ಪದವಿಪೂರ್ವ ಕಾಲೇಜಿನ ಉಪನ್ಯಾಸಕರಿಂದ ಪತ್ರ ಚಳವಳಿ

KannadaprabhaNewsNetwork |  
Published : Jun 28, 2026, 03:15 AM IST
ಹಗರಿಬೊಮ್ಮನಹಳ್ಳಿಯಲ್ಲಿ ತಾಲೂಕು ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಪದಾಧಿಕಾರಿಗಳು ಮತ್ತು ಉಪನ್ಯಾಸಕರು ಶನಿವಾರ ಪತ್ರ ಚಳವಳಿ ನಡೆಸಿದರು. | Kannada Prabha

ಸಾರಾಂಶ

ಪದವಿಪೂರ್ವ ಕಾಲೇಜಿನ ಉಪನ್ಯಾಸಕರನ್ನು ಪ್ರೌಢಶಾಲೆಗಳ ೯ ಮತ್ತು ೧೦ನೆಯ ತರಗತಿಗಳಿಗೆ ಪಾಠ ಬೋಧಿಸಲು ಹೊರಡಿಸಿರುವ ಸರ್ಕಾರದ ಕರಡು ಅಧಿಸೂಚನೆಯನ್ನು ಹಿಂಪಡೆಯುವಂತೆ ಆಗ್ರಹಿಸಿ ಹಗರಿಬೊಮ್ಮನಹಳ್ಳಿ ತಾಲೂಕು ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಶನಿವಾರ ಪತ್ರ ಚಳವಳಿ ನಡೆಸಿತು.

ಹಗರಿಬೊಮ್ಮನಹಳ್ಳಿ: ಕಾಲೇಜು ಉಪನ್ಯಾಸಕರನ್ನು ಪ್ರೌಢಶಾಲಾ ತರಗತಿಗಳಿಗೆ ಪಾಠ ಬೋಧಿಸುವ ಸರ್ಕಾರದ ಕರಡು ಅಧಿಸೂಚನೆ ಶೈಕ್ಷಣಿಕ ಹಿತದೃಷ್ಟಿಯಿಂದ ಸಮರ್ಥನೀಯವಲ್ಲ. ಆಡಳಿತಾತ್ಮಕವಾಗಿ ಏಕಪಕ್ಷೀಯವಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಹಾಗೂ ಶಾಲಾ ಶಿಕ್ಷಣ ಪಠ್ಯಕ್ರಮ ಚೌಕಟ್ಟುಗಳ ಮೂಲ ಆಶಯಗಳಿಗೆ ವಿರುದ್ಧವಾಗಿದೆ ಎಂದು ತಾಲೂಕು ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ಎಚ್. ರಾಥೋಡ್ ಪ್ರತಿಪಾದಿಸಿದರು.

ಪದವಿಪೂರ್ವ ಕಾಲೇಜಿನ ಉಪನ್ಯಾಸಕರನ್ನು ಪ್ರೌಢಶಾಲೆಗಳ ೯ ಮತ್ತು ೧೦ನೆಯ ತರಗತಿಗಳಿಗೆ ಪಾಠ ಬೋಧಿಸಲು ಹೊರಡಿಸಿರುವ ಸರ್ಕಾರದ ಕರಡು ಅಧಿಸೂಚನೆಯನ್ನು ಹಿಂಪಡೆಯುವಂತೆ ಆಗ್ರಹಿಸಿ ತಾಲೂಕು ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಶನಿವಾರ ನಡೆಸಿದ ಪತ್ರ ಚಳವಳಿಗೆ ಚಾಲನೆ ನೀಡಿ ಬಳಿಕ ಅವರು ''ಕನ್ನಡಪ್ರಭ''ದೊಂದಿಗೆ ಮಾತನಾಡಿದರು.

ಸರ್ಕಾರವು ಉಪನ್ಯಾಸಕರು, ಪ್ರಾಂಶುಪಾಲರು, ವಿದ್ಯಾರ್ಥಿಗಳು, ಪೋಷಕರು ಹಾಗೂ ವಿಶ್ವವಿದ್ಯಾಲಯಗಳ ಶಿಕ್ಷಣ ತಜ್ಞರ ಜತೆಗೆ ಸಮಾಲೋಚನೆ ನಡೆಸದೇ, ಅಧ್ಯಯನ ಕೈಗೊಳ್ಳದೇ ಏಕಪಕ್ಷೀಯವಾಗಿ ಕರಡು ಸೂಚನೆ ಹೊರಡಿಸಿರುವುದು ಪ್ರಜಾಸತ್ತಾತ್ಮಕ ಸರ್ಕಾರದ ಲಕ್ಷಣವಲ್ಲ ಎಂದು ಖೇದ ವ್ಯಕ್ತಪಡಿಸಿದರು.

ಕರಡು ಪ್ರಸ್ತಾವನೆ ಯಾವುದೇ ಗಂಭೀರವಾದ ಶೈಕ್ಷಣಿಕ ಸುಧಾರಣೆ ಒಳಗೊಳ್ಳದೇ ರಾಜ್ಯದ ಪದವಿಪೂರ್ವ ಶಿಕ್ಷಣ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಹಾಗೂ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಅಪಾಯದ ಪ್ರಪಾತಕ್ಕೆ ತಳ್ಳುವ ಅಧಿಕಾರಿಶಾಹಿಗಳ ಆಡಳಿತಾತ್ಮಕ ಪ್ರಯೋಗವಾಗಿದೆ ಎಂದು ಟೀಕಿಸಿದರು.

ಜಿಲ್ಲಾ ಅನುದಾನಿತ ಪದವಿಪೂರ್ವ ಕಾಲೇಜುಗಳ ನೌಕರ ಸಂಘದ ಅಧ್ಯಕ್ಷ ಜಯಪ್ರಕಾಶ್ ಮಾತನಾಡಿ, ಪ್ರೌಢಶಿಕ್ಷಣದಲ್ಲಿ ಶಿಕ್ಷಕರ ಕೊರತೆ ಇದ್ದಲ್ಲಿ ಶಿಕ್ಷಕರ ನೇಮಕಾತಿ ನಡೆಸಬೇಕು. ಬಡ್ತಿ ಮೂಲಕ ಹುದ್ದೆಗಳನ್ನು ಭರ್ತಿ ಮಾಡುವ ಜತೆಗೆ ವೈಜ್ಞಾನಿಕ ಹಾಗೂ ಸಮಗ್ರ ಮಾನವ ಸಂಪನ್ಮೂಲ ರೂಪಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಎಂ. ಹುಲುಗಪ್ಪ ಮಾತನಾಡಿ, ಕರಡು ಅಧಿಸೂಚನೆ ಹಿಂಪಡೆಯುವಂತೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಜುಲೈ ಮೊದಲ ವಾರದಲ್ಲಿ ರಾಜ್ಯಮಟ್ಟದ ಧರಣಿ ನಡೆಸಲಾಗುತ್ತದೆ. ಕೂಡಲೇ ಕರಡು ಅಧಿಸೂಚನೆ ಹಿಂಪಡೆಯಬೇಕು. ಉಪನ್ಯಾಸಕರ ಶೈಕ್ಷಣಿಕ ಶ್ರೇಷ್ಠತೆ, ವಿಷಯ ಪರಿಣತಿ, ಆಸ್ತಿತ್ವ ಮತ್ತು ಗೌರವ ಕಾಪಾಡಬೇಕು ಎಂದು ಒತ್ತಾಯಿಸಿದರು.

ಸಂಘಟನಾ ಕಾರ್ಯದರ್ಶಿ ಕೆ.ಎಂ. ಸಂತೋಷ್‌ಕುಮಾರ್, ಕಾರ್ಯದರ್ಶಿ ಎಚ್. ಬೆಟ್ಟಪ್ಪ, ಪ್ರಾಚಾರ್ಯ ಡಾ. ಎಂ.ಕೆ. ದುರುಗಪ್ಪ, ಉಪನ್ಯಾಸಕರಾದ ಗೂಳಪ್ಪ ಹುಲಿಮನಿ, ಬೇಟಿ ಮಾರುತಿ, ಎನ್. ಸಾಬುದ್ದೀನ್ ಸಾಹೇಬ್, ಟಿ. ಮಲ್ಲಿಕಾರ್ಜುನ, ಎಸ್. ಮಹೇಶ್, ಬಿ.ಜಿ. ರಾಘವೇಂದ್ರ, ಬಿ. ಚಿರಂಜೀವಿ ಆಚಾರ್, ಜೆ.ಬಿ. ನಾಗರಾಜ್, ವಿಶ್ವನಾಥ್, ಬಸವರಾಜ, ಸಿದ್ಧಪ್ಪ, ನಿತೀನ್, ಗುರುಬಸವರಾಜ್, ಉಮಾ ಹಾಗೂ ಅನ್ನಪೂರ್ಣಾ ಪಾಲ್ಗೊಂಡಿದ್ದರು.

ಉಪನ್ಯಾಸಕರ ಹಿಂಬಡ್ತಿಗೆ ತೀವ್ರ ವಿರೋಧ, ಹೋರಾಟಕ್ಕೆ ಅಣಿ

ಸರ್ಕಾರ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರನ್ನು 9 ಮತ್ತು 10ನೇ ತರಗತಿಗೆ ಪಾಠ ಬೋಧನೆ ಮಾಡುವಂತೆ ತಿದ್ದುಪಡಿ ಮಾಡಿ ಕರಡು ಪ್ರತಿ ಹೊರಡಿಸಿರುವುದು ನಿಯಮಬಾಹಿರವಾಗಿದ್ದು, ಅದರ ವಿರುದ್ಧ 3 ಹಂತಗಳಲ್ಲಿ ಹೋರಾಟಗಳನ್ನು ಹಮ್ಮಿಕೊಳ್ಳಲು ಮುಂದಾಗಿದ್ದೇವೆ ಎಂದು ಕೊಟ್ಟೂರು ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರು ತಿಳಿಸಿದ್ದಾರೆ.ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಪನ್ಯಾಸಕರು, ಯಾವುದೇ ತಜ್ಞರ ಸಮಿತಿಗಳನ್ನು ನೇಮಕ ಮಾಡದೇ ಏಕಪಕ್ಷೀಯವಾಗಿ ಸರ್ಕಾರ ನಿರ್ಧಾರ ತೆಗೆದುಕೊಂಡು ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ಹಿಂಬಡ್ತಿಯಾಗುವಂತೆ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.ಪದವಿಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರ ಹುದ್ದೆ ಬಿ ಶ್ರೇಣಿಯಾಗಿದ್ದು, ಪ್ರೌಢಶಾಲಾ ಶಿಕ್ಷಕರ ಹುದ್ದೆಯಾದ ಸಿ ಶ್ರೇಣಿಗೆ ಹಿಂಬಡ್ತಿಯಾಗುವಂತೆ ಮಾಡಿದ್ದು, ಇದನ್ನು ವಿರೋಧಿಸಿ ಉಪನ್ಯಾಸಕರು ಈಗಾಗಲೇ ರಾಜ್ಯದಲ್ಲೆಡೆ ಪತ್ರ ಚಳವಳಿ ಮೂಲಕ ಹೋರಾಟ ಆರಂಭಿಸಿದ್ದಾರೆ. ಎರಡನೇ ಹಂತವಾಗಿ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ತಿದ್ದುಪಡಿ ಹಿಂಪಡೆಯುವಂತೆ ಒತ್ತಾಯಿಸಿದ್ದೇವೆ. ಮುಂದಿನ ದಿನಗಳಲ್ಲಿ ಸರ್ಕಾರ ಇದನ್ನು ಕೈಬಿಡದಿದ್ದರೆ ರಾಜ್ಯದಲ್ಲಿನ ಉಪನ್ಯಾಸಕರು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಧರಣಿ ಕೈಗೊಳ್ಳುತ್ತೇವೆ. ಇದರಿಂದ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆ ಬಾಧಿಸುವ ಜತೆಗೆ 9 ಮತ್ತು 10ನೇ ತರಗತಿಗೆ ನಿಯೋಜನೆಗೊಳ್ಳುವುದರಿಂದ ಉಪನ್ಯಾಸಕರಿಗೆ ಮತ್ತಷ್ಟು ಒತ್ತಡ ಬೀಳುತ್ತದೆ ಎಂದು ಹೇಳಿದರು.ಕೊಟ್ಟೂರು ತಾಲೂಕು ಪದವಿಪೂರ್ವ ಕಾಲೇಜುಗಳ ಸಂಘದ ಅಧ್ಯಕ್ಷ ಜಗದೀಶಚಂದ್ರ ಬೋಸ್, ಕಾರ್ಯದರ್ಶಿ ರೇಣುಕಾಸ್ವಾಮಿ, ಕೆ.ಎಂ. ಜಯಣ್ಣ, ಪ್ರಶಾಂತ್, ಅಂಜಿನಪ್ಪ ಡಿ, ಶಶಿರೇಖಾ, ಪರಶುರಾಮಪ್ಪ, ಸಿದ್ದಲಿಂಗನಗೌಡ, ಎಂ. ಸಕ್ರಪ್ಪ ರೆಡ್ಡಿ, ಕೆ. ಮೂಗಪ್ಪ, ನಾಗಯ್ಯ, ಕರಿಬಸಪ್ಪ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚರಂಡಿ ಸಮಸ್ಯೆಗೆ ರಸ್ತೆ ತಡೆ ಪ್ರತಿಭಟನೆ
ಹಾವೇರಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ: ಕಲಾಪ ಸ್ಥಗಿತ, ತಪಾಸಣೆ ನಡೆಸಿದ ಪೊಲೀಸರು