ಹಾನಗಲ್ಲ: ವಿಮಾ ಪರಿಹಾರ ಬಿಡುಗಡೆ ತ್ವರಿತಗತಿಯಲ್ಲಿ ಆಗಲು ಕ್ರಮ ವಹಿಸುವಂತೆ ಹಾವೇರಿ, ಗದಗ ಸಂಸದ ಬಸವರಾಜ ಬೊಮ್ಮಾಯಿ ಅವರಿಗೆ ಶಾಸಕ ಶ್ರೀನಿವಾಸ ಮಾನೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಜಿಲ್ಲೆಯಲ್ಲಿ ೨೦೨೩ನೇ ಸಾಲಿನ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆವಿಮಾ ಪರಿಹಾರ ಬಿಡುಗಡೆಗೆ ಸಂಬಂಧಿಸಿದಂತೆ ರಿಲಯನ್ಸ್ ಜನರಲ್ ಇನ್ಸೂರೆನ್ಸ್ ವಿಮಾ ಕಂಪನಿ ಕೇಂದ್ರ ಸರ್ಕಾರಕ್ಕೆ ಮೇಲ್ಮನವಿ ಸಲ್ಲಿಸಿದ್ದರಿಂದ ವಿಮಾ ಪರಿಹಾರ ಬಿಡುಗಡೆ ವಿಳಂಬವಾಗಿದೆ. ಮೇಲ್ಮನವಿ ತಿರಸ್ಕರಿಸಿ ರೈತರಿಗೆ ವಿಮಾ ಪರಿಹಾರ ಬಿಡುಗಡೆಗೊಳಿಸಲು ಕೇಂದ್ರ ಸರ್ಕಾರ ಆದೇಶಿಸಿದರೆ ಸಂಕಷ್ಟದಲ್ಲಿರುವ ರೈತ ಸಮೂಹಕ್ಕೆ ಆಸರೆಯಾಗಲಿದೆ. ಈ ನಿಟ್ಟಿನಲ್ಲಿ ಕಾಳಜಿ ವಹಿಸುವಂತೆ ಅವರು ಮನವಿ ಮಾಡಿದ್ದಾರೆ.ಜಿಲ್ಲೆಯಲ್ಲಿ ಸಾಕಷ್ಟು ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಯುತ ಬೆಳೆವಿಮಾ ಪರಿಹಾರ ಬಿಡುಗಡೆಗೆ ರಿಲಯನ್ಸ್ ಜನರಲ್ ಇನ್ಸೂರೆನ್ಸ್ ವಿಮಾ ಕಂಪನಿ ಕ್ಯಾತೆ ತೆಗೆದಿದ್ದು, ಆಕ್ಷೇಪಣೆ ಸಲ್ಲಿಸಿದೆ. ಕಳೆದ ಜೂ. ೧೯ರಂದು ವಿಮಾ ಕಂಪನಿಯ ಆಕ್ಷೇಪಣೆಯನ್ನು ರಾಜ್ಯ ತಾಂತ್ರಿಕ ಸಲಹಾ ಸಮಿತಿ ತಿರಸ್ಕೃತಗೊಳಿಸಿದೆ. ಆ ಮೂಲಕ ರಾಜ್ಯ ಸರ್ಕಾರ ಎಲ್ಲ ಹಂತಗಳಲ್ಲಿಯೂ ಆಕ್ಷೇಪಣೆ ತಿರಸ್ಕೃತಗೊಳಿಸಿ ರೈತ ಸಮೂಹಕ್ಕೆ ಬೆಳೆವಿಮಾ ಪರಿಹಾರ ಬಿಡುಗಡೆಗೆ ಆದೇಶಿಸಿದೆ. ಆದರೀಗ ವಿಮಾ ಕಂಪನಿ ಕೇಂದ್ರ ಸರ್ಕಾರದ ಮೊರೆ ಹೋಗಿದ್ದು, ಅಲ್ಲಿ ಆಕ್ಷೇಪಣೆ ಸಲ್ಲಿಸಿದೆ. ಇದರಿಂದ ಇದುವರೆಗೂ ರೈತರಿಗೆ ಬೆಳೆವಿಮಾ ಪರಿಹಾರ ಗಗನಕುಸುಮವಾಗಿದೆ ಎಂದು ಶ್ರೀನಿವಾಸ ಮಾನೆ ಬೇಸರ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರ ರೈತ ಸಮೂಹದ ಹಿತದೃಷ್ಟಿಯಿಂದ ಬಾಕಿ ಉಳಿಸಿಕೊಂಡಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ರಿಲಯನ್ಸ್ ಜನರಲ್ ಇನ್ಸೂರೆನ್ಸ್ ಕಂಪನಿಯ ಆಕ್ಷೇಪಣೆ ತಿರಸ್ಕೃತಗೊಳಿಸಿ, ವಿಮಾ ಪರಿಹಾರ ಬಿಡುಗಡೆಗೊಳಿಸುವಂತೆ ಆದೇಶಿಸಲು ಪ್ರಯತ್ನಿಸಿ ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.₹೯.೫೫ ಕೋಟಿ ಬೆಳೆವಿಮಾ ಪರಿಹಾರ ಬಿಡುಗಡೆ: ಹಾನಗಲ್ ತಾಲೂಕಿನಲ್ಲಿ ೨೦೨೩ರ ಮುಂಗಾರು ಹಂಗಾಮಿನಲ್ಲಿ ಫಸಲ್ ಬಿಮಾ ಯೋಜನೆಯಡಿ ನೋಂದಾಯಿಸಿಕೊಂಡಿದ್ದ ೨೨,೪೦೦ ರೈತ ಫಲಾನುಭವಿಗಳಿಗೆ ಒಟ್ಟು ₹೯.೫೫ ಕೋಟಿ ಮಧ್ಯಂತರ ಬೆಳೆವಿಮಾ ಪರಿಹಾರ ಬಿಡುಗಡೆಯಾಗಿದ್ದು, ಈಗಾಗಲೇ ಖಾತೆಗಳಿಗೂ ಪಾವತಿಯಾಗಿದೆ. ಅಂತಿಮ ಪಾವತಿಯು ಗ್ರಾಮ ಪಂಚಾಯಿತಿವಾರು ಬೆಳೆ ಕಟಾವು ಪ್ರಯೋಗಗಳ ಇಳುವರಿ ಆಧಾರಿತವಾಗಿದ್ದು, ಸರಾಸರಿ ಕಳೆದ ೩ ವರ್ಷಗಳ ಇಳುವರಿ ಆಧಾರದ ಮೇಲೆ ಕಡಿಮೆ ದಾಖಲಾದ ಪಂಚಾಯಿತಿಗಳಿಗೆ ಬೆಳೆವಿಮಾ ಪರಿಹಾರ ನೀಡಲಾಗುತ್ತಿದೆ ಎಂದು ಶ್ರೀನಿವಾಸ ಮಾನೆ ತಿಳಿಸಿದ್ದಾರೆ.