ಕನ್ನಡಪ್ರಭ ವಾರ್ತೆ ಮಂಗಳೂರು ಇಸ್ರೇಲ್‌ನಲ್ಲಿ ಯುದ್ಧ ಪರಿಸ್ಥಿತಿಯಿಂದ ಕರಾವಳಿಗರಿಗೆ ಆತಂಕದ ಹಿನ್ನೆಲೆಯಲ್ಲಿ ಕೇಂದ್ರ ವಿದೇಶಾಂಗ ಇಲಾಖೆ ಸಚಿವರಿಗೆ ಪತ್ರ ಬರೆಯಲಾಗಿದೆ ಎಂದು ದ.ಕ. ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಮಂಗಳೂರಲ್ಲಿ ಮಂಗಳವಾರ ಸುದ್ದಿಗಾರರಲ್ಲಿ ಮಾತನಾಡಿದ ಅವರು, ಇಸ್ರೇಲ್‌ನಲ್ಲಿ ಐದು ಸಾವಿರ ದ.ಕ ಜಿಲ್ಲೆಯ ಜನರು ಇದ್ದಾರೆ ಎಂಬ ಮಾಹಿತಿ ಇದೆ. ಈಗಾಗಲೇ ವಿದೇಶಾಂಗ ಇಲಾಖೆ ಸಚಿವರಿಗೆ ಪತ್ರ ಬರೆದಿದ್ದೇನೆ. ಯಾರಿಗೂ ಅಪಾಯ ಆಗದಂತೆ ಅವರಿಗೆ ರಕ್ಷಣೆ ಒದಗಿಸುತ್ತೇವೆ ಎಂದಿದ್ದಾರೆ. ಅವರನ್ನು ಸುರಕ್ಷಿತವಾಗಿ ಕರೆ ತರುವ ಕೆಲಸ ನಮ್ಮ ಸರ್ಕಾರ ಮಾಡಲಿದೆ. ಕೇಂದ್ರ ಸಚಿವ ಮುರಳೀಧರನ್ ಅವರ ಜತೆಗೂ ನಾನು ಮಾತನಾಡಿದ್ದೇನೆ ಎಂದರು. ಜಿಲ್ಲೆಯ ಇಸ್ರೇಲ್ ವಾಸಿಗಳ ಪೂರ್ಣ ಮಾಹಿತಿ ತರಿಸಿಕೊಳ್ಳುವಂತೆ ದ.ಕ. ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಯುದ್ಧದ ಪರಿಸ್ಥಿತಿ ಇದ್ದಾಗ ಅವರ ಮನೆಯವರಿಗೆ ಭಯದ ವಾತಾವರಣ ಇರುತ್ತದೆ. ಈಗಲೂ ಇಸ್ರೇಲ್‌ನಲ್ಲಿದ್ದವರು ಸುರಕ್ಷಿತವಾಗಿ ಇದ್ದರೂ ಭಯದ ವಾತಾವರಣ ಇದೆ. ಯಾರೂ ಭಯ ಪಡುವ ಅಗತ್ಯ ಇಲ್ಲ, ಏನೇ ಆತಂಕ ಇದ್ದರೂ ನನ್ನನ್ನು ನೇರವಾಗಿ ಸಂಪರ್ಕಿಸುವಂತೆ ನಳಿನ್ ಕುಮಾರ್ ಹೇಳಿದರು.