ಕನ್ನಡಪ್ರಭ ವಾರ್ತೆ ಕಲಬುರಗಿ
ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸರ್ಕಾರಿ ಪ್ರೌಢ ಶಾಲಾ ಸಹ ಶಿಕ್ಷಕರು ಗ್ರೇಡ್-2 ಹುದ್ದೆಗೆ ಮುಂಬಡ್ತಿ ನೀಡುತ್ತಿದ್ದು, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರನ್ನು , ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗೆ ಮುಂಬಡ್ತಿ ನೀಡಲು/ವಿಲೀನಗೊಳಿಸುವ ಪ್ರಕ್ರಿಯೆಯನ್ನು ಅವರ ಆಯುಕ್ತರು ಜರುಗಿಸಲು ಸರ್ಕಾರದಿಂದ ಇದುವರೆಗೆ ಸೂಕ್ತ ಅಧಿಸೂಚನೆ ಅಥವಾ ನಿರ್ದೇಶನ ಬಂದಿರುವುದಿಲ್ಲ. ಇದರಿಂದಾಗಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಒಟ್ಟು 4083 (ಸ್ಥಳೀಯ ವೃಂದದ 3300 ಹಾಗೂ ಉಳಿದ ಮೂಲ ವೃಂದದ 783) ಮುಂಬಡ್ತಿಯಿಂದ ಭರ್ತಿ ಮಾಡಬೇಕಾದ ಹುದ್ದೆಗಳು ಭರ್ತಿಯಾಗದೇ ಖಾಲಿ ಉಳಿದಿರುತ್ತವೆ.
ಪುಸ್ತುತ ವಿಭಾಗದಲ್ಲಿ ಕಾರ್ಯನಿರತ 18,498 ಪ್ರಾಥಮಿಕ ಶಾಲಾ ಶಿಕ್ಷಕರಲ್ಲಿ ಬಹುತೇಕ ಶಿಕ್ಷಕರು ಪದವೀಧರರಾಗಿದ್ದು, ವೃತ್ತಿಪರ (ಡಿ.ಇಡಿ ಮತ್ತು ಬಿ.ಇಡಿ) ವಿದ್ಯಾರ್ಹತೆಯನ್ನು ಹೊಂದಿರುವುದರಿಂದ ಇವರನ್ನು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗೆ ಸುಲಭವಾಗಿ ಮುಂಬಡ್ತಿ ನೀಡಲು /ವಿಲೀನಗೊಳಿಸಬಹುದಾಗಿದ್ದು, 2016 ರಲ್ಲಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳನ್ನು ಸೃಜಿಸಿ ಅವುಗಳನ್ನು ಭರ್ತಿ ಮಾಡಲು ವೃಂದ ಮತ್ತು ನೇಮಕಾತಿ ನಿಯಮಗಳನ್ನು ರೂಪಿಸಿ ಜಾರಿಗೆ ತರಲಾಗಿದೆ. ಸದರಿ ಹುದ್ದೆಗಳನ್ನು ಮುಂಬಡ್ತಿ ಮೂಲಕ ಭರ್ತಿ ಮಾಡಲು ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ಅಧಿಸೂಚನೆ ಹೊರಡಿಸಿರುವುದಿಲ್ಲ.ಅದಲ್ಲದೆ, ಸದರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಇಲಾಖೆಯಲ್ಲಿ ಖಾಲಿ ಇರುವಂತಹ ಮುಂಬಡ್ತಿ ಮೂಲಕ ಭರ್ತಿ ಮಾಡಬಹುದಾದ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ 1,301 ಹುದ್ದೆಗಳಿಗೆ ಮುಂಬಡ್ತಿ ನೀಡಿ ಭರ್ತಿ ಮಾಡಬಹುದಾಗಿದ್ದು, ಇವುಗಳಲ್ಲಿ ಸ್ಥಳೀಯ ವೃಂದದ 1,047 ಹಾಗೂ ಉಳಿದ ಮೂಲ ವೃಂದದ 254 ಹುದ್ದೆಗಳಿರುತ್ತವೆಂದು ತಿಳಿದು ಬಂದಿರುತ್ತದೆ ಎಂದು ಸಚಿವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕಲಬುರಗಿ ವಿಭಾಗದಲ್ಲಿ ಮುಂಬಡ್ತಿ ಕೋಟಾದಲ್ಲಿ ಖಾಲಿ ಇರುವ ಒಟ್ಟು 4,083 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳನ್ನು ಹಾಗೂ 1,301 ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಹುದ್ದೆಗಳನ್ನು ಕೌನ್ಸಿಲಿಂಗ್ ಮೂಲಕ ಭರ್ತಿ ಮಾಡಲು ಅವಕಾಶವಿರುತ್ತದೆ. ಇದರಿಂದಾಗಿ ಕಲಬುರಗಿ ವಿಭಾಗದ ಒಟ್ಟು 5,384 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅನುಕೂಲವಾಗುತ್ತದೆ.