ಧಾರವಾಡ:
ನಗರದ ಉಳವಿ ಚೆನ್ನಬಸವೇಶ್ವರ ದೇವಸ್ಥಾನದಿಂದ ಜಯನಗರ ಬಾರಾಕೊಟ್ರಿ ಬಳಿಯ ಮಾಜಿ ಸಚಿವ, ಶಾಸಕ ವಿನಯ ಕುಲಕರ್ಣಿ ಅವರ ಮನೆ ವರೆಗೂ ಕೂಡಲಸಂಗಮ ಪಂಚಮಸಾಲಿ ಪೀಠದ ಜಯಬಸವ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಬುಧವಾರ ಸಮಾಜದ ಮುಖಂಡರು ಮೆರವಣಿಗೆ ನಡೆಸಿದರು. ಶಾಸಕರ ಅನುಪಸ್ಥಿತಿಯಲ್ಲಿ ಅವರ ಪುತ್ರಿಗೆ ಸ್ವಾಮೀಜಿ ಪತ್ರ ನೀಡಿದರು.
ಬಿಜೆಪಿ ಸರ್ಕಾರ ಇದ್ದಾಗಲೂ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಹೋರಾಟ ನಡೆಸಿದ್ದೆವು. ಈಗಿನ ಸರ್ಕಾರ ಕೂಡ ಮೀಸಲಾತಿ ನೀಡುವ ಭರವಸೆ ಕೊಟ್ಟಿತ್ತು. ಆದರೆ, ಒಂದೂವರೆ ವರ್ಷವಾದರೂ ಭರವಸೆ ಈಡೇರಿಸಿಲ್ಲ. ಆದ್ದರಿಂದ ತಮಗೆ ಕೊಟ್ಟಿರುವ ಶಾಸನಬದ್ಧ ಅಧಿಕಾರ ಸದ್ಬಳಕೆ ಮಾಡಿಕೊಂಡು ನಮ್ಮ ಹಕ್ಕನ್ನು ಪ್ರತಿಪಾದಿಸುವಂತೆ ಸರ್ಕಾರಕ್ಕೆ ಒತ್ತಾಯಿಸಬೇಕು ಎಂದು ವಿನಯ ಕುಲಕರ್ಣಿ ಅವರಿಗೆ ನೀಡಿದ ಪತ್ರದಲ್ಲಿ ಬರೆಯಲಾಗಿದೆ. ಪತ್ರ ಚಳವಳಿಯಲ್ಲಿ ಸಮಾಜದ ಮುಖಂಡರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.ಸರ್ಕಾರದ ಕಣ್ಣು ತೆರೆಯಿಸಲಿ:
ಶಾಸಕರು ಭರವಸೆ ಕೊಡುವವರೆಗೆ ಅವರ ಮನೆ ಬಾಗಿಲಿಗೆ ಹೋಗಿ ಪತ್ರ ಕೊಡಲಿದ್ದೇವೆ. ವಿನಯ ಕುಲಕರ್ಣಿ 2ಎ ಹೋರಾಟಕ್ಕೆ ಮುಂಚೂಣಿ ನಾಯಕರು. ಅವರೇ ಈ ಹೋರಾಟ ಮಾಡಲು ನಮಗೆ ಮೊದಲು ಬೆಂಬಲ ನೀಡಿದ್ದು. ಅವರಿಗೆ ಜಿಲ್ಲೆಗೆ ಬರಲು ಕಾನೂನು ತೊಡಕಿನ ಕಾರಣ ವಿಡಿಯೋ ಕಾನ್ಫರೆನ್ಸ್ ಮೂಲಕ ನಮ್ಮ ಜತೆಗೆ ಮಾತನಾಡಿದ್ದಾರೆ. ಗುರುವಾರ ಬೆಳಗಾವಿ, ಶುಕ್ರವಾರ ಹುಬ್ಬಳ್ಳಿಯಲ್ಲಿ ಚಳವಳಿ ಮಾಡಲಿದ್ದೇವೆ ಎಂದ ಸ್ವಾಮೀಜಿ, ಚಳಿಗಾಲದ ಅಧಿವೇಶನದಲ್ಲಿ ಮುಖ್ಯಮಂತ್ರಿಗಳು ಕೊಟ್ಟ ಮಾತಿನಂತೆ ಈಗ ನಡೆದುಕೊಳ್ಳಬೇಕಿದೆ. ಚುನಾವಣೆ ಮುಗಿದ ಬಳಿಕ ಸಭೆ ಎಂದು ಹೇಳಿದ್ದರು. ಆದರೂ ಸಭೆ ಮಾಡಿಲ್ಲ. ಈಗಲೂ ಕಾಲ ಮಿಂಚಿಲ್ಲ, ಚುನಾವಣಾ ನೀತಿ ಸಂಹಿತೆ ಮುಗಿದಿದೆ. ಮೀಸಲಾತಿ ಕೊಡಲಿ. ಇಲ್ಲದೇ ಹೋದಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.