ಪಾಲಿಕೆಗೆ ತೆರಿಗೆ ಕಟ್ಟಿ ಅಭಿವೃದ್ಧಿಗೆ ಸ್ಪಂದನೆ ಶ್ಲಾಘನೀಯ

KannadaprabhaNewsNetwork |  
Published : Dec 01, 2024, 01:32 AM IST
(ಶಾಮನೂರು ಶಿವಶಂಕರಪ್ಪ) | Kannada Prabha

ಸಾರಾಂಶ

ನಮ್ಮನ್ನು ಊರಿಗೆ ಯಜಮಾನರು ಅಂತಾ ಮಾಡುತ್ತಿದ್ದಾರೆ. ಯಾವುದರಲ್ಲಿ ಅಂದರೆ ವಯಸ್ಸಿನಲ್ಲಿ. ನಾವು ಹಿರಿಯರು ಅಂತಾ ಗೌರವಿಸುವ ಕೆಲಸ ಮಾಡಿದ್ದು, ಕೆಲವು ಸಂದರ್ಭದಲ್ಲಿ ನಮ್ಮ ಮಾತನ್ನು ನೀವು ಕೇಳಬೇಕಾಗುತ್ತದೆ ಎಂದು ದಾವಣಗೆರೆ ಮಹಾನಗರದ ಹಿರಿಯರಲ್ಲೊಬ್ಬರಾದ ಶಾಸಕ, ಮಾಜಿ ಸಚಿವ ಡಾ.ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.

- ಗೌರವ ಸ್ವೀಕರಿಸಿ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿಕೆ । ಪಾಲಿಕೆ ರಾಜ್ಯೋತ್ಸವದಲ್ಲಿ ಅಮೃತ ಪುರುಷರಿಗೆ ನಾಗರೀಕ ಪೌರ ಸನ್ಮಾನ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ನಮ್ಮನ್ನು ಊರಿಗೆ ಯಜಮಾನರು ಅಂತಾ ಮಾಡುತ್ತಿದ್ದಾರೆ. ಯಾವುದರಲ್ಲಿ ಅಂದರೆ ವಯಸ್ಸಿನಲ್ಲಿ. ನಾವು ಹಿರಿಯರು ಅಂತಾ ಗೌರವಿಸುವ ಕೆಲಸ ಮಾಡಿದ್ದು, ಕೆಲವು ಸಂದರ್ಭದಲ್ಲಿ ನಮ್ಮ ಮಾತನ್ನು ನೀವು ಕೇಳಬೇಕಾಗುತ್ತದೆ ಎಂದು ದಾವಣಗೆರೆ ಮಹಾನಗರದ ಹಿರಿಯರಲ್ಲೊಬ್ಬರಾದ ಶಾಸಕ, ಮಾಜಿ ಸಚಿವ ಡಾ.ಶಾಮನೂರು ಶಿವಶಂಕರಪ್ಪ ಹೇಳಿದರು.

ನಗರದ ಪಾಲಿಕೆ ಆವರಣದಲ್ಲಿ ಶನಿವಾರ ಮಹಾನಗರ ಪಾಲಿಕೆ, ಕನ್ನಡಪರ ಸಂಘ-ಸಂಸ್ಥೆಗಳು, ಪತ್ರಕರ್ತರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 69ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ದಾವಣಗೆರೆ ನಗರದ ಅಮೃತ ಪುರುಷರಿಗೆ ನಾಗರೀಕ ಪೌರಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

52 ವರ್ಷಗಳ ಹಿಂದೆ ನಗರಸಭೆ ಅಧ್ಯಕ್ಷನಾಗಿದ್ದಾಗ ಖರ್ಚು ಮಾಡಲು, ಸಂಬಳ ಕೊಡುವುದಕ್ಕೂ ಹಣ ಇರುತ್ತಿರಲಿಲ್ಲ. 1972ರಲ್ಲಿ ಅಂದಿನ ಮುನ್ಸಿಪಾಲಿಟಿಯಲ್ಲಿ ಹಣವೇ ಇರುತ್ತಿರಲಿಲ್ಲ. ಹಾಗಾಗಿ ಯಾವುದಕ್ಕೂ ಹಣವನ್ನೇ ಖರ್ಚು ಮಾಡುತ್ತಿರಲಿಲ್ಲ. ಈಗ ಮಹಾಜನತೆ ಕಾಲಕಾಲಕ್ಕೆ ತೆರಿಗೆ ಪಾವತಿಸುವ ಮೂಲಕ ಪಾಲಿಕೆಯ ಆರ್ಥಿಕ ಶಕ್ತಿ ಹೆಚ್ಚಿಸಿದ್ದಾರೆ. ಕಾಲಕಾಲಕ್ಕೆ ತೆರಿಗೆ ಪಾವತಿಸಿ, ಊರಿನ ಅಭಿವೃದ್ಧಿಗೆ ಜನರೂ ಕೈ ಜೋಡಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.

ಪಾಲಿಕೆಗೆ 3-4 ತಿಂಗಳಲ್ಲೇ ಮತ್ತೆ ಚುನಾವಣೆ ಬರಲಿದೆ. ಮತ್ತೆ ನಮ್ಮ ಕಾಂಗ್ರೆಸ್ ಪಕ್ಷ ಗೆದ್ದು ಬಂದರೆ ಅಲ್ಲ, ನಮ್ಮ ಕಾಂಗ್ರೆಸ್ ಪಕ್ಷವೇ ಗೆದ್ದು ಅಧಿಕಾರಕ್ಕೆ ಬರುತ್ತದೆ. ಆಗಲೂ ಮುಂದೆ ಕನ್ನಡ ರಾಜ್ಯೋತ್ಸವವನ್ನು ಇದೇ ರೀತಿ ಅದ್ಧೂರಿಯಾಗಿ ಮಾಡಬೇಕಾಗುತ್ತದೆ. ಆಗ ಮಾಡದಿದ್ದರೆ, ಚಮನ್ ಸಾಬ್‌ರ ಅವಧಿಯಲ್ಲಿ ಮಾಡಿದ್ದೀರಿ, ಈಗ ಯಾಕೆ ಮಾಡುವುದಿಲ್ಲವೆಂದು ಆಗ ಅಧಿಕಾರ ಮಾಡುವವರು ಪ್ರಶ್ನೆ ಕೇಳುವಂತಾಗುತ್ತದೆ ಎಂದ ಅವರು, ಪೌರ ನಾಗರೀಕ ಸನ್ಮಾನ ನಮ್ಮಲ್ಲಿ ಉತ್ಸಾಹ ಹೆಚ್ಚಿಸಿದ್ದು, ಮತ್ತಷ್ಟು ಕೆಲಸ ಮಾಡಲು ಸ್ಫೂರ್ತಿ ನೀಡಿದೆ ಎಂದರು.

ರಾಜ್ಯೋತ್ಸವದ ಮೂರು ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇನೆ. ನಮ್ಮ ಮೇಷ್ಟ್ರು ಇಮಾಂ ಸಾಹೇಬರು, ಚನ್ನಗಿರಿ ವಿರುಪಾಕ್ಷಪ್ಪನವರು, ಎಸ್.ಎಂ. ಎಲಿ ಡಾಕ್ಟರ್‌ ಜೊತೆಗೆ ನನಗೂ ಪೌರ ಸನ್ಮಾನ ಅಂತಾ ಮಾಡಿದ್ದೀರಿ. ನೀವೂ ಹೆಚ್ಚು ಹೆಚ್ಚಿನದಾಗಿ ಕೆಲಸ ಮಾಡುವ ಮೂಲಕ ಮಹಾ ನಗರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿ ಎಂದು ತಿಳಿಸಿದರು.

ಸನ್ಮಾನಿತರಾದ ಡಾ. ಎಸ್.ಎಂ. ಎಲಿ ಮಾತನಾಡಿ, ಈ ಸನ್ಮಾನ ವೈಯಕ್ತಿಕ ಅಲ್ಲ, ನಾಗರೀಕ ಸನ್ಮಾನವಾಗಿದೆ. ಕರ್ನಾಟಕ ಹರಿದು ಹಂಚಿ ಹೋಗಿದ್ದ ರಾಜ್ಯ ಕರ್ನಾಟಕವಾಗಿ ಒಗ್ಗೂಡಿ, ಈಗ 69ನೇ ವರ್ಷಕ್ಕೆ ಕಾಲಿಟ್ಟಿದೆ. ನಾಡು, ನುಡಿ, ನಾಡು ಬಗ್ಗೆ ಎಲ್ಲರಿಗೂ ಅಭಿಮಾನ ಇರಬೇಕು. ನಾವು ಮಾತನಾಡುವ ಭಾಷೆ ಕನ್ನಡ, ಆಡಳಿತ ಭಾಷೆ ಇದು. ಪ್ರೀತಿಯ ಈ ಭಾಷೆಯನ್ನು ಪ್ರೀತಿ, ಅಭಿಮಾನದಿಂದ ನಾವೆಲ್ಲರೂ ಉಳಿಸಬೇಕು ಎಂದರು.

ಸನ್ಮಾನಿತರಾದ ಚನ್ನಗಿರಿ ವಿರೂಪಾಕ್ಷಪ್ಪ, ಬಾಪೂಜಿ ಶಾಲೆಯ ನಿವೃತ್ತ ನಿರ್ದೇಶಕ, ಶಿಕ್ಷಣ ತಜ್ಞ ಕೆ.ಇಮಾಂ ಮಾತನಾಡಿ, ನಗರ ಪಾಲಿಕೆ ಸನ್ಮಾನಿಸುತ್ತಿರುವುದಕ್ಕೆ ಕೃತಜ್ಞತೆ ಅರ್ಪಿಸಿದರು. ಮೇಯರ್ ಕೆ.ಚಮನ್ ಸಾಬ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ರಂಜಾನ್ ದರ್ಗಾ ಉಪನ್ಯಾಸ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್‌.ಮಲ್ಲಿಕಾರ್ಜುನ, ಮಾಜಿ ಸಚಿವ ಎಚ್.ಆಂಜನೇಯ, ಚಿತ್ರನಟ ಡಾಲಿ ಧನಂಜಯ, ಶಾಸಕರಾದ ಬಸವರಾಜ ವಿ.ಶಿವಗಂಗಾ, ವಿಪ ಸದಸ್ಯ ಕೆ.ಎಸ್‌.ನವೀನ, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಉಪ ಮೇಯರ್ ಸೋಗಿ ಶಾಂತಕುಮಾರ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಎಸ್ಪಿ ಉಮಾ ಪ್ರಶಾಂತ ಮಾತನಾಡಿದರು.

ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸವಿತಾ ಗಣೇಶ ಹುಲ್ಮನಿ, ಸುಧಾ ಇಟ್ಟಿಗುಡಿ, ಆಶಾ ಉಮೇಶ, ಉರಬಾನಿ ಪಂಡಿತ್‌, ಆಯುಕ್ತೆ ರೇಣುಕಾ, ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಇ.ಎಂ.ಮಂಜುನಾಥ, ವರದಿಗಾರರ ಕೂಟದ ಗೌರವಾಧ್ಯಕ್ಷ ಬಿ.ಎನ್.ಮಲ್ಲೇಶ, ಉಪಾಧ್ಯಕ್ಷರಾದ ಕೆ.ಚಂದ್ರಣ್ಣ, ಸಿಕಂದರ್, ಜಿ.ಎಸ್.ಮಂಜುನಾಥ ಗಡಿಗುಡಾಳ, ಎ.ನಾಗರಾಜ, ಅಬ್ದುಲ್ ಲತೀಫ, ಎ.ಬಿ.ರಹೀಂ ಸಾಬ್‌, ಸುರಭಿ ಶಿವಕುಮಾರ, ಎಲ್.ಎಂ.ಎಚ್.ಸಾಗರ್‌, ಸೈಯದ್ ಚಾರ್ಲಿ, ಬರ್ಕತ್ ಅಲಿ, ವಿಪಕ್ಷ ನಾಯಕ ಕೆ.ಪ್ರಸನ್ನ, ಎಸ್.ಟಿ.ವೀರೇಶ, ಕೆ.ಎಸ್‌. ಗೋವಿಂದರಾಜ, ಬಸವರಾಜಯ್ಯ. ಇತರರು ಇದ್ದರು.

- - -

ಟಾಪ್‌ ಕೋಟ್‌ ಎಲ್ಲರಿಗೂ ಸೀರೆ, ಟೀ ಶರ್ಟ್‌ ಪಾಲಿಕೆಯಿಂದ ಕೊಡಿಸಿದ್ದಾರೆ. ನಮಗೂ ಬೆಳ್ಳಿ ಬೌಲ್ ನೀಡಿದ್ದಾರೆ. ಇದೆಲ್ಲಾ ನಮಗೆ ಕೊಡಬೇಕಾಗಿರಲಿಲ್ಲ. ಪಾಲಿಕೆಗೆ ದುಡ್ಡು ಹೆಚ್ಚಾಗಿರಬೇಕು ಅಂದುಕೊಂಡಿದ್ದೆ . ಆದರೆ, ಅದು ಪಾಲಿಕೆ ಹಣವಲ್ಲ, ನಮ್ಮೆಲ್ಲಾ ಸದಸ್ಯರು ಹಣ ಹಾಕಿ ಕೊಟ್ಟಿದ್ದಾರೆಂದು ಮೇಯರ್ ಚಮನ್ ಸಾಬ್‌ ಹೇಳುತ್ತಿದ್ದಾರೆ. ಎಂತಹದ್ದೋ ಗೊತ್ತಿಲ್ಲ, ಒಟ್ಟಿನಲ್ಲಿ ಬೆಳ್ಳಿ ಬಟ್ಟಲು ನೀಡಿದ್ದೀರಿ ಅಲ್ಲವಾ? ಮುಂದೆ ಇನ್ನೂ ಹೆಚ್ಚು ಹೆಚ್ಚು ಕೆಲಸವನ್ನು ನೀವೆಲ್ಲರೂ ಮಾಡುವಂತಾಗಲಿ

- ಶಾಮನೂರು ಶಿವಶಂಕರಪ್ಪ, ಶಾಸಕ

- - - (ಫೋಟೋ ಇದೆ)

PREV

Recommended Stories

ಟಿಕೆಟ್ ಆಯ್ತು, ಮಲ್ಟಿಪ್ಲೆಕ್ಸ್‌ಗಳಲ್ಲಿ ತಿಂಡಿ ದರ ಇಳಿಸಿ : ಸಿನಿ ಪ್ರಿಯರು
ಮಂಗಳಮುಖಿಯರು, ಮಹಿಳೆಯರಿಗೆ ಸರ್ಕಾರದಿಂದಲೇ ಉಚಿತ ಆಟೋ