ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಭಕ್ತ ಹಿತ ಚಿಂತನಾ ಸಭೆ । ಮುದೇನೂರು ನಿಂಗಪ್ಪಗೆ ಗವಿಶ್ರೀ ಪ್ರಶಸ್ತಿ ಪ್ರದಾನಕನ್ನಡಪ್ರಭ ವಾರ್ತೆ ಹೂವಿನಹಡಗಲಿ
ಪಟ್ಟಣದ ಶಾಖಾ ಗವಿಸಿದ್ದೇಶ್ವರ ಸ್ವಾಮಿಯ 30ನೇ ವರ್ಷದ ಜಾತ್ರೆ ಅಂಗವಾಗಿ ಸೋಮವಾರ ರಾತ್ರಿ ಆಯೋಜಿಸಿದ್ದ, ಭಕ್ತ ಹಿತ ಚಿಂತನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಯಕ ಮತ್ತು ದಾಸೋಹ ತತ್ವಗಳು ನಮ್ಮ ಆತ್ಮ ಗೌರವದ ಪ್ರತೀಕವಾಗಿವೆ. ಮಠ ಮಾನ್ಯಗಳು ಧಾರ್ಮಿಕ, ಕಾಯಕದ ಬಗ್ಗೆ ಅರಿವು ಮೂಡಿಸುವ ಜತೆಗೆ ದಾಸೋಹ ಕಾರ್ಯವನ್ನು ಮುನ್ನೆಡೆಸಿಕೊಂಡು ಬಂದಿವೆ.
ಶರಣರ ಚಿಂತನೆಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಂಡಾಗ ನೆಮ್ಮದಿಯ ಜೀವನ ನಡೆಸಲು ಸಾಧ್ಯ ಎಂದು ತಿಳಿಸಿದರು.ಸಾನ್ನಿಧ್ಯ ವಹಿಸಿದ್ದ ನಾಡೋಜ ಮುಂಡರಗಿಯ ಡಾ. ಅನ್ನದಾನೀಶ್ವರ ಸ್ವಾಮೀಜಿ ಮಾತನಾಡಿ, ಶ್ರೀಮಠದ ಲಿಂಗೈಕ್ಯ ಲಿಂಗೇಶ್ವರ ಸ್ವಾಮೀಜಿಯವರ ಆಶೋತ್ತರಗಳನ್ನು ಶ್ರೀಮಠದ ಡಾ. ಹಿರಿಶಾಂತವೀರ ಸ್ವಾಮೀಜಿ ಈಡೇರಿಸುತ್ತಿದ್ದಾರೆ. ಇವರ ಕರ್ತೃತ್ವ ಶಕ್ತಿ ಮತ್ತು ಭಕ್ತರ ಸಹಕಾರದಿಂದ ಎಲ್ಲ ಶಾಖಾ ಮಠಗಳು ಜಾಗೃತಗೊಂಡಿವೆ ಎಂದ ಅವರು, ಪ್ರತಿಯೊಬ್ಬರು ಧರ್ಮಪ್ರಜ್ಞೆ ಬೆಳೆಸಿಕೊಂಡು ಮೋಕ್ಷ ಪಡೆಯಬೇಕೆಂದು ಹೇಳಿದರು.
ಕೃತಕ ಬುದ್ದಿಮತ್ತೆ (ಎಐ) ತಂತ್ರಜ್ಞಾನವನ್ನು ನಾವು ಈಗ ಸಂಭ್ರಮಿಸುತ್ತೇವೆ. ಆದರೆ, ಅದು ನಮ್ಮ ಬುದ್ದಿಶಕ್ತಿಯನ್ನು ಕುಬ್ಜಗೊಳಿಸುತ್ತದೆ. ಮನುಷ್ಯನ ಮೆದುಳಿನ ಮೇಲೆ ತನ್ನ ಅಧಿಕಾರ ಸ್ಥಾಪಿಸಲಿದೆ. ದುಡಿಯುವ ಶ್ರಮ ಕಡಿಮೆಗೊಳಿಸಿ ಹಲವರ ಉದ್ಯೋಗ ಕಸಿಯಲಿದೆ. ಮುಂದಿನ ಪೀಳಿಗೆಗೆ ಇದು ಕಂಟಕವಾಗಲಿದೆ ಎಂದರು.
ಇಲ್ಲಿನ ಶಾಖಾ ಗವಿಸಿದ್ದೇಶ್ವರ ಮಠದ 30ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಸಾಧಕರಿಗೆ ಶ್ರೀಮಠದಿಂದ ನೀಡುವ ಗವಿಶ್ರೀ ಪ್ರಶಸ್ತಿಯನ್ನು ಈ ಬಾರಿ ಧಾರವಾಡದ ಕವಿವಿ ಡಾ. ಆರ್.ಸಿ ಹಿರೇಮಠ ಕನ್ನಡ ಅಧ್ಯಾಯನ ಪೀಠದ ಸಹಾಯಕ ಪ್ರಧ್ಯಾಪಕ ಡಾ. ಮುದೇನೂರು ನಿಂಗಪ್ಪ ಇವರಿಗೆ ನೀಡಿ ಗೌರವಿಸಲಾಯಿತು.
ಭಕ್ತಿಸೇವೆ ಸಲ್ಲಿಸಿದ ಭಕ್ತರಿಗೆ ಗುರುರಕ್ಷೆ ನೀಡಲಾಯಿತು. ಗವಿಶ್ರೀ ಅಕ್ಕನ ಬಳಗದವರಿಂದ ಸುಧಾಮ ಕೃಷ್ಣರ ಗೆಳೆತನ ಕಿರುನಾಟಕ ಪ್ರದರ್ಶನ ಮಾಡಿದರು.