ಕನ್ನಡಪ್ರಭ ವಾರ್ತೆ ಹಾಸನ
ಪತ್ರಕರ್ತರು ವರ್ಷಕ್ಕೆ ಒಮ್ಮೆಯಾದರೂ ಇಂತಹ ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಿದ್ದು, ಆರೋಗ್ಯ ದೃಷ್ಠಿಯಿಂದ ಇಂತಹ ಕ್ರೀಡೆಯನ್ನು ಹೆಚ್ಚೆಚ್ಚು ಹಮ್ಮಿಕೊಳ್ಳಬೇಕೆಂದು ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ತಿಳಿಸಿದರು.ನಗರದ ಸಾಲಗಾಮೆ ರಸ್ತೆ ಬಳಿ ಇರುವ ಸರಕಾರಿ ಕಲಾ ಕಾಲೇಜು ಮೈದಾನದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೈಹಿಕ ಮತ್ತು ಮಾನಸಿಕ ಸ್ಥೈರ್ಯಕ್ಕೆ ಕ್ರೀಡೆ ಎಂಬುದು ಸ್ಪೂರ್ತಿ ನೀಡಲಿದೆ. ಜಿಲ್ಲೆಯ ಎಲ್ಲಾ ಪತ್ರಕರ್ತರು ಕ್ರೀಡಾಕೂಟದಲ್ಲಿ ಭಾಗವಹಿಸಿ ಕ್ರೀಡಾ ಸ್ಫೂರ್ತಿ ತೋರುತ್ತಿರುವುದು ಆರೋಗ್ಯ ದೃಷ್ಠಿಯಿಂದ ಒಳ್ಳೆಯದು. ಪ್ರತಿ ವರ್ಷ ಕ್ರೀಡಾಕೋಟ ಆಯೋಜನೆ ಮಾಡುತ್ತಿರುವ ಸಂಘದ ಕಾರ್ಯ ಶ್ಲಾಘನೀಯ. ಕ್ರೀಡಾಕೂಟ ಯಶಸ್ವಿಯಾಗಲಿ ಎಂದು ಹಾರೈಸಿದರು. ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ ಮುಖ್ಯ ಅತಿಥಿಯಾಗಿ ಮಾತನಾಡಿ, ಕ್ರೀಡೆಗಳನ್ನು ಹೆಚ್ಚೆಚ್ಚು ನಡೆಸಬೇಕು. ಇತ್ತೀಚಿನ ದಿನಗಳಲ್ಲಿ ದೈಹಿಕ ಶ್ರಮ ಇಲ್ಲವಾಗಿದೆ. ಪೋಷಕರು ಮಕ್ಕಳಿಗೆ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬೇಕು ಎಂದು ಕಿವಿಮಾತು ಹೇಳಿದರು. ನಮ್ಮ ಪೂರ್ವಜರು ಆಹಾರ ಪದ್ಧತಿಯಿಂದ ಹಿಡಿದು ದೈಹಿಕ ಶ್ರಮಕ್ಕೆ ಹೆಚ್ಚು ಮಹತ್ವ ನೀಡುತ್ತಿದ್ದರು ಆದರೆ ಇತ್ತೀಚಿನ ದಿನಗಳಲ್ಲಿ ಮನೊರಂಜನೆ ಕ್ರೀಡೆಗಳನ್ನು ದೃಶ್ಯ ಮಾಧ್ಯಮಗಳಿಂದಲೇ ನೋಡುತ್ತಾ ಕಾಲ ಕಳೆಯುವ ಹವ್ಯಾಸದಿಂದ ಹೆಚ್ಚಿನ ಮಂದಿ ಕ್ರೀಡೆಯಲ್ಲಿ ಭಾಗವಹಿಸುವುದು ಕಡಿಮೆಯಾಗಿದೆ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ರಾಜ್ಯ ಸಮಿತಿ ಸದಸ್ಯರಾದ ಎಚ್.ಬಿ. ಮದನ ಗೌಡರು ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಜಿಲ್ಲಾ ಪತ್ರಕರ್ತರ ಸಂಘದಿಂದ ಕ್ರೀಡಾಕೂಟ ಯೋಜನೆ ಮಾಡಲಾಗಿದ್ದು, ಜಿಲ್ಲಾ ಸಂಘವು ಇತ್ತೀಚೆಗೆ ಆಯೋಜಿಸಿದ್ದ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿ ಯಶಸ್ವಿಯಾಯಿತು ಮತ್ತು ಜಿಲ್ಲಾ ತಂಡವೇ ಪ್ರಥಮ ಬಹುಮಾನ ಗೆಲ್ಲುವ ಮೂಲಕ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದೆ ಎಂದು ಹೇಳಿದರು. ಹಿರಿಯ ಪತ್ರಕರ್ತ ಆರ್.ಪಿ. ವೆಂಕಟೇಶಮೂರ್ತಿ ಅವರು ಮಾತನಾಡಿ, ಜಿಲ್ಲಾ ಸಂಘವು ಕ್ರೀಡೆ ಸೇರಿದಂತೆ ಸಂಘಟನೆಯಲ್ಲಿಯೂ ಮುಂದೆ ಇದ್ದಾರೆ. ಪತ್ರಕರ್ತರಿಗೆ ವೃತ್ತಿ ಜೊತೆಗೆ ದೈಹಿಕ ಆರೋಗ್ಯದ ಬಗ್ಗೆಯೂ ಕಾಳಜಿ ಅವಶ್ಯವಾಗಿದೆ. ಇಂತಹ ಕ್ರೀಡಾಕೂಟ ಯಶಸ್ವಿಯಾಗಲಿ ಎಂದು ಶುಭಕೋರಿದರು.ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಚ್. ವೇಣುಕುಮಾರ್ ಅವರು ಮಾತನಾಡಿ, ಇತ್ತೀಚಿಗೆ ಕೆಸರು ಗದ್ದೆಯಲ್ಲಿ ವಿವಿಧ ಕ್ರೀಡಾಕೂಟ, ಬ್ಯಾಡ್ಮಿಂಟನ್ ಕ್ರೀಡಾಕೂಟ ಮಾಡಲಾಗಿತ್ತು. ಸಂಘದ ಸದಸ್ಯರ ಒತ್ತಾಯದ ಮೇರೆಗೆ ಇಂದು ಕ್ರಿಕೆಟ್ ಪಂದ್ಯಾವಳಿ ಸೇರಿದಂತೆ ಇತರೆ ಕ್ರೀಡೆಯನ್ನು ಆಯೋಜಿಸಲಾಗಿದೆ. ಎಲ್ಲರೂ ಸಕ್ರಿಯವಾಗಿ ಭಾಗವಹಿಸುವಂತೆ ತಿಳಿಸಿದ ಅವರು, ಕ್ರೀಡಾಕೂಟಗಳು ದೈಹಿಕ ಮಾನಸಿಕ ಆರೋಗ್ಯದ ಜೊತೆಗೆ ಸಂಘದ ಸಂಘಟನೆಗೂ ಪ್ರಮುಖ ಪಾತ್ರವಹಿಸಲಿದೆ. ಕ್ರಿಯಾಶೀಲವಾಗಿ ಭಾಗವಹಿಸುವಂತೆ ಕೋರಿದರು.
ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾದ ಕೆ.ಆರ್. ಮಂಜುನಾಥ್, ಲೀಲಾವತಿ, ರವಿ ನಾಗಲಗೂಡು ಮಾತನಾಡಿ, ಪತ್ರಕರ್ತರ ಕ್ರೀಡಾಕೂಟ ಪ್ರತಿ ವರ್ಷ ಏರ್ಪಡಿಸುತ್ತಾ ಬರಲಾಗಿದ್ದು, ಈ ವರ್ಷವೂ ಕೂಡ ಅತ್ಯುತ್ತಮವಾಗಿ ಏರ್ಪಡಿಸಲಾಗಿದೆ. ಕ್ರೀಡಾಕೂಡ ಯಶಸ್ವಿಯಾಗಲಿ ಎಂದು ಶುಭ ಕೋರಿದರು.ಶನಿವಾರ ಬೆಳಗಿನಿಂದಲೂ ವಿವಿಧ ಕ್ರೀಡೆಯೂ ಯಶಸ್ವಿಯಾಗೆ ನಡೆದರೂ ಕ್ರಿಕೆಟ್ ಪಂದ್ಯಾವಳಿ ವೇಳೆ ಮಳೆ ಸುರಿದಿದ್ದರಿಂದ ಸಲ್ಪ ಅಡ್ಡಿ ಉಂಟಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಸಿ. ಶಶಿಧರ್, ಖಜಾಂಚಿ ಕುಮಾರ್, ಕಾರ್ಯದರ್ಶಿ ನಟರಾಜ್, ಪಿ.ಎ. ಶ್ರೀನಿವಾಸ್, ಸಿ.ಬಿ. ಸಂತೋಷ್. ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ತಾಲ್ಲೂಕು ಸಂಘದ ಪದಾಧಿಕಾರಿಗಳು ಹಿರಿಯ, ಕಿರಿಯ ಸದಸ್ಯರು ಹಾಜರಿದ್ದರು. ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ಕೆ.ಎಮ್. ಹರೀಶ್ ಸ್ವಾಗತಿಸಿದರು. ಉಪಾಧ್ಯಕ್ಷರಾದ ಮೋಹನ್ ಕುಮಾರ್ ನಿರೂಪಿಸಿದರು.