ಜಿ ಡಿ ಹೆಗಡೆ
ಇಸ್ರೇಲ್ ಹಾಗೂ ಹಮಾಸ್ ನಡುವಣ ಯುದ್ಧ ಉತ್ತರ ಕನ್ನಡದಲ್ಲಿ ಭಯಕ್ಕೆ ಕಾರಣವಾಗಿದೆ. ಇಲ್ಲಿನ ಸಾವಿರಾರು ಜನರು ಇಸ್ರೇಲ್‌ನಲ್ಲಿದ್ದಾರೆ. ಅವರು ಸುರಕ್ಷಿತವಾಗಿರಲಿ ಎಂದು ಪ್ರಾರ್ಥಿಸುತ್ತಿದ್ದಾರೆ.
ಇಸ್ರೇಲ್‌ನ ಉತ್ತರ ಭಾಗದಲ್ಲಿ ಯುದ್ಧ ನಡೆಯುತ್ತಿದೆ. ನನ್ನ ಪತ್ನಿ ದಕ್ಷಿಣ ಭಾಗದಲ್ಲಿದ್ದಾರೆ. ತಾವು ಸುರಕ್ಷಿತವಾಗಿರುವುದಾಗಿ ಹೇಳುತ್ತಿದ್ದಾರೆ. ಆದರೂ ಊರಿನಲ್ಲಿ ಇರುವ ನಮಗೆ ಭಯ ಕಾಡುತ್ತಿದೆ ಎಂದು ಕಾರವಾರದ ರುಜಾಯೋ ಲೋಪಿಸ್ ಆತಂಕ ವ್ಯಕ್ತಪಡಿಸುತ್ತಾರೆ.ಇದು ಕೇವಲ ಇವರೊಬ್ಬರ ಕಳವಳವಷ್ಟೇ ಅಲ್ಲ. ಜಿಲ್ಲೆಯ ಸಾವಿರಾರು ಕುಟುಂಬಗಳ, ಅವರ ಆಪ್ತರು, ಸಂಬಂಧಿಗಳ ಕಳವಳವೂ ಹೌದು.ನಗರದ ಬೈತಖೋಲ ನಿವಾಸಿಯಾಗಿರುವ ರುಜಾಯೋ ಆಟೋರಿಕ್ಷಾ ಓಡಿಸಿ ಜೀವನ ಸಾಗಿಸುತ್ತಿದ್ದು, ಅವರ ಪತ್ನಿ ಕ್ರಿಸ್ಮಾ ಲೊಪಿಸ್ ಇಸ್ರೇಲ್‌ನಲ್ಲಿ ಕೇರ್ ಟೇಕರ್ ಆಗಿ ಕಳೆದ ೭ ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ಜನವರಿಯಲ್ಲಿ ಊರಿಗೆ ಬಂದು ಹೋಗಿದ್ದರು.
ನಾವು ಕರೆ ಮಾಡಿದ್ದ ವೇಳೆಯಲ್ಲೇ ಕೆಲವೊಮ್ಮೆ ಸೈರನ್ ಆಗುವುದು, ಹೆಲಿಕಾಪ್ಟರ್, ವಿಮಾನಗಳ ಶಬ್ದ ಕೂಡಾ ಕೇಳುತ್ತದೆ. ಆಗೆಲ್ಲ ನಮಗೆ ಭಯ ಉಂಟಾಗುತ್ತಿದೆ. ಪತ್ನಿ ಅಲ್ಲಿನ ವೃದ್ಧೆಯ ಕೇರ್ ಟೇಕರ್ ಆಗಿ ಹೋಗಿದ್ದು, ಅಲ್ಲಿ ಯುದ್ಧ ಪ್ರಾರಂಭವಾದಾಗಿನಿಂದ ನಮಗೆ ನಿದ್ದೆ ಬರುತ್ತಿಲ್ಲ. ಊಟ ಸೇರುತ್ತಿಲ್ಲ. ಏನಾಗುತ್ತದೆಯೋ ಎನ್ನುವ ಆತಂಕ ಸದಾ ಕಾಡುತ್ತಿದೆ ಎನ್ನುತ್ತಾರೆ.
ಊರಿನಲ್ಲಿ ಇರುವವರ ಸಮಾಧಾನಕ್ಕೆ ಸುರಕ್ಷಿತವಾಗಿದ್ದೇವೆ ಎನ್ನುತ್ತಾರೆ. ಅಲ್ಲಿನ ನಿಜವಾದ ಸ್ಥಿತಿ ನಮಗೆ ತಿಳಿಯುವುದಿಲ್ಲ. ಇಸ್ರೇಲ್‌ನಲ್ಲಿ ಯುದ್ಧ ನಡೆಯುತ್ತಿರುವುದರಿಂದ ಕೇಂದ್ರ ಸರ್ಕಾರ ಭಾರತೀಯರ ರಕ್ಷಣೆಗೆ ಸೂಕ್ತ ಕ್ರಮವಹಿಸುವಂತೆ ಅಲ್ಲಿನ ಸರ್ಕಾರದ ಜತೆಗೆ ಮಾತುಕತೆ ನಡೆಸಬೇಕು ಎನ್ನುತ್ತಾರೆ ಇಸ್ರೇಲ್‌ನಲ್ಲಿ ಇರುವ ಮಹಿಳೆಯ ಪತಿ ರುಜಾಯೋ ಲೋಪಿಸ್.
ಸಹಾಯವಾಣಿಗೆ 7 ಕರೆಇಸ್ರೇಲ್‌ನಲ್ಲಿ ಸಿಲುಕಿಕೊಂಡಿರುವವರ ಮಾಹಿತಿ ನೀಡಲು ಉತ್ತರ ಕನ್ನಡ ಜಿಲ್ಲೆಯ ಡಿಸಿ ಕಚೇರಿಯಲ್ಲಿ ತೆರಯಲಾದ ಸಹಾಯವಾಣಿಗೆ ಮಂಗಳವಾರ ಏಳು ಕರೆ ಬಂದಿದೆ. ಇಸ್ರೇಲ್‌ನ ದಕ್ಷಿಣ ಭಾಗದಲ್ಲಿಯೇ ಎಲ್ಲರೂ ವಾಸವಾಗಿದ್ದು, ಸುರಕ್ಷಿತವಾಗಿದ್ದಾರೆ ಎಂದು ಅಲ್ಲಿ ವಾಸವಿರುವ ಕುಟುಂಬಸ್ಥರು ಸಹಾಯವಾಣಿಗೆ ಕರೆ ಮಾಡಿ ತಿಳಿಸಿದ್ದಾರೆ. ಕಾರವಾರ ೩, ಯಲ್ಲಾಪುರ, ಹೊನ್ನಾವರದಿಂದ ತಲಾ ೨ ಕರೆ ಸ್ವೀಕರಿಸಲಾಗಿದೆ. ಉತ್ತರ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ತೆರೆದಿರುವ ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ ೧೦೭೭ ಅಥವಾ (೦೮೩೮೨) ೨೨೯೮೫೭ ಅಥವಾ ೯೪೮೩೫೧೧೦೧೫ ಅಥವಾ ರಾಜ್ಯ ಸರ್ಕಾರದ ತುರ್ತು ಸಹಾಯವಾಣಿ ಸಂಖ್ಯೆ (೦೮೦) ೨೨೩೪೦೬೭೬, ೨೨೨೫೩೭೦೭ ಮಾಹಿತಿ ನೀಡಬಹುದಾಗಿದೆ.