ಮಕ್ಕಳ ಎದೆಯಲ್ಲಿ ವ್ಯಸನ ಮುಕ್ತ ಸಮಾಜದ ಕನಸು ಬಿತ್ತೋಣ: ಗವಿಸಿದ್ಧೇಶ್ವರ ಶ್ರೀ

KannadaprabhaNewsNetwork |  
Published : Jun 27, 2025, 12:48 AM IST
ಹೊಸಪೇಟೆಯ ಡಾ. ಪುನೀತ್ ರಾಜಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗವಿಶ್ರೀಗಳು ಆಶೀರ್ವಚನ ನೀಡಿದರು.ಕಾರ್ಯಕ್ರಮದಲ್ಲಿ ನಟ ಅಜಯ್‌ರಾವ್ ಮಾತನಾಡಿದರು.ಪಾರಿವಾಳ ಹಾರಿ ಬಿಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. | Kannada Prabha

ಸಾರಾಂಶ

ಸ್ವಾಸ್ಥ್ಯ, ಸುಂದರ ಸಮಾಜ ನಿರ್ಮಿಸಲು ವ್ಯಸನ ಮುಕ್ತ ಸಮಾಜದ ಕನಸನ್ನು ಮಕ್ಕಳ ಎದೆಯಲ್ಲಿ ಬಿತ್ತಬೇಕಾದ ಅನಿವಾರ್ಯತೆ ಇದೆ.

ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಹೊಸಪೇಟೆಸ್ವಾಸ್ಥ್ಯ, ಸುಂದರ ಸಮಾಜ ನಿರ್ಮಿಸಲು ವ್ಯಸನ ಮುಕ್ತ ಸಮಾಜದ ಕನಸನ್ನು ಮಕ್ಕಳ ಎದೆಯಲ್ಲಿ ಬಿತ್ತಬೇಕಾದ ಅನಿವಾರ್ಯತೆ ಇದೆ ಎಂದು ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅಭಿಪ್ರಾಯಿಸಿದರು.ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಮತ್ತು ನಗರಸಭೆ ಸಹಯೋಗದಲ್ಲಿ ಗುರುವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.ದುಶ್ಚಟಗಳಿಗೆ ದಾಸರಾಗುವ ಮುನ್ನ ಕೌಟುಂಬಿಕ ಜವಾಬ್ದಾರಿಗಳನ್ನು ಅರಿತು ಮಾದಕ ವಸ್ತುಗಳಿಂದ ದೂರವಿರುವ ಸಂಕಲ್ಪ ಮಾಡಬೇಕಿದೆ. ಹಾಗಾದಾಗ ಮಾತ್ರವೇ ವ್ಯಸನ ಮುಕ್ತ ಸಮಾಜ ನಿರ್ಮಾಣದ ಕನಸು ನನಸಾಗಬಹುದು. ಮಕ್ಕಳು ನಿಮ್ಮ ಕುಟುಂಬದಲ್ಲಿನ ವ್ಯಸನಿಗಳಿಗೆ ಅವರನ್ನು ಕೈ ಮುಗಿದು ದುಶ್ಚಟಗಳನ್ನು ಬಿಡುವಂತೆ ಮನವೊಲಿಕೆಗೆ ಪ್ರಯತ್ನಿಸಬೇಕು. ದೇವರಷ್ಟೇ ಪವಿತ್ರವಾದ ಮಕ್ಕಳ ಮಾತು, ಮಕ್ಕಳ ಭಾವನಾತ್ಮಕತೆಗೆ ದುಶ್ಚಟಗಳನ್ನು ಬಿಟ್ಟಿರುವ ಉದಾಹರಣೆಗಳಿವೆ. ಮುಂದಿನ ಭವಿಷ್ಯಕ್ಕೆ ವ್ಯಸನ ಮುಕ್ತ ಸಮಾಜ ನಿರ್ಮಾಣದ ಭರವಸೆಯನ್ನು ಇಂದಿನ ಮಕ್ಕಳಿಂದ ಮಾತ್ರ ಸಾಕಾರ ಸಾಧ್ಯವಾಗಲಿದೆ. ಮಕ್ಕಳು ತಂದೆ-ತಾಯಿಯರ ಆಸ್ತಿ ಪಾಲುದಾರರಾಗುವ ಬದಲಾಗಿ ಅವರ ಆದರ್ಶಗಳಿಗೆ ಪಾಲುದಾರರಾಗಬೇಕಿದೆ. ಗುಟ್ಕಾ, ತಂಬಾಕು, ಇಸ್ಪೀಟ್ ಸೇರಿದಂತೆ ಯಥೇಚ್ಛಾ ಮೊಬೈಲ್ ಬಳಕೆಯು ಡ್ರಗ್ಸ್‌ಗೆ ಸಮಾನವಾಗಿದೆ. ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಕೇವಲ ಸರ್ಕಾರವಷ್ಟೇ ಅಲ್ಲ, ಸಂಘ-ಸಂಸ್ಥೆಗಳು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.ಚಿತ್ರನಟ ಅಜಯ್‌ರಾವ್ ಮಾತನಾಡಿ, ಇಂದಿನ ಮಕ್ಕಳಲ್ಲಿ ವಿಶ್ವದ ಭವಿಷ್ಯವಿದೆ. ಬದುಕಿನ ಪಯಣದಲ್ಲಿ ಒಳ್ಳೆಯದು, ಕೆಟ್ಟದ್ದು ಎರಡು ಇರುತ್ತೇ ಆದರೆ ವಿವೇಚನೆಯಿಂದ ಸರಿಯಾದ ಆಯ್ಕೆ ಮಾಡಿಕೊಳ್ಳುತ್ತೇವೆ. ಅದರಂತೆ ಮಾದಕ ವಸ್ತುಗಳ ಬಳಕೆಯು ಅಷ್ಟೇ. ಪ್ರತಿ ಮಾದಕ ವಸ್ತುಗಳ ಪ್ಯಾಕೇಟ್‌ನಲ್ಲಿ ಆರೋಗ್ಯಕ್ಕೆ ಹಾನಿಕಾರಕ ಎಂದು ಮುದ್ರಿಸಿದರೂ ಬಳಸುವರ ಸಂಖ್ಯೆ ಕಡಿಮೆಯಾಗಿಲ್ಲ. ವಿದ್ಯಾರ್ಥಿಗಳು ನಿಮ್ಮ ಇಷ್ಟದ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಗುರಿ ತಲುಪಲು ಶ್ರಮಿಸಬೇಕು. ಮುಂದಿನ ಸಧೃಡ ಭವಿಷ್ಯಕ್ಕಾಗಿ ಮಾದಕ ವಸ್ತುಗಳಿಂದ ದೂರವಿರಿ. ಇನ್‌ಸ್ಟ್ರಾಗ್ರಾಮ್, ಫೇಸ್‌ಬುಕ್, ವಾಟ್ಸ್‌ಆ್ಯಪ್‌ನಂತಹ ಅಂತರ್ಜಾಲಗಳನ್ನು ಬಳಕೆ ಮಾಡುವಾಗ ಎಚ್ಚರವಿರಲಿ. ಒಳ್ಳೆಯ ಮಾಹಿತಿ ಪಡೆಯಲು ಅಷ್ಟೇ ಮೊಬೈಲ್ ಬಳಸಿ ಎಂದು ಸಲಹೆ ನೀಡಿದರು.ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ಬಿ.ಎಲ್. ಶ್ರೀಹರಿಬಾಬು ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವಕರಲ್ಲಿ ಮಾದಕ ವಸ್ತುಗಳ ಮೇಲಿನ ಸೆಳೆತ ಹೆಚ್ಚು. ಹಾಗಾಗಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಕಾರ್ಯಕ್ರಮ ಆಯೋಜಿಸಲಾಗಿದೆ. ಮಾದಕ ವಸ್ತುಗಳ ಬಳಕೆಯಿಂದಾಗಿ ಮಾನಸಿಕ ಮತ್ತು ದೈಹಿಕವಾಗಿ ದುಷ್ಪಾರಿಣಾಮಗಳು ಹೆಚ್ಚಾಗಲಿವೆ. ಈ ಕಾರ್ಯಕ್ರಮದಿಂದಾಗಿ ಮಕ್ಕಳಲ್ಲಿ ಪರಿವರ್ತನೆ ಮೂಡಿಸುವ ಉದ್ದೇಶ ನಮ್ಮದಾಗಿದೆ. ಅಕ್ರಮವಾಗಿ ಮದ್ಯ ಮಾರಾಟ ಹಾಗೂ ಮಾದಕ ವಸ್ತುಗಳ ಮಾರಾಟ ಮಾಡುವುದು, ಯಾವುದೇ ವ್ಯಕ್ತಿ ಸಾರ್ವಜನಿಕವಾಗಿ ಮದ್ಯ, ಮಾದಕ ವಸ್ತುಗಳ ಸೇವನೆ ಮಾಡುವುದು ಕಂಡು ಬಂದಲ್ಲಿ ಪೊಲೀಸ್ ಸಹಾಯವಾಣಿ ಸಂಖ್ಯೆ 112 ಕರೆ ಮಾಡಿ ತಿಳಿಸಬಹುದು ಎಂದರು.ಇದೇ ವೇಳೆ ರಂಗಲೋಕ ಕಲಾ ಸಂಸ್ಥೆಯ ಕಲಾವಿದರು ನಾಟಕದ ಮೂಲಕ ಹಾಗೂ ಕಲಾವಿದ ಜೋಗಿ ತಾಯಪ್ಪ ಅವರು ಕಿರು ಚಿತ್ರ ಪ್ರದರ್ಶನದ ಮೂಲಕ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು.ನಗರಸಭೆ ಅಧ್ಯಕ್ಷ ಎನ್.ರೂಪೇಶ್ ಕುಮಾರ್, ಡಿಡಿಪಿಯು ನೋಡಲ್ ಅಧಿಕಾರಿ ನಾಗರಾಜ ಹವಾಲ್ದಾರ್, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಜಂಬಯ್ಯ, ಡ್ರಗ್ಸ್ ನಿಯಂತ್ರಣಾಧಿಕಾರಿ ಜಿ.ವಿ. ನಾರಾಯಣ ರೆಡ್ಡಿ, ಪ್ರಕಾಶ ಶಾನುಬಾಗ್, ಡಿವೈಎಸ್ಪಿ ಮಂಜುನಾಥ ಸೇರಿದಂತೆ ನಾನಾ ಶಾಲಾ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನರೇಗಾ ಮರುಜಾರಿವರೆಗೆ ಹೋರಾಟ : ಸಿಎಂ ಸಿದ್ದರಾಮಯ್ಯ
ಡ್ರಗ್ಸ್‌ ವಿರುದ್ಧ ಸಿಎಂ ತವರಿಂದಲೇ ಹೋರಾಟ : ವಿಜಯೇಂದ್ರ