ಅಂಗವಿಕಲರು, ಹಿರಿಯ ನಾಗರಿಕರ ಬಗ್ಗೆ ಕಾಳಜಿ ಹೊಂದೋಣ: ಸಂಸದ ತುಕಾರಾಂ

KannadaprabhaNewsNetwork |  
Published : Jan 15, 2026, 02:45 AM IST
12ಎಚ್‌ಪಿಟಿ2- ಹೊಸಪೇಟೆಯಲ್ಲಿ ಸೋಮವಾರ ನಡೆದ ಅಂಗವಿಕಲರು ಮತ್ತು ಹಿರಿಯ ನಾಗರಿಕರಿಗೆ ತ್ರಿ-ಚಕ್ರ ವಾಹನ, ಶ್ರವಣದೋಷ ಸಾಧನಗಳು ಸೇರಿದಂತೆ ವಿವಿಧ ಸಲಕರಣೆಗಳ ವಿತರಣಾ ಕಾರ್ಯಕ್ರಮವನ್ನು ಸಂಸದ ಈ. ತುಕಾರಾಂ ಉದ್ಘಾಟಿಸಿದರು.   | Kannada Prabha

ಸಾರಾಂಶ

₹85 ಲಕ್ಷ ಮೊತ್ತದ ತ್ರಿ-ಚಕ್ರ ವಾಹನ, ಶ್ರವಣದೋಷ ಸಾಧನಗಳು ಸೇರಿದಂತೆ ವಿವಿಧ ಸಲಕರಣೆಗಳನ್ನು 1082 ಫಲಾನುಭವಿಗಳಿಗೆ ವಿತರಣೆ ಮಾಡಲಾಗುತ್ತಿದೆ.

ಹೊಸಪೇಟೆ: ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಬಡವರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವೆ. ಅಂಗವಿಕಲರು, ಹಿರಿಯ ನಾಗರಿಕರ ಬಗ್ಗೆ ಕಾಳಜಿ ಹೊಂದಬೇಕಿದೆ. ಇದಕ್ಕಾಗಿ ₹85 ಲಕ್ಷ ಮೊತ್ತದ ತ್ರಿ-ಚಕ್ರ ವಾಹನ, ಶ್ರವಣದೋಷ ಸಾಧನಗಳು ಸೇರಿದಂತೆ ವಿವಿಧ ಸಲಕರಣೆಗಳನ್ನು 1082 ಫಲಾನುಭವಿಗಳಿಗೆ ವಿತರಣೆ ಮಾಡಲಾಗುತ್ತಿದೆ ಎಂದು ಸಂಸದ ಈ. ತುಕಾರಾಂ ಹೇಳಿದರು.ಸಾಮಾಜಿಕ ಅಧಿಕಾರಿತ ಶಿಬಿರ ಮತ್ತು ರಾಷ್ಟ್ರೀಯ ವಯೋಶ್ರೀ ಯೋಜನೆಯಡಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಅಂಗವಿಕಲರ ಕಲ್ಯಾಣ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಅಂಗವಿಕಲರು ಮತ್ತು ಹಿರಿಯ ನಾಗರಿಕರಿಗೆ ತ್ರಿ-ಚಕ್ರ ವಾಹನ, ಶ್ರವಣದೋಷ ಸಾಧನಗಳು ಸೇರಿದಂತೆ ವಿವಿಧ ಸಲಕರಣೆಗಳ ವಿತರಣಾ ಕಾರ್ಯಕ್ರಮವನ್ನು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಉದ್ಘಾಟಿಸಿ ಮಾತನಾಡಿದರು.

ಸಂಸದರ ನಿಧಿಯಿಂದ ವಾರ್ಷಿಕ ಐದು ಕೋಟಿ ರು. ಅನುದಾನ ಬರುತ್ತಿದ್ದು, ಎಲ್ಲಾ ತಾಲೂಕುಗಳಿಗೂ ಸಮಾನ ಹಂಚಿಕೆ ಮಾಡುತ್ತಿರುವೆ. ಪ್ರತಿ ತಾಲೂಕುಗಳಿಗೂ ₹80 ಲಕ್ಷ ಈಗಾಗಲೇ ಅನುದಾನ ಹಂಚಿಕೆ ಮಾಡಿರುವೆ ಎಂದರು.

ಬಡವರು, ಅಂಗವಿಕಲರು, ದುರ್ಬಲರ ಕಷ್ಟ ಕಾರ್ಪಣ್ಯಗಳು ದೂರಾಗಬೇಕಿದೆ. ಇದೊಂದು ಹೃದಯಸ್ಪರ್ಶಿ ಕಾರ್ಯಕ್ರಮ ಆಗಿದೆ. ಇಂತಹ ಕಾರ್ಯಕ್ರಮಗಳನ್ನು ರಾಜಕಾರಣಿಗಳು ಸೇರಿದಂತೆ ಅಧಿಕಾರಿಗಳು ಎಲ್ಲರೂ ಜೊತೆಗೂಡಿ ಮಾಡಬೇಕಿದೆ. ಇದರಿಂದ ಸರ್ಕಾರದ ಯೋಜನೆಗಳು ಸಫಲ ಆಗಲಿವೆ ಎಂದರು.

ಸಂಸದ ಆದ ಬಳಿಕ ಉಭಯ ಜಿಲ್ಲೆಗಳ ಅಭಿವೃದ್ಧಿಗೆ ಕಂಕಣಬದ್ಧವಾಗಿ ಕೆಲಸ ಮಾಡುತ್ತಿರುವೆ. ಈಗಾಗಲೇ ಕೇಂದ್ರ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರ ಜೊತೆಗೆ ಚರ್ಚಿಸಿ, ಹೆದ್ದಾರಿ ಕಾಮಗಾರಿಗಳ ಅನುಷ್ಠಾನಕ್ಕೆ ಯೋಜನೆ ರೂಪಿಸಲಾಗಿದೆ. ರೈಲ್ವೆ ಸಚಿವ ವಿ. ಸೋಮಣ್ಣ ಜೊತೆಗೂಡಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. 14 ಅಂಚೆ ಕಚೇರಿಗಳನ್ನು ಹೊಸದಾಗಿ ಮಂಜೂರು ಮಾಡಿಸಲಾಗಿದೆ. ಎಲ್ಲೆಲ್ಲಿ ಬಿಎಸ್‌ಎನ್‌ಎಲ್‌ ನೆಟ್‌ ವರ್ಕ್‌ ಬರುವುದಿಲ್ಲ ಅವುಗಳನ್ನು ಗುರುತಿಸಿ ಜಿಲ್ಲಾಧಿಕಾರಿಯವರು ನೀಡಿದರೆ ಕ್ರಮ ಕೈಗೊಳ್ಳುವೆ ಎಂದರು.

ಶಿಕ್ಷಣ, ಆರೋಗ್ಯ ವಲಯಕ್ಕೂ ಒತ್ತು ನೀಡಿರುವೆ. ಹೈಸ್ಕೂಲ್‌ಗಳಲ್ಲಿ ಸ್ಮಾರ್ಟ್‌ ಕ್ಲಾಸ್‌ಗಳಿಗಾಗಿ ಒತ್ತು ನೀಡಿದ್ದು, ತಲಾ ಏಳು ಲಕ್ಷ ರು. ಅನುದಾನ ಒದಗಿಸುತ್ತಿರುವೆ. ಆರೋಗ್ಯ ಕ್ಷೇತ್ರಕ್ಕೂ ಹೆಚ್ಚಿನ ಒತ್ತು ನೀಡಿರುವೆ ಎಂದರು.

ಬಾಲ್ಯ ವಿವಾಹ ತಡೆಗಟ್ಡಲು ಕ್ರಮವಹಿಸಬೇಕು ಎಂದರು.

ಅಪೌಷ್ಟಿಕತೆಯಿಂದ ಬಳಲುವವರನ್ನು ಗುರುತಿಸಿ ಕ್ರಮ ಕೈಗೊಳ್ಳಬೇಕು. ಅಧಿಕಾರ ಶಾಶ್ವತ ಅಲ್ಲ, ಎಂಬುದನ್ನು ಮನಗಂಡು ಎಲ್ಲರೂ ಕಾರ್ಯನಿರ್ವಹಿಸಬೇಕು ಎಂದು ಸೂಚ್ಯವಾಗಿ ಹೇಳಿದರು.

ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ ಮಾತನಾಡಿ, ಸರ್ಕಾರದ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕು. ದೈಹಿಕ ನ್ಯೂನತೆ ಇರಬಹುದು. ಇದಕ್ಕೆ ಎದೆಗುಂದದೇ ಮಾನಸಿಕ ಸದೃಢತೆಯೊಂದಿಗೆ ಮುನ್ನಡೆಯಬೇಕು ಎಂದರು.

ಹುಡಾ ಅಧ್ಯಕ್ಷ ಎಚ್‌ಎನ್‌ಎಫ್‌ ಇಮಾಮ್‌ ಜಿಯಾಜಿ, ನಗರಸಭೆ ಅಧ್ಯಕ್ಷ ರೂಪೇಶ್‌ ಕುಮಾರ ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಎಸ್‌. ಶ್ವೇತಾ ಪ್ರಾಸ್ತಾವಿಕ ಮಾತನಾಡಿದರು. ಜಿಪಂ ಉಪ ಕಾರ್ಯದರ್ಶಿ ತಿಮ್ಮಪ್ಪ, ಕೇಂದ್ರದ ಅಧಿಕಾರಿ ಸರ್ಕಾರ್‌, ನಗರಸಭೆ ಸದಸ್ಯರಾದ ರಾಘವೇಂದ್ರ, ಬಿ. ನಾರಾಯಣಪ್ಪ, ಎಚ್.ಕೆ. ಮಂಜುನಾಥ, ಕನಕಮ್ಮ, ಮುನ್ನಿ ಕಾಸಿಂ, ಮುಖಂಡರಾದ ಎಲ್. ಸಿದ್ದನಗೌಡ, ಹಾಲಪ್ಪ, ವಿನಾಯಕ ಶೆಟ್ಟರ್, ಡಿ. ವೆಂಕಟರಮಣ, ಬಿ.‌ಮಾರೆಣ್ಣ, ದಾದಾಪೀರ್ ಮತ್ತಿತರರಿದ್ದರು. ಚಿದಾನಂದ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಕ್ಷ್ಮೀವರ ತೀರ್ಥರ ಕನಸಿನ ಸ್ವಾಗತ ಗೋಪುರ ನಿರ್ಮಾಣ: ಯಶ್ಪಾಲ್‌
ಮಕ್ಕಳಲ್ಲಿ ನೊಂದವರಿಗೆ ಸಹಾಯ ಮಾಡುವ ಗುಣ ಬೆಳೆಸಿ: ಕುಮಾರಸ್ವಾಮಿಗಳು