಡ್ಡಿ ಮಾತನಾಡಿ, ಪ್ರದಕ್ಷಿಣೆ ಪಥ, ಮೆಟ್ಟಿಲುಗಳ ವಿನ್ಯಾಸ, ನಿರ್ಮಾಣದ ಕಾರ್ಯ ಶೀಘ್ರ ಪೂರ್ಣಗೊಳಿಸಬೇಕು. ಬಳಿಕ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರಿಗೆ ಶಾಶ್ವತ ಪ್ರಸಾದ ನಿಲಯ ಹಾಗೂ ಇನ್ನಿತರೆ ಸೌಲಭ್ಯ ಒದಗಿಸಬೇಕು. ಅಂಜನಾದ್ರಿಯ ಬೆಟ್ಟ, ಪಂಪಾ ಸರೋವರ, ಆನೆಗುಂದಿಗೆ ಉತ್ತರ ಭಾರತದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಲಿದ್ದು ಅವರು ರಸ್ತೆ ಪಕ್ಕದಲ್ಲಿ ಅಡುಗೆ ಮಾಡಲು ಅಂಜನಾದ್ರಿ ಸುತ್ತಮುತ್ತ ಉಳಿದುಕೊಳ್ಳುತ್ತಾರೆ. ಅವರ ಸುರಕ್ಷತೆ ದೃಷ್ಟಿಯಿಂದ ದೇವಸ್ಥಾನಕ್ಕೆ ಸಂಪರ್ಕಿಸುವ ರಸ್ತೆಗಳ ಅಗಲೀಕರಣ ಮತ್ತು ರಸ್ತೆಯ ಪಕ್ಕದಲ್ಲಿ ವಿದ್ಯುತ್ ದೀಪ ಅಳವಡಿಸಬೇಕು ಎಂದರು.

ಬೆಟ್ಟಕ್ಕೆ ರೋಪ-ವೇ ಕಾಮಗಾರಿಯ ಡಿಪಿಆರ್ ರೆಡಿಯಾಗಿದ್ದು ಟೆಂಡರ್ ಹಂತದಲ್ಲಿದೆ. ಅದನ್ನು ಕಾರ್ಯರೂಪಕ್ಕೆ ತರಲು ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಜಿಪಂ ಸಿಇಒ ವರ್ಣಿತ್ ನೇಗಿ ಮಾತನಾಡಿ, ಭಕ್ತರಿಗೆ ತಂಗುದಾಣ, ಶಾಪಿಂಗ್ ಕಾಂಪ್ಲೆಕ್ಸ್ ಕಟ್ಟಡ ನಿರ್ಮಾಣವಾಗುತ್ತಿವೆ. ಈಗಾಗಲೇ ಕಾಮಗಾರಿ ಕೊನೆಯ ಹಂತದಲ್ಲಿದ್ದು, ಶೌಚಾಲಯ, ಟೈಲ್ಸ್ ವರ್ಕ್, ಲ್ಯಾಂಡ್‌ ಸ್ಕೇಪ್, ಗಾರ್ಡನ್ ನಿರ್ಮಾಣ, ಕಾಂಪೌಂಡ್‌, ಪೇಟಿಂಗ್ ಹಾಗೂ ಇತರೆ ಕೆಲಸಗಳಿಗೆ ಸಂಬಂಧಿಸಿದಂತೆ ಹಂತ-ಹಂತವಾಗಿ ಬಾರ್ ಚಾರ್ಟ್ ಸಿದ್ಧಪಡಿಸಿ ಶೀಘ್ರ ಮುಗಿಸಲಾಗುವುದು ಎಂದರು.

ಈ ವೇಳೆ ಉಪವಿಭಾಗಾಧಿಕಾರಿ ಕ್ಯಾ. ಮಹೇಶ ಮಾಲಗಿತ್ತಿ, ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಆಯುಕ್ತ ರಮೇಶ, ಗಂಗಾವತಿ ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ, ಪುರಾತತ್ವ ಮತ್ತು ವಸ್ತು ಪರಂಪರೆ ಸಂಗ್ರಹಾಲಯ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ನಾಯ್ಕ್, ತಹಸೀಲ್ದಾರ್‌ ಯು. ನಾಗರಾಜ, ಹುಲಿಗೆಮ್ಮದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಯಂ.ಎಚ್. ಪ್ರಕಾಶರಾವ್ ಹಾಗೂ ಸೃಷ್ಟಿ ಆರ್ಕಿಟೆಕ್ಟ್ ಮುಖ್ಯಸ್ಥ ಶ್ರೀಪಾದ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಶಂಕರಪ್ಪ ಕರ್ನಾಟಕ ರತ್ನಕ್ಕೆ ಅರ್ಹ : ಶ್ರೀ
ಮೈಸೂರು ಹೀಲಿಯಂ ಸಿಲಿಂಡರ್‌ ಸ್ಫೋಟ : ಎನ್‌ಐಎ ಭೇಟಿ