ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾದ ನಂತರ ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೆ ದೇಶಾದ್ಯಂತ ಆನ್‌ಲೈನ್ ಹಣಕಾಸು ವ್ಯವಹಾರ ಸ್ಥಗಿತಗೊಳಿಸುವದು ಸೇರಿದಂತೆ ಹಲವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಜೈ ಭಾರತ ಮಾತಾ ಸೇವಾ ಸಮಿತಿ ಒತ್ತಾಯಿಸಿದೆ.ಸಮಿತಿ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷ ಸದ್ಗುರು ಹವಾ ಮಲ್ಲಿನಾಥ ಮಹಾರಾಜರ ಮಾರ್ಗದರ್ಶನದಂತೆ ಸಮಿತಿ ರಾಷ್ಟ್ರೀಯ ವಕ್ತಾರ ವೈಜನಾಥ ಝಳಕಿ, ರಾಜ್ಯ ಸಮಿತಿ ಪ್ರಮುಖರಾದ ನಿವೃತ್ತ ಪೊಲೀಸ್ ಅಧಿಕಾರಿಗಳಾದ ಎಸ್.ವಿ. ಆವಂಟಿ, ಗುರುಸಿದ್ದಪ್ಪ ಬೆನಕನಳ್ಳಿ ಅವರು ಗುರುವಾರ ಬೆಂಗಳೂರಿನಲ್ಲಿ ರಾಜ್ಯ ಚುನಾವಣಾ ಆಯುಕ್ತರ ಮೂಲಕ ಭಾರತ ಚುನಾವಣಾ ಆಯೋಗದ ಮುಖ್ಯ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿ ವಿವಿಧ ಬೇಡಿಕೆ ಮುಂದಿಟ್ಟಿದ್ದಾರೆ.
ಪ್ರತಿಯೊಬ್ಬರು ಮತದ ಹಕ್ಕನ್ನು ದೇಶದ ಹಿತ ಹಾಗೂ ಪ್ರಜಾಪ್ರಭುತ್ವ, ಸಂವಿಧಾನ ಗಟ್ಟಿಗೊಳಿಸಲು ಬಳಸಬೇಕು. ಯಾವುದೇ ಕಾರಣಕ್ಕೂ ಚುನಾವಣೆ ವ್ಯವಸ್ಥೆಯಲ್ಲಿ ಅಕ್ರಮಗಳು ನಡೆಯಬಾರದು. ಈ ದಿಸೆಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ದೇಶದ ಜನರಲ್ಲಿ ರಾಷ್ಟ್ರಪ್ರೇಮ ಮೂಡಬೇಕು ಎಂದು ತಿಳಿಸಿದ್ದಾರೆ. ಎಲ್ಲಕಿಂತಲೂ ರಾಷ್ಟ್ರಧರ್ಮ ಶ್ರೇಷ್ಠ ಎಂಬ ಸಂದೇಶ ಸಾರುತ್ತ ಜೈ ಭಾರತ ಮಾತಾ ಸೇವಾ ಸಮಿತಿ ಸಂಸ್ಥಾಪಕರಾದ ಹವಾ ಮಲ್ಲಿನಾಥ ಮಹಾರಾಜ ಅವರು ದೇಶವ್ಯಾಪಿ ಸಂಚರಿಸುತ್ತಿದ್ದಾರೆ. ಪಾರದರ್ಶಕ ಚುನಾವಣೆ ನಡೆಯಬೇಕು ಹಾಗೂ ಯೋಗ್ಯರ ಆಯ್ಕೆ ಆಗಬೇಕೆಂಬುವದು ಪೂಜ್ಯರ ಆಶಯವಾಗಿದೆ. ಅವರ ಮಾರ್ಗದರ್ಶನದಲ್ಲಿ ಬರುವ ದಿನಗಳಲ್ಲಿ ಇನ್ನಷ್ಟು ಜನಜಾಗೃತಿ ಮತ್ತು ಸಮಾಜಮುಖಿ ಕಾರ್ಯಕ್ರಮಗಳು ಜರುಗಲಿವೆ ಎಂದು ವೈಜಿನಾಥ ಝಳಕಿ ತಿಳಿಸಿದ್ದಾರೆ.