ಕನ್ನಡಪ್ರಭ ವಾರ್ತೆ ಸಕಲೇಶಪುರ
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪಟ್ಟಣದ ಹೊಸ ಬಸ್ ನಿಲ್ದಾಣದ ಎದುರು ನಿಲುಗಡೆ ಮಾಡಲಾಗುವ ಆಟೋ ಚಾಲಕರು ಹಾಗೂ ಕಾರು ಚಾಲಕರು ವಿದ್ಯಾರ್ಥಿನಿಯೊಬ್ಬರನ್ನು ಮಾನಸಿಕವಾಗಿ ಘಾಸಿಗೊಳಿಸಿ ಮೈಮುಟ್ಟಿ ಎಳೆದಾಡುವ ಮೂಲಕ ಹಿಂಸೆ ನೀಡಿದ್ದಾರೆ. ಆದ್ದರಿಂದ ಇಲ್ಲಿರುವ ಆಟೋ ಹಾಗೂ ಕಾರು ನಿಲ್ದಾಣವನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿನಿ ಹೆಸರಿನಲ್ಲಿ ಅನಾಮಧೇಯವಾಗಿ ಬರೆದಿರುವ ಪತ್ರ ರಾರಾಜಿಸುತ್ತಿದೆ. ಇದರಿಂದಾಗಿ ಇಡೀ ಪಟ್ಟಣದ ಗೌರವಾನ್ವಿತ ಆಟೋ ಚಾಲಕರು ತಲೆತಗ್ಗಿಸುವಂತೆ ಮಾಡಿದೆ. ಈ ಆರೋಪ ಇಡೀ ಆಟೋ ಚಾಲಕರ ವಿರುದ್ಧ ನಡೆದಿರುವ ಷಡ್ಯಂತ್ರವಾಗಿದೆ. ಇದು ವಿದ್ಯಾರ್ಥಿನಿಯ ಹೆಸರಿನಲ್ಲಿ ಕಿಡಿಗೇಡಿಯೊಬ್ಬರು ನಡೆಸಿರುವ ಷಡ್ಯಂತ್ರ ಎಂಬುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ. ಆದ್ದರಿಂದ ಇದನ್ನು ತಾಲೂಕು ಆಡಳಿತ ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ ಮನವಿಯನ್ನು ಉಪವಿಭಾಗಾಧಿಕಾರಿ ಕಚೇರಿ ತಹಸೀಲ್ದಾರ್ ವಿಖಾರ್ ಆಹಮ್ಮದ್ ಅವರಿಗೆ ಸಲ್ಲಿಸಿದರು.
ಈ ವೇಳೆ ಆಟೋ ಚಾಲಕರ ಸಂಘದ ಅಧ್ಯಕ್ಷ ಪುಟ್ಟರಾಜು, ಯುವರಾಜ್, ಸಂತೋಷ ಶೆಟ್ಟಿ, ಚೇತನ್ ಮುಂತಾದವರಿದ್ದರು.