ಬ್ಯಾಡಗಿ: ನೂತನ ಪಿಂಚಣಿ ವ್ಯವಸ್ಥೆ ಹಿಂಪಡೆಯುವಂತೆ ಮತ್ತು ಹಳೆಯ ಪಿಂಚಣಿ (ಒಪಿಎಸ್) ಯೋಜನೆ ಮುಂದುವರಿಸುವಂತೆ ಎನ್‌ಪಿಎಸ್ ನೌಕರರ ತಾಲೂಕಾಧ್ಯಕ್ಷ ಎಚ್.ಬಿ. ದಾಸರ ಸರ್ಕಾರಕ್ಕೆ ಮನವಿ ಮಾಡಿದರು.
ಜಾರ್ಖಂಡ್, ಪಂಜಾಬ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳು ತಮ್ಮ ನೌಕರರಿಗೆ ಒಪಿಎಸ್ ನೀಡಲು ನಿರ್ಧರಿಸಿದ್ದು ಸ್ವಾಗತಾರ್ಹ. ಅಂತೆಯೇ ಕರ್ನಾಟಕದಲ್ಲೂ ಜಾರಿಗೊಳಿಸುವ ಮೂಲಕ ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ನೀಡಿದ್ದ ಭರವಸೆ ಈಡೇರಿಸಬೇಕು ಎಂದು ಮನವಿ ಮಾಡಿದರು.
ಇಡುಗಂಟು ಕೊಟ್ಟರೆ ಸಾಕು: ಪ್ರಸ್ತುತ ವ್ಯವಸ್ಥೆಯಡಿಯಲ್ಲಿ ನೌಕರರು ತಮ್ಮ ಮೂಲ ವೇತನದ ಶೇ.10ರಷ್ಟು ಕೊಡುಗೆ ನೀಡುತ್ತಿದ್ದಾರೆ. ಸರ್ಕಾರ ಪಿಂಚಣಿ ನಿಧಿಗೆ ಶೇ. 14 ಪಾವತಿಸುತ್ತದೆ. ಈ ಹಣವನ್ನು ಮ್ಯೂಚುವೆಲ್ ಫಂಡ್ (ಪಬ್ಲಿಕ್ ಸೆಕ್ಟರ್)ನಲ್ಲಿ ಹೂಡಿಕೆ ಮಾಡುವ ಮೂಲಕ ಅದರ ಲಾಭದ ನಿಧಿಯಿಂದ ಬರುವ ಆದಾಯವನ್ನು ಅವಲಂಬಿಸಿದ್ದು ನೋವಿನ ಸಂಗತಿ. ಇದೊಂದು ಅವೈಜ್ಞಾನಿಕ ಕ್ರಮವಾಗಿದೆ. ಕೂಡಲೇ ಎನ್.ಪಿ.ಎಸ್. ವ್ಯವಸ್ಥೆ ಹಿಂಪಡೆಯಬೇಕು ಎಂದು ಮನವಿ ಮಾಡಿದರು.ಮುಖ್ಯ ಶಿಕ್ಷಕ ಯಲ್ಲಪ್ಪ ಗುರೇಮಟ್ಟಿ, ಎಂ. ಲಲಿತಾ, ಹಬೀಬಾ ಹುಬ್ಬಳ್ಳಿ, ನಾಗರಾಜ ಕೊರಗರ, ಸುಬಾನಲಿ, ಪಾರ್ವತಿ ಹಡಗಲಿ, ಶಾರದಾ ಶೀರಿಹಳ್ಳಿ, ಟಿ.ಎಸ್. ಕುಂಚೂರ ಇನ್ನಿತರರಿದ್ದರು.
ಬೃಹತ್ ಪ್ರತಿಭಟನೆಗೆ ಬನ್ನಿ: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸುವಂತೆ ಆಗ್ರಹಿಸಿ ಏ. 7ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಎಲ್ಲರೂ ಪಾಲ್ಗೊಳ್ಳಬೇಕು ಎಂದು ಎನ್.ಪಿ.ಎಸ್. ನೌಕರರ ತಾಲೂಕಾಧ್ಯಕ್ಷ ಎಚ್.ಬಿ. ದಾಸರ ಹೇಳಿದರು.