ಹೊಸಪೇಟೆ: ಭಾರತ ದೇಶವನ್ನು ಅನಾದಿ ಕಾಲದಿಂದಲೂ ಮುನ್ನಡೆಸಿದ್ದು ರೈತರು ಎಂಬುದನ್ನು ಮರೆಯಬಾರದು. ಅನ್ನದಾತರ ಸಮಸ್ಯೆಗಳಿಗೆ ಪ್ರತಿಯೊಬ್ಬರು ಸ್ಪಂದಿಸಬೇಕು. ಬೆಂಬಲ ಬೆಲೆ ಹೋರಾಟಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಹುಡಾ ಅಧ್ಯಕ್ಷ ಎಚ್.ಎನ್. ಮುಹಮ್ಮದ್ ಇಮಾಮ್ ನಿಯಾಜಿ ಹೇಳಿದರು.
ಗರಗನಾಗಲಾಪುರದ ಒಪ್ಪತ್ತೇಶ್ವರ ಮಠದ ನಿರಂಜನಪ್ರಭು ದೇಶಿಕರು ಸಾನ್ನಿಧ್ಯ ವಹಿಸಿದ್ದರು. ರೈತ ಸಂಘದ ರಾಜ್ಯಾಧ್ಯಕ್ಷ ವಾಸುದೇವ ಮೇಟಿ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಸಿ.ಎ. ಗಾಳೆಪ್ಪ, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಎಲ್. ರಾಣಿ ಸಂಯುಕ್ತ, ಮುಖಂಡರಾದ ವಸಂತಕುಮಾರ್, ವೆಂಕಟೇಶ ಹಾಗೂ ರೈತ ಸಂಘ ಜಿಲ್ಲಾ ಹಾಗೂ ತಾಲೂಕು ಮಟ್ಟದ ಪದಾಧಿಕಾರಿಗಳು ಇದ್ದರು.
ಭವ್ಯ ಮೆರವಣಿಗೆ: ನಗರದ ವಡಕರಾಯ ದೇವಸ್ಥಾನದ ಬಳಿ ನೇಗಿಲುಪೂಜೆ ಮಾಡುವ ಮೂಲಕ ರೈತ ಸಮಾವೇಶ ನಿಮಿತ್ತ ಹಮ್ಮಿಕೊಂಡಿದ್ದ ಭವ್ಯ ಮೆರವಣಿಗೆಗೆ ಎಸ್ಪಿ ಎಸ್. ಜಾಹ್ನವಿ ಚಾಲನೆ ನೀಡಿದರು. ಈ ವೇಳೆ ಡಿವೈಎಸ್ಪಿ ಡಾ. ಮಂಜುನಾಥ ತಳವಾರ, ಹುಡಾ ಅಧ್ಯಕ್ಷ ಇಮಾಮ್ ಇದ್ದರು. ಈ ಮೆರವಣಿಗೆ ನಗರದ ಮೇನ್ ಬಜಾರ್, ಪಾದಗಟ್ಟೆ ಆಂಜನೇಯ ದೇವಸ್ಥಾನ, ದರ್ಗಾ ಮಸೀದಿ, ಅಂಬೇಡ್ಕರ್ ವೃತ್ತ, ಕಾಲೇಜ್ ರಸ್ತೆ ಮೂಲಕ ಸಾಗಿ ಬಂದಿತು. 101 ಕಳಸಗಳನ್ನು ಹೊತ್ತ ಯುವತಿಯರು ಮೆರವಣಿಗೆಯಲ್ಲಿ ಸಾಗಿದರು. 21 ಜೋಡಿ ಎತ್ತಿನ ಬಂಡಿ, ಡೊಳ್ಳು, ಕೋಲಾಟ, ಭಜನೆ, ವಿವಿಧ ಕಲಾ ಸಾಂಸ್ಕೃತಿಕ ಜಾನಪದ ತಂಡದ ಜೊತೆಗೆ ಸಂಭ್ರಮಾಚರಣೆಯೊಂದಿಗೆ ಜಿಲ್ಲಾ ಒಳಾಂಗಣ ಕ್ರೀಡಾಂಗಣಕ್ಕೆ ತಲುಪಿತು.