ಡಾ. ಬಿ.ಆರ್. ಅಂಬೇಡ್ಕರ್, ಡಾ. ಬಾಬು ಜಗಜೀವನ್‌ರಾಮ್ ಜಯಂತಿಯಲ್ಲಿ ಸಂಸದ
ಕನ್ನಡಪ್ರಭ ವಾರ್ತೆ ಸಂಡೂರುಡಾ. ಬಿ.ಆರ್. ಅಂಬೇಡ್ಕರ್ ಅವರು ಕಲ್ಪಿಸಿದ ಮೀಸಲಾತಿ ವ್ಯವಸ್ಥೆಯಿಂದಾಗಿ ನಾನು ಶಾಸಕನಾಗಿ, ಸಂಸದನಾಗಲು, ನನ್ನ ಪತ್ನಿ ಈ. ಅನ್ನಪೂರ್ಣ ಶಾಸಕಿಯಾಗಲು ಸಾಧ್ಯವಾಗಿದೆ. ಎಲ್ಲರೂ ಒಟ್ಟಾಗಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನ್‌ರಾಮ್ ಅವರ ಕನಸು ನನಸಾಗಿಸಲು ಶ್ರಮಿಸೋಣ ಎಂದು ಸಂಸದ ಈ. ತುಕಾರಾಂ ಹೇಳಿದರು. ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೪ನೇ ಜನ್ಮ ದಿನಾಚರಣೆ ಹಾಗೂ ಡಾ.ಬಾಬು ಜಗಜೀವನ್‌ರಾಮ್ ಅವರ ೧೧೮ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಶಾಸಕ, ಸಂಸದನಾಗಿ ಸಂವಿಧಾನಕ್ಕೆ ಕಳಂಕ ತರದಂತೆ, ಸಂವಿಧಾನ ಹಾಗೂ ಜನರ ಆಶಯದಂತೆ ಪ್ರಾಮಾಣಿಕವಾಗಿ ಜನರ ಸೇವೆ ಮಾಡುತ್ತಿದ್ದೇನೆ. ಪಟ್ಟಣದಲ್ಲಿನ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ₹೬೦ ಕೋಟಿ ವೆಚ್ಚದಲ್ಲಿ ಹೊಸ ಪೈಪ್‌ಲೈನನ್ನು ಹಾಕಲಾಗುತ್ತಿದೆ. ಸುಮಾರು ೨೦೦೦ ಮನೆಗಳನ್ನು ಪಾರದರ್ಶಕವಾಗಿ ಹಂಚಿಕೆ ಮಾಡಲಾಗಿದೆ. ಈಗಿರುವ ೧೦೦ ಹಾಸಿಗೆಗಳ ಆಸ್ಪತ್ರೆಯ ಜಾಗದಲ್ಲಿಯೇ ಅದನ್ನು ಜಿ+೫ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು. ವಸತಿ ರಹಿತರಿಗೆ ಸೂರು ಕಲ್ಪಸಲು ಪ್ರಮಾಣಿಕವಾಗಿ ಶ್ರಮಿಸುವೆ. ನಂಜುಂಡಪ್ಪ ವರದಿಯನ್ವಯ ಅತಿ ಹಿಂದುಳಿದ ತಾಲೂಕಾಗಿದ್ದ ಸಂಡೂರು ತಾಲೂಕನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಮಾದರಿ ತಾಲೂಕನ್ನಾಗಿಸಲಾಗುವುದು ಎಂದರು. ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಆರ್.ಕೆ. ಹೆಗಡೆ ಮಾತನಾಡಿ, ಸಂವಿಧಾನ ಜಾರಿಯಾಗಿ ಹಲವು ದಶಕಗಳು ಕಳೆದಿದ್ದರೂ, ಇನ್ನೂ ಹಲವು ಗ್ರಾಮಗಳಲ್ಲಿ ಅಸ್ಪೃಶ್ಯತೆ ಜೀವಂತವಾಗಿರುವುದು ವಿಷಾದನೀಯ. ಅಸ್ಪೃಶ್ಯತೆ ಸಂಪೂರ್ಣವಾಗಿ ನಿವಾರಣೆಯಾದಾಗ ಸಂವಿಧಾನ ಜಾರಿಯಾಗಿದ್ದಕ್ಕೆ ಸಾರ್ಥಕವಾಗುತ್ತದೆ. ಮನೆಯಿಲ್ಲದ ದಲಿತರಿಗೆ ಸೂರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಿದರು. ಶಾಸಕಿ ಈ. ಅನ್ನಪೂರ್ಣ ತುಕಾರಾಂ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂಬೇಡ್ಕರ್ ಅವರೊಬ್ಬ ಸಮಾಜದ ಹಿತ ಚಿಂತಕರು ಹಾಗೂ ಮಾನವತಾವಾದಿಯಾಗಿದ್ದರು. ಸಮಾಜದಲ್ಲಿ ಜನತೆ ಗುಡಿಗಳಿಗೆ ನೀಡುತ್ತಿರುವ ಪ್ರಾಮುಖ್ಯತೆಯನ್ನು ಶಿಕ್ಷಣಕ್ಕೆ ನೀಡುತ್ತಿಲ್ಲ. ಈ ಮನಸ್ಥಿತಿ ಬದಲಾಗಬೇಕಿದೆ. ಪ್ರತಿಯೊಬ್ಬರೂ ಶಿಕ್ಷಣ ಪಡೆದು ಸುಶಿಕ್ಷಿತರಾಗಬೇಕು. ಇದರಿಂದ ಅಭಿವೃದ್ಧಿ ಸಾಧ್ಯ. ಅಂಬೇಡ್ಕರ್ ಅವರ ಆಶಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ಕನ್ನಡ ಅಧ್ಯಾಪಕ ಡಾ. ಚಂದ್ರಶೇಖರ್ ಎಸ್.ಬಿ. ಉಪನ್ಯಾಸ ನೀಡಿದರು. ಸಾನ್ನಿಧ್ಯ ವಹಿಸಿದ್ದ ಪ್ರಭುದೇವರ ಸಂಸ್ಥಾನ ವಿರಕ್ತಮಠದ ಪ್ರಭುಸ್ವಾಮೀಜಿ ಮಾತನಾಡಿದರು. ಕಾರ್ಯಕ್ರಮದಲ್ಲಿ ೨೦೨೩-೨೪ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಹಾಗೂ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನ್‌ರಾಮ್ ಅವರ ಭಾವಚಿತ್ರವನ್ನು ವಾದ್ಯಮೇಳಗಳು, ವಿವಿಧ ಕಲಾತಂಡಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭವ್ಯವಾಗಿ ಮೆರವಣಿಗೆ ಮಾಡಲಾಯಿತು. ತಹಶೀಲ್ದಾರ್ ಜಿ. ಅನಿಲ್‌ಕುಮಾರ್, ತಾಪಂ ಇಒ ಮಡಗಿನ ಬಸಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಐ.ಆರ್. ಅಕ್ಕಿ, ಆರಕ್ಷಕ ವೃತ್ತ ನಿರೀಕ್ಷಕ ಬಿ. ಮಹೇಶ್‌ಗೌಡ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎನ್.ಕೆ. ವೆಂಕಟೇಶ್, ಪುರಸಭೆ ಮುಖ್ಯಾಧಿಕಾರಿ ಕೆ. ಜಯಣ್ಣ, ಪುರಸಭೆ ಅಧ್ಯಕ್ಷ ಎಸ್. ಸಿರಾಜ್ ಹುಸೇನ್, ಉಪಾಧ್ಯಕ್ಷೆ ಲತಾ ಎಂ.ಸಿ., ಡಾ. ಬಿ.ಆರ್. ಅಂಬೇಡ್ಕರ್ ಸಂಘದ ಅಧ್ಯಕ್ಷ ಎಂ. ಶಿವಲಿಂಗಪ್ಪ, ಅಖಿಲ ಕರ್ನಾಟಕ ಆದಿ ಜಾಂಬವ ಮಹಾಸಭಾದ ಅಧ್ಯಕ್ಷ ನಿಂಗಪ್ಪ ಐಹೊಳೆ, ಮುಖಂಡರಾದ ಡಿ. ಕೃಷ್ಣಪ್ಪ, ದೇವದಾಸ್, ಅಂಬರೀಶ್, ಎಚ್. ದುರ್ಗಮ್ಮ, ಆಶಾಲತಾ ಸೋಮಪ್ಪ, ವಿವಿಧ ಸಂಘಟನೆಗಳ ಮುಖಂಡರು, ಸದಸ್ಯರು ಉಪಸ್ಥಿತರಿದ್ದರು.