ಭಾಷೆ ಗೌರವಿಸಿ ಅನ್ಯರಿಗೂ ಕನ್ನಡ ಕಲಿಸೋಣ: ಶಾಸಕ ಎಂ.ಆರ್.ಮಂಜುನಾಥ್ ಅಭಿಮತ

KannadaprabhaNewsNetwork | Updated : Nov 02 2024, 01:22 AM IST

ಸಾರಾಂಶ

ಕನ್ನಡ ನಾಡು ನುಡಿ ಭಾಷೆಯನ್ನು ಗೌರವಿಸುವ ಜತೆಗೆ ಅನ್ಯ ಭಾಷಿಕರನ್ನು ಪ್ರೀತಿ ವಿಶ್ವಾಸದಿಂದ ಕಾಣುವ ಮೂಲಕ ಅವರಿಗೂ ಕನ್ನಡ ಭಾಷೆ ಕಲಿಸೋಣ ಎಂದು ಶಾಸಕ ಎಂ.ಆರ್.ಮಂಜುನಾಥ್ ಅಭಿಮತ ವ್ಯಕ್ತಪಡಿಸಿದರು. ಹನೂರಿನಲ್ಲಿ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿದರು.

ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಹಬ್ಬ

ಕನ್ನಡಪ್ರಭ ವಾರ್ತೆ ಹನೂರು

ಕನ್ನಡ ನಾಡು ನುಡಿ ಭಾಷೆಯನ್ನು ಗೌರವಿಸುವ ಜತೆಗೆ ಅನ್ಯ ಭಾಷಿಕರನ್ನು ಪ್ರೀತಿ ವಿಶ್ವಾಸದಿಂದ ಕಾಣುವ ಮೂಲಕ ಅವರಿಗೂ ಕನ್ನಡ ಭಾಷೆ ಕಲಿಸೋಣ ಎಂದು ಶಾಸಕ ಎಂ.ಆರ್.ಮಂಜುನಾಥ್ ಅಭಿಮತ ವ್ಯಕ್ತಪಡಿಸಿದರು.

ಪಟ್ಟಣದ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಆಯೋಜಿಸಲಾಗಿದ್ದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗಡಿ ತಾಲೂಕು ಆಗಿರುವ ಹನೂರು ಭಾಗದಲ್ಲಿ ಅನ್ಯ ಭಾಷಿಕರು ಹೆಚ್ಚಾಗಿದ್ದು, ನಮ್ಮ ಕನ್ನಡ ನಾಡಿನ ಆಚಾರ ವಿಚಾರ ಭಾವನೆಗಳಿಗೆ ಹೊಂದಿಕೊಂಡು ಸಹಬಾಳ್ವೆಯಿಂದ ಬದುಕುತ್ತಿದ್ದಾರೆ. ಈ ಪ್ರದೇಶದಲ್ಲಿ ಕನ್ನಡ ಭಾಷೆಯ ಅಥಿತ್ವವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮದಾಗಿದೆ. ಹನೂರು ತಾಲೂಕಿನಲ್ಲಿ ಕನ್ನಡ ರಾಜ್ಯೋತ್ಸವ ದಿನಾಚರಣೆ ಆಚರಿಸುತ್ತಿರುವುದು ನಾಡಿನ ಎಲ್ಲಾ ಇತರೆ ಭಾಗಗಳಿಗೂ ಮಾದರಿಯಾಗುತ್ತಿದೆ ಎಂದರು.

ಕನ್ನಡ ನಾಡು, ನುಡಿ, ಸಂಸ್ಕೃತಿ ಭಾಷೆಗಾಗಿ ಶ್ರಮಿಸಿದ ಹಲವಾರು ಅಗ್ರಗಣ್ಯ ಹೋರಾಟಗಾರರು, ಕವಿಗಳು, ಸಾಹಿತ್ಯ ಚಿಂತಕರನ್ನು ಸ್ಮರಣೆ ಮಾಡುವ ಅಗತ್ಯವಿದೆ. ಅವರ ಹೋರಾಟದ ಫಲವಾಗಿ ಕನ್ನಡ ಭಾಷೆಗೆ ವಿಶ್ವಮಾನ್ಯತೆ ದೊರಕಿದೆ ಎಂದರು.

ಶಿಕ್ಷಕ ಶಿವಣ್ಣ ಇಂದ್ವಾಡಿ ರವರು ಮಾತನಾಡಿ, ಕನ್ನಡ ನೆಲ ಬೇರೆ ಬೇರೆ ಕಡೆಗಳಲ್ಲಿ ಹಂಚಿ ಹೋಗಿದ್ದನ್ನು ಒಗ್ಗೂಡಿಸಿ 1956 ನ.1 ರಲ್ಲಿ ಭಾಷಾವಾರು ಪ್ರಾಂತ್ಯಗಳಲ್ಲಿ ಮೈಸೂರು ರಾಜ್ಯ ಉದಯವಾದ ಸವಿನೆನಪಿಗಾಗಿ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. 1973ರಲ್ಲಿ ಮೈಸೂರು ರಾಜ್ಯವನ್ನು ಅಖಂಡ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು.

ಕರ್ನಾಟಕದ ಭೌಗೋಳಿಕತೆ, ಸಾಂಸ್ಕೃತಿಕತೆಯ ಪರಂಪರೆಯನ್ನು ಉಳಿಸಿ ಬಳಸಿ ಬೆಳೆಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ. ಕನ್ನಡ ಸಾಹಿತ್ಯ ಸಕಲರಿಗೂ ಲೇಸನ್ನೇ ಬಯಸುತ್ತದೆ. ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ಕಾವಲು ಪಡೆ, ಕರುನಾಡ ಸೇನೆ ಮುಂತಾದ ಸಂಘಟನೆಗಳು ಕನ್ನಡ ಭಾಷೆ ನೆಲ ಜಲದ ಉಳಿವಿಗಾಗಿ ಹೋರಾಡುತ್ತ ನಮ್ಮ ಅಸ್ಮಿತಿಯನ್ನು ಉಳಿಸಿಕೊಂಡು ಬೆಳೆಸುವ ಜವಾಬ್ದಾರಿಯುತ ಕೆಲಸ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು.

ಕನ್ನಡ ಭಾಷೆಯಲ್ಲಿ ಗರಿಷ್ಠ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು. ಪಟ್ಟಣದ ವಿವಿಧ ಶಾಲೆಯ ಮಕ್ಕಳು ಕನ್ನಡ ಭಾವೈಕ್ಯತೆ ಸಾರುವ ಗೀತೆಗಳಿಗೆ ಅದ್ಬುತವಾದ ನೃತ್ಯ ಪ್ರದರ್ಶನ ಮಾಡಿದರು.

ಹನೂರು ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಮಮ್ತಾಜ್ ಬಾನು, ಉಪಾಧ್ಯಕ್ಷ ಆನಂದ್ ಕುಮಾರ್, ತಹಸೀಲ್ದಾರ್ ಗುರುಪ್ರಸಾದ್, ಇಒ ಉಮೇಶ್, ಬಿಇಒ ಗುರುಲಿಂಗಯ್ಯ, ಪಂಚಾಯಿತಿ ಸದಸ್ಯರಾದ ಸುದೇಶ್, ಸೋಮಶೇಖರ್, ಸಂಪತ್ ಕುಮಾರ್, ಮಹೇಶ್, ನಂಜಮ್ಮಣ್ಣಿ, ಕನ್ನಡಪರ ಹೋರಾಟಗಾರ ವಿನೋದ್, ಶಿಕ್ಷಕರಾದ ಶ್ರೀನಿವಾಸ್ ನಾಯ್ಡು, ಅಶೋಕ್ ಸೇರಿದಂತೆ ಕಂದಾಯ ಇಲಾಖೆಯ ಸಿಬ್ಬಂದಿ ಇದ್ದರು.

Share this article