ನೀರಿನ ಸಂರಕ್ಷಣೆಯಲ್ಲಿ ಇಲಾಖೆಗಳ ಪಾತ್ರ ಪ್ರಮುಖ: ಡಿ.ವಿ. ಸ್ವಾಮಿ

KannadaprabhaNewsNetwork | Published : Jan 31, 2025 12:45 AM

ಸಾರಾಂಶ

ನೀರಿನ ಸಂರಕ್ಷಣೆ ಜಲಶಕ್ತಿ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಹೀಗಾಗಿ, ಸಂಬಂಧಪಟ್ಟ ಎಲ್ಲ ಇಲಾಖೆಗಳ ಅಧಿಕಾರಿಗಳು ಅಭಿಯಾನದ ಯಶಸ್ಸಿಗೆ ಕೈಜೋಡಿಸಬೇಕು ಎಂದು ಕೇಂದ್ರ ಜಲ ಶಕ್ತಿ ಅಭಿಯಾನ ನೋಡಲ್ ಅಧಿಕಾರಿ ಡಿ.ವಿ. ಸ್ವಾಮಿ ಹೇಳಿದರು. ಇಲ್ಲಿನ ಜಿಪಂಕಾರ್ಯಾಲಯದ ಸಭಾಂಗಣದಲ್ಲಿ ಗುರುವಾರ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಜಲಶಕ್ತಿ ಅಭಿಯಾನದ ಪೋಸ್ಟ್ ಮಾನ್ಸೂನ್ ಭೇಟಿ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ನೀರಿನ ಸಂರಕ್ಷಣೆ ಜಲಶಕ್ತಿ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಹೀಗಾಗಿ, ಸಂಬಂಧಪಟ್ಟ ಎಲ್ಲ ಇಲಾಖೆಗಳ ಅಧಿಕಾರಿಗಳು ಅಭಿಯಾನದ ಯಶಸ್ಸಿಗೆ ಕೈಜೋಡಿಸಬೇಕು ಎಂದು ಕೇಂದ್ರ ಜಲ ಶಕ್ತಿ ಅಭಿಯಾನ ನೋಡಲ್ ಅಧಿಕಾರಿ ಡಿ.ವಿ. ಸ್ವಾಮಿ ಹೇಳಿದರು.

ಇಲ್ಲಿನ ಜಿಪಂಕಾರ್ಯಾಲಯದ ಸಭಾಂಗಣದಲ್ಲಿ ಗುರುವಾರ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಜಲಶಕ್ತಿ ಅಭಿಯಾನದ ಪೊಸ್ಟ್ ಮಾನ್ಸೂನ್ ಭೇಟಿ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನೀರಿನ ಸಂರಕ್ಷಣೆಯ ಜೊತೆಗೆ ಮಳೆ ನೀರು ಕೊಯ್ಲು, ಸಾಂಪ್ರದಾಯಿಕ ಮತ್ತು ಇತರೆ ಜಲಮೂಲಗಳು, ಕೆರೆ-ಕಟ್ಟೆಗಳ ನವೀಕರಣ ಕೊಳವೆ ಬಾವಿಗಳ ಮರುಪೂರಣ, ಜಲಾನಯನ ಅಭಿವೃದ್ಧಿ, ಅರಣ್ಯೀಕರಣ ಕಾಮಗಾರಿಗಳನ್ನು ಆದ್ಯತೆ ಮೇಲೆ ಅನುಷ್ಠಾನಗೊಳಿಸಿರುವುದು ಶ್ಲಾಘನೀಯವಾಗಿದೆ ಎಂದರು.

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ (ಮನರೇಗಾ) ಬೆಂಬಲದೊಂದಿಗೆ ಜಲಶಕ್ತಿ ಅಭಿಯಾನದಡಿ ಜಲಾನಯನ ಪರಿಕಲ್ಪನೆಯಡಿ ಮೈಕ್ರೋ ವಾಟರ್ ಶೆಡ್‌ ಗಳ ಮೂಲಕ ಕಾಮಗಾರಿ ಅನುಷ್ಠಾನಗೊಳಿಸಲು ಮುಂದಿನ ವರ್ಷಗಳಲ್ಲಿ ಕ್ರಮ ವಹಿಸಲು ಸೂಚಿಸಿದರು. ಈಗಾಗಲೇ ಅನುಷ್ಠಾನಗೊಳಿಸಿದ ಮಣ್ಣು ನೀರು ಸಂರಕ್ಷಣಾ ಕಾಮಗಾರಿಗಳಿಗೆ ವೈಜ್ಞಾನಿಕವಾಗಿ ಅಧ್ಯಯನ ಮಾಡಿ ವರದಿ ತಯಾರಿಸಲು ತಿಳಿಸಿದರು.

ಜಲಶಕ್ತಿ ಅಭಿಯಾನದಡಿ ಕೈಗೊಂಡ ಕಾಮಗಾರಿಗಳಿಂದ ಸುತ್ತಲಿನ ಜನರು ಅಥವಾ ಸ್ಥಳಗಳಲ್ಲಿ ಆಗುತ್ತಿರುವ ಪ್ರಯೋಜನಗಳು, ಅಂತರ್ಜಲಮಟ್ಟ ಹಾಗೂ ನೀರು ಯೋಗ್ಯವಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ಸ್ವಸಹಾಯ ಸಂಘ, ಸಂಸ್ಥೆಗಳ ನೆರವಿನಿಂದ ಜಲಮೂಲ ಅಭಿವೃದ್ಧಿಪಡಿಸಬೇಕು. ಎನ್.ಆರ್.ಎಲ್.ಎಂ. ಯೋಜನೆಯ ಸ್ವಸಹಾಯ ಸಂಘಗಳು ಹಾಗೂ ನೀರು ಹಾಗೂ ನೈರ್ಮಲ್ಯ ಇಲಾಖೆಯ ಸಂಘಗಳ ಸದಸ್ಯರನ್ನು ಜಲಮೂಲಗಳ ಸಂರಕ್ಷಣೆಯಲ್ಲಿ ಭಾಗವಹಿಸುವಂತೆ ಕ್ರಮವಹಿಸಬೇಕೆಂದು ಸೂಚಿಸಿದರು.

ಎಲ್ಲ ಸರ್ಕಾರಿ ಇಲಾಖೆಗಳು, ಶಾಲಾ-ಕಾಲೇಜುಗಳ ಕಟ್ಟಡದ ಮೇಲೆ ಮಳೆ ನೀರು ಕೊಯ್ಲು ನಿರ್ಮಿಸಲು ಕಡ್ಡಾಯವಾಗಿ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ನಗರಾಭಿವೃದ್ಧಿ ವ್ಯಾಪ್ತಿಯಲ್ಲಿ ಕೂಡ ಜಲ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನಿಡಬೇಕು. ಕೃಷಿ, ತೋಟಗಾರಿಕೆ, ಅರಣ್ಯ ಇಲಾಖೆಗಳು ಜಲಮೂಲಗಳ ಸಂರಕ್ಷಣೆಯಲ್ಲಿ ಮುತುವರ್ಜಿ ವಹಿಸಿ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಸೆಂಟ್ರಲ್ ಗ್ರೌಂಡ ವಾಟರ್ ಬೊರ್ಡ್‌ ವಿಜ್ಞಾನಿ ಡಾ.ಸುಚೆತನಾ ಬಿಸ್ವಾಸ್, ಯೋಜನಾ ನಿರ್ದೇಶಕ ರವಿ ಎನ್., ಬಂಗಾರೆಪ್ಪನವರ ಸೇರಿದಂತೆ ಕೃಷಿ, ತೋಟಗಾರಿಕೆ, ಅರಣ್ಯ, ಜಿಯೋಲಾಜಿಕಲ್ ಇಲಾಖೆ, ಸಣ್ಣ ನೀರಾವರಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಪಂಚಾಯತ್‌ರಾಜ್ ಎಂಜಿನಿಯರಿಂಗ್‌ ಇಲಾಖೆ, ನಗರಾಭಿವೃದ್ಧಿ ಕೋಶ (ಡಿ.ಯು.ಡಿಸಿ) ಜಿಲ್ಲಾ ಪಂಚಾಯಿತಿ ಸಿಬ್ಬಂದಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

Share this article