ಧಾರವಾಡ:
ಆಲ್ ಇಂಡಿಯಾ ಡೆಮೊಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ವತಿಯಿಂದ ಇಲ್ಲಿಯ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಗುರುವಾರ ಹಮ್ಮಿಕೊಳ್ಳಲಾದ ಮಹಿಳೆಯರ ಘನತೆ ಮತ್ತು ಮಾನವ ಮೌಲ್ಯ ಉಳಿಸೋಣ ಯುವಜನರ ಸಂಕಲ್ಪ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ದೆಹಲಿಯಲ್ಲಿ ನಡೆದ ನಿರ್ಭಯ ಘಟನೆಯ ಸಂದರ್ಭದಲ್ಲಿ ಇಡೀ ದೇಶವೇ ಎಚ್ಚೆತ್ತುಕೊಂಡು ಪ್ರತಿಭಟನೆ ನಡೆಸಿತ್ತು. ಅದೇ ರೀತಿ ಇಂದು ಕೂಡ ಆಗಬೇಕಾಗಿದೆ. ಮಾದಕ ವಸ್ತುಗಳ ಹಾವಳಿ ಸಮಾಜದಲ್ಲಿ ಹೆಚ್ಚಾಗುತ್ತಿದ್ದು, ಅದರ ವಿರುದ್ಧ ಧ್ವನಿ ಎತ್ತಬೇಕಾಗಿದೆ. ಹಿಂದೆ ತಪ್ಪು ಮಾಡಿ ಜೈಲು ಶಿಕ್ಷೆ ಅನುಭವಿಸಿ ಬಂದವರನ್ನು ಸಮಾಜ ಬಹಿಷ್ಕಾರ ಮಾಡುತ್ತಿತ್ತು. ಅವರಿಗೆ ಸಾಮಾಜಿಕ ಶಿಕ್ಷೆ ಆಗುತ್ತಿತ್ತು. ಆದರೆ ಅವರನ್ನು ಇಂದು ಸನ್ಮಾನ ಮಾಡುವ ಸ್ಥಿತಿಗೆ ನಮ್ಮ ಸಮಾಜ ತಲುಪಿದೆ. ಶ್ರೀಮಂತಿಕೆಯನ್ನು ಪೂಜಿಸುವ ಹಂತಕ್ಕೆ ಸಮಾಜ ಒಂದು ನಿಂತಿದ್ದು, ಪ್ರಾಮಾಣಿಕರನ್ನು ಹುಚ್ಚನೆಂದು ಕರೆಯಲಾಗುತ್ತಿದೆ ಎಂದರು.ಕೋರ್ಟ್‌ಗಳಲ್ಲಿ ವಿಚಾರಣೆ ನಡೆದು ಶಿಕ್ಷೆ ಆಗುವುದು ಸಮಯ ತೆಗೆದುಕೊಳ್ಳುತ್ತಿದೆ. ತೀರ್ಪು ಹೊರಬರುವಷ್ಟರಲ್ಲಿ ಆರೋಪಿಯೇ ಸತ್ತು ಹೋಗಿರುತ್ತಾನೆ. ಇದರಿಂದ ಅಪರಾಧ ಮಾಡುವವರಿಗೆ ಭಯವಿಲ್ಲವಾಗಿದೆ. ಯುವಕರು ಹಿರಿಯರು ಕಟ್ಟಿ ಬೆಳೆಸಿದ ಮಾನವ ಮೌಲ್ಯ ಅಳವಡಿಸಿಕೊಂಡು ಅಪರಾಧಗಳೇ ಇಲ್ಲದ ಸಮಾಜದ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ಯುವಕರು ವೈಯಕ್ತಿಕ ಮಟ್ಟದಲ್ಲಿ ಹಾಗೂ ಸಾಮಾಜಿಕವಾಗಿ ಪ್ರತಿಭಟಿಸಬೇಕಾದ ಅವಶ್ಯಕತೆ ಇದೆ. ಮಾದಕ ವಸ್ತುಗಳು, ಅಶ್ಲೀಲ ಸಿನಿಮಾ, ಪೋರ್ನೋಗ್ರಫಿ ವಿರುದ್ಧ ಧ್ವನಿ ಎತ್ತಬೇಕು ಎಂದರು.
ಕಾಂಗ್ರೆಸ್ ಈಗೇನು ಮಾಡುತ್ತಿದೆ?:ಭ್ರಷ್ಟಾಚಾರ ಯಾವುದೇ ರಾಜಕೀಯ ಪಕ್ಷಕ್ಕೆ ಸೀಮಿತವಾಗಿಲ್ಲ. ಹಿಂದಿನ ಸರ್ಕಾರದ ಮೇಲೆ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈಗೇನು ಮಾಡುತ್ತಿದೆ? ಸ್ವಂತ ಲಾಭಕ್ಕಾಗಿ ರಾಜಕೀಯ ಮಾಡುತ್ತಿದ್ದಾರೆಯೇ ಹೊರತು ಅಭಿವೃದ್ಧಿಗಾಗಿ ಅಲ್ಲ. ಯಾರು ಆದರ್ಶವಾಗಿ ಇರಬೇಕು ಅವರು ಜೈಲಿನಲ್ಲಿ ಇದ್ದಾರೆ. ದಿನಗಳೆದಂತೆ ಮನುಷ್ಯನ ದುರಾಸೆ ಹೆಚ್ಚುತ್ತಿದೆ. ಸಮಾಜ ಇನ್ನಾದರೂ ಬದಲಾಗಬೇಕು. ಮುಂದಿನ ಪೀಳಿಗೆಗೆ ದೊಡ್ಡ ಬದಲಾವಣೆ ತರುವುದು ಅವಶ್ಯ. ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಬರಬೇಕು ಎಂದು ಸಮಾರಂಭಕ್ಕೂ ಮುಂಚೆ ಮಾಧ್ಯಮಗಳೊಂದಿಗೆ ನಿವೃತ್ತ ನ್ಯಾಯಾಧೀಶ ಸಂತೋಷ ಹೆಗಡೆ ಮಾತನಾಡಿದರು.