ಮನ್‌ಮುಲ್‌ ಹಗರಣ ಸಿಬಿಐ ತನಿಖೆಗೆ ಅಮಿತ್‌ ಶಾಗೆ ಪತ್ರ: ಸಚ್ಚಿದಾನಂದ

KannadaprabhaNewsNetwork |  
Published : Oct 09, 2026, 01:30 AM IST
ಸಚ್ಚಿದಾನಂದ | Kannada Prabha

ಸಾರಾಂಶ

ಸಾವಿರಾರು ಮಂದಿ ಹಾಲು ಉತ್ಪಾದಕರ ಪರಿಶ್ರಮ ಹಾಗೂ ಕೊಡುಗೆಯಿಂದ ಮಂಡ್ಯ ಹಾಲು ಒಕ್ಕೂಟ ಯಶಸ್ವಿಯಾಗಿ ನಡೆಯುತ್ತಿದ್ದು, ಇತ್ತೀಚಿನ ಕೆಲ ಆಡಳಿತ ಮಂಡಳಿಗಳ ಬೇಜವಾಬ್ದಾರಿ, ಧನದಾಹತನದಿಂದಾಗಿ ರೈತರು ಮತ್ತು ಮನ್‌ಮುಲ್ ಸಂಕಷ್ಟ ಸ್ಥಿತಿಗೆ ದೂಡುವಂತಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲಾ ಹಾಲು ಒಕ್ಕೂಟದಲ್ಲಿ ನಡೆದಿರುವ ಕಲಬೆರಕೆ ಹಾಲಿನ ಪುಡಿ ಪ್ರಕರಣ, ನೇಮಕಾತಿಯಲ್ಲಿ ಅಕ್ರಮ, ಹಾಲು ನೀರು ಪ್ರಕರಣ ಸೇರಿದಂತೆ ಹಲವು ಅಕ್ರಮಗಳ ಕುರಿತು ಸಿಬಿಐನಿಂದ ಸಮಗ್ರ ತನಿಖೆ ನಡೆಸುವಂತೆ ಶ್ರೀರಂಗಪಟ್ಟಣ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಯುವ ಮುಖಂಡ ಎಸ್.ಸಚ್ಚಿದಾನಂದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

ಸಾವಿರಾರು ಮಂದಿ ಹಾಲು ಉತ್ಪಾದಕರ ಪರಿಶ್ರಮ ಹಾಗೂ ಕೊಡುಗೆಯಿಂದ ಮಂಡ್ಯ ಹಾಲು ಒಕ್ಕೂಟ ಯಶಸ್ವಿಯಾಗಿ ನಡೆಯುತ್ತಿದ್ದು, ಇತ್ತೀಚಿನ ಕೆಲ ಆಡಳಿತ ಮಂಡಳಿಗಳ ಬೇಜವಾಬ್ದಾರಿ, ಧನದಾಹತನದಿಂದಾಗಿ ರೈತರು ಮತ್ತು ಮನ್‌ಮುಲ್ ಸಂಕಷ್ಟ ಸ್ಥಿತಿಗೆ ದೂಡುವಂತಾಗಿದೆ ಎಂದು ತಿಳಿಸಿದ್ದಾರೆ.

ಮಂಡ್ಯ ಹಾಲು ಒಕ್ಕೂಟದಲ್ಲಿ ಈ ಹಿಂದಿನ ಆಡಳಿತ ಮಂಡಳಿಯ ಆರ್ಥಿಕ ಭ್ರಷ್ಟಾಚಾರ ಸಾಭೀತಾದ ಹಿನ್ನೆಲೆಯಲ್ಲಿ 72 ಕೋಟಿ ರು.ಗಳನ್ನು ಪಾವತಿಸುವಂತೆ ಸಹಕಾರ ಇಲಾಖೆಯ ನ್ಯಾಯಾಲಯ ಆದೇಶ ನೀಡಿತ್ತು. ಆದರೆ, ಹಿಂದಿನ ಆಡಳಿತ ಮಂಡಳಿ ಹಣ ಪಾವತಿಸದೆ ನಿರ್ಲಕ್ಷ್ಯ ವಹಿಸಿದ್ದರು. ಅದಕ್ಕೆ ಸರ್ಕಾರವೂ ಕಾರಣವಾಗಿತ್ತು ಎಂದು ಆರೋಪಿಸಿದ್ದಾರೆ.

ಮಂಡ್ಯ ಹಾಲು ಒಕ್ಕೂಟಕ್ಕೆ ಸಿಬ್ಬಂದಿ ಮತ್ತು ಅಧಿಕಾರಿಗಳ ನೇಮಕಾತಿಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ. ಅಂದಿನ ಆಡಳಿತ ಮಂಡಳಿ ಭ್ರಷ್ಟಾಚಾರದಲ್ಲಿ ತೊಡಗಿತ್ತು. ನಂತರದ ದಿನಗಳಲ್ಲಿ ಹಾಲಿಗೆ ನೀರು ಬೆರೆಸಿ ಲಕ್ಷಾಂತರ ಮಂದಿ ನಂದಿನಿ ಗ್ರಾಹಕರಿಗೆ ವಂಚನೆ ಮಾಡಲಾಗಿತ್ತು. ಈ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದ್ದು, ಸಿಐಡಿ ತನಿಖೆಯಲ್ಲಿ ಕೇವಲ ಸಂಬಂಧಿಸಿದ ಲಾರಿ ಚಾಲಕ ಮತ್ತು ಕ್ಲೀನರ್ ಲೋಪವನ್ನಷ್ಟೇ ದಾಖಲಿಸಿ ಅವರ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿ ಕೈತೊಳೆದುಕೊಂಡಿತ್ತು ಎಂದು ದೂರಿದ್ದಾರೆ.

ಇದೀಗ ಹಾಲಿನ ಪುಡಿ ವಿಚಾರದಲ್ಲೂ ಸಹ ಅಕ್ರಮ ನಡೆದಿದ್ದು, ಇದಕ್ಕೆ ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷರು ಸೇರಿದಂತೆ ಹಲವಾರು ಮಂದಿ ಅಧಿಕಾರಿ ಮತ್ತು ಸಿಬ್ಬಂದಿ ಭಾಗಿಯಾಗಿದ್ದಾರೆ ಎಂದು ಈಗಾಗಲೇ ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಆದರೆ, ಆಡಳಿತ ಮಂಡಳಿಯ ಕೆಲ ನಿರ್ದೇಶಕರೂ ಸಹ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆನ್ನಲಾಗಿದ್ದು, ಕೋಟ್ಯಂತರ ರು. ಅವ್ಯವಹಾರ ನಡೆದಿರುವುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.

ಕೋಟ್ಯಂತರ ರು.ಗಳ ಆರ್ಥಿಕ ನಷ್ಟ ಉಂಟುಮಾಡಿರುವ ಆಡಳಿತ ಮಂಡಳಿಯನ್ನು ಸೂಪರ್‌ಸೀಡ್ ಮಾಡಿ ಸಿಬಿಐ ನಂತರ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸುವುದು ಇಲ್ಲವೇ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಉನ್ನತ ಮಟ್ಟದ ತನಿಖೆ ನಡೆಸಿದಾಗ ಮಾತ್ರ ಸತ್ಯಾಂಶ ಬೆಳಕಿಗೆ ಬರಲಿದ್ದು, ಇದರಿಂದ ಹಾಲು ಉತ್ಪಾದನೆಯನ್ನೇ ನಂಬಿ ಬದುಕುವ ರೈತರಿಗೆ ಹಾಗೂ ನಂದಿನಿ ಉತ್ಪನ್ನಗಳನ್ನು ಬಳಸುವ ಗ್ರಾಹಕರಿಗೆ ನಿಜವಾದ ನ್ಯಾಯ ಒದಗಿಸಿದಂತಾಗುತ್ತದೆ. ಅಲ್ಲದೇ, ನಂದಿನಿ ಉತ್ಪನ್ನಗಳ ಮೇಲೆ ಗ್ರಾಹಕರು ಇಟ್ಟಿರುವ ನಂಬಿಕೆಯನ್ನು ಉಳಿಸಲು ಸಾಧ್ಯ ಎಂದು ಸಚ್ಚಿದಾನಂದ ಅವರು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್‌ಐಆರ್‌ ರದ್ದತಿಗೆ ಆಗ್ರಹಿಸಿ ಕಾಂಗ್ರೆಸ್‌ ಪ್ರತಿಭಟನೆ
ಚನ್ನಗಿರಿಯಲ್ಲಿ ಫ್ರೀ ಫೈರ್‌ ಗೇಮ್‌ಗೆ ಅಪ್ರಾಪ್ತ ಬಲಿ!