ಕೂಡ್ಲಿಗಿ : ಪ್ರಾಗೈತಿಹಾಸಿಕ ಕಾಲದ ಶಿಲಾಯುಗ ಸಂಸ್ಕೃತಿಯ ತುಣುಕಿನ ಭಾಗದಂತಿರುವ ಐತಿಹಾಸಿಕ ರಕ್ಕಸ( ರಾಕ್ಷಸ) ಕಲ್ಲುಗಳು ತಾಲೂಕಿನ ವಲಸೆ ಮತ್ತು ಕುಮತಿ ಹಳ್ಳಿಗಳ ನಡುವೆ ಚಂದ್ರಶೇಖರ ಎನ್ನುವರ ಹೊಲದಲ್ಲಿ ಎರಡು ರಕ್ಕಸ ಕಲ್ಲುಗಳು ಉಳಿದುಕೊಂಡಿವೆ. ಇನ್ನು ಕೆಲವೇ ದಿನಗಳ ಬಿಟ್ಟಲ್ಲಿ ಇತಿಹಾಸದಿಂದ ಇವು ಕೂಡ ಮರೆಯಾಗುತ್ತವೆ, ಈ ದೇಶದ ಇತಿಹಾಸ ಮತ್ತು ಸಂಸ್ಕೃತಿ ಮುಂದಿನ ಜನಾಂಗಕ್ಕೆ ಅತ್ಯಗತ್ಯ. ಹಾಗಾಗಿ ಈ ಎರಡು ಕಲ್ಲುಗಳನ್ನು ಉಳಿಸಲು ಕೊಟ್ಟೂರಿನ ಅಂಚೆ ಕೊಟ್ರೇಶ್ ಪತ್ರ ಚಳವಳಿ ಆರಂಭಿಸಿದ್ದಾರೆ.
ರಾಜ್ಯದ ಮುಖ್ಯಮಂತ್ರಿಗಳಿಗೆ ಹಾಗೂ ಕರ್ನಾಟಕ ಪುರಾತತ್ವ ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಮನುಷ್ಯನ ಮೂಢನಂಬಿಕೆ ಮತ್ತು ಸ್ವಾರ್ಥದ ಹಿನ್ನೆಲೆ ಧನ ಕನಕ ಸಿಗಬಹುದೆಂಬುವ ಆಸೆಯಲ್ಲಿ ಈ ರಕ್ಕಸ ಕಲ್ಲುಗಳನ್ನು ಹಾಳು ಮಾಡಿದ್ದಾರೆ. ರಾಜ್ಯ ಪುರಾತತ್ವ ಇಲಾಖೆ ಇದುವರೆಗೂ ಇದನ್ನು ಗಮನಿಸಿಲ್ಲ. ಸರಿಸುಮಾರು 15 ಅಡಿ ಎತ್ತರವಿರುವ ಈ ಕಲ್ಲುಗಳು ಅರ್ಧ ಅಡಿ ದಪ್ಪವಿರುವ ಮನುಷ್ಯನ ಆಕೃತಿಯ ಈ ಕಲ್ಲುಗಳು ಬಯಲು ಸೀಮೆಯಲ್ಲಿ ಈ ಪ್ರದೇಶದಲ್ಲಿ ಬಂದದ್ದಾದರೂ ಹೇಗೆ ಎನ್ನುವ ಕುತೂಹಲ ಹಲವರಿಗೆ ಇದೆ.
ಆದಿಮಾನವನ ಕಾಲದ ಬಹು ಪ್ರಮುಖ ವ್ಯಕ್ತಿಗಳ ಸತ್ತಲ್ಲಿ ಅವರ ನೆನಪಿಗಾಗಿ ಈ ಸ್ಮಾರಕ ನಿರ್ಮಿಸಿರಬಹುದು ಎಂದು ಊಹಿಸಲಾಗುತ್ತಿದೆ. ಇಂಥ ಸ್ಮಾರಕಗಳು ಇಲ್ಲಿ ಬಿಟ್ಟರೆ ಭಾರತದಾದ್ಯಂತ ಎಲ್ಲೂ ಸಿಗುವುದಿಲ್ಲ. ಈಗ ಈ ರಾಕ್ಷಸ ಕಲ್ಲುಗಳು ಹಲವು ಜನರಿಗೆ ದೇವರುಗಳಾಗಿವೆ. ಈ ಕಲ್ಲುಗಳಿಗೆ ಪೂಜೆ ಪುನಸ್ಕಾರಗಳು ಹಬ್ಬಗಳಲ್ಲಿ ಜಾತ್ರೆಗಳಲ್ಲಿ ನಡೆಯುತ್ತವೆ. ಹೊಲದಲ್ಲಿ ಬಿತ್ತಲು ಬಂದಿರುವ ಜನರು ಬಿತ್ತುವುದಕ್ಕಿಂತ ಮುಂಚೆ ಈ ಕಲ್ಲುಗಳಿಗೆ ಪೂಜೆ ಮಾಡಿ ಬಿತ್ತುತ್ತಾರೆ.
ಶಿಲಾಯುಗ ಕಾಲದ ಇತಿಹಾಸ ಕೊಪ್ಪಳ ಜಿಲ್ಲೆ ಬೆಣಕಲ್ ಸೇರಿದಂತೆ ತಮಿಳುನಾಡು ಮುಂತಾದ ದೇಶದ ಹಲವು ಕಡೆ ದೊರಕಿದ್ದರೂ ಅವು ಯಾವು ಮನುಷ್ಯನ ಸ್ಪಷ್ಟ ಆಕೃತಿ ಹೋಲುವುದಿಲ್ಲ, ಆದರೆ ಕೂಡ್ಲಿಗಿ ತಾಲೂಕಿನ ಕುಮತಿ ಹಾಗೂ ಹುಲಿಕುಂಟೆಯೆಲ್ಲಿ ದೊರಕಿರುವ ಮಾನವನಾಕೃತಿಯ ಕಲ್ಲುಗಳು ಸ್ಪಷ್ಟವಾಗಿ ಮಾನವವನ್ನು ಹೋಲುತ್ತಿವೆ. ಹೀಗಾಗಿ ಶಿಲಾಯುಗಕ್ಕೆ ಐತಿಹಾಸಿಕ ಆಧಾರಗಳು ಇಡೀ ದೇಶದಲ್ಲಿ ಸಿಗುವುದು ಕೂಡ್ಲಿಗಿ ತಾಲೂಕಿನಲ್ಲೊಂದೇ ಎನ್ನುವುದನ್ನು ಸಂಶೋಧಕ ಪೂಣಚ್ಚ ತಂಡ ಸೇರಿದಂತೆ ಹಲವು ಸಂಶೋಧಕರು ಈಗಾಗಲೇ ದೃಢೀಕರಿಸಿದ್ದಾರೆ.