ಶೀಘ್ರವೇ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ

KannadaprabhaNewsNetwork | Published : May 7, 2025 12:46 AM

ಸಾರಾಂಶ

ವಿವಿಧ ಅಭಿವೃದ್ಧಿ ಪರ ಕಾಮಗಾರಿಗಳ ಅನುಷ್ಠಾನದ ಬಗ್ಗೆ ಪ್ರಗತಿ ಕುರಿತು ಸಂಸದ ಜಗದೀಶ ಶೆಟ್ಟರ್‌ ಮಾಹಿತಿ ಪಡೆದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ ಲೋಕಸಭಾ ವ್ಯಾಪ್ತಿಯಲ್ಲಿ ಕೇಂದ್ರ ಸರಕಾರದ ಇಲಾಖೆಗಳಾದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ, ನೈರುತ್ಯ ರೇಲ್ವೆ ಇಲಾಖೆ, ವಿಮಾನಯಾನ ಇಲಾಖೆ ಕೈಗೊಂಡಿರುವ ವಿವಿಧ ಅಭಿವೃದ್ಧಿ ಪರ ಕಾಮಗಾರಿಗಳ ಅನುಷ್ಠಾನದ ಬಗ್ಗೆ ಪ್ರಗತಿ ಕುರಿತು ಸಂಸದ ಜಗದೀಶ ಶೆಟ್ಟರ್‌ ಮಾಹಿತಿ ಪಡೆದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಅವರು, ಈ ಇಲಾಖೆಯನ್ವಯ ಬೆಳಗಾವಿ ನಗರದಲ್ಲಿ ಕೈಕೊಳ್ಳಲಾಗುತ್ತಿರುವ ರಿಂಗ್ ರಸ್ತೆ, ಬೈಪಾಸ್ ನಿರ್ಮಾಣದ ಪ್ರಗತಿ ಹಂತದ ಬಗ್ಗೆ ಮಾಹಿತಿ ಅವಲೋಕಿಸಿದರು. ಹೋನಗಾ-ಜಡಶಾಹಾಪೂರ ನಡುವೆ ನಿರ್ಮಾಣ ಮಾಡಲಾಗುತ್ತಿರುವ ರಸ್ತೆ ಕಾಮಗಾರಿ ಬಗ್ಗೆ ಅಗತ್ಯವೆನಿಸಿರುವ ಭೂಸ್ವಾಧೀನ ಪ್ರಕ್ರಿಯದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಅವರು, ಶೀಘ್ರ ಈ ಮಾರ್ಗದ ಎಲ್ಲ ಭೂಸ್ವಾಧೀನ ಕಾರ್ಯ ಪೂರ್ಣಗೊಳಿಸುವ ಬಗ್ಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಅದರಂತೆ ಹಲಗಾ-ಮಚ್ಚೆ ನಡುವೆ ಇರುವ 9 ಕಿ.ಮೀ ರಸ್ತೆ ನಿರ್ಮಾಣ ಕಾಮಗಾರಿ ಸಹ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಸೂಚಿಸಿದರು.

ಅದರಂತೆ ಬೆಳಗಾವಿ (ಶೇಗುಣಮಟ್ಟಿ)- ಹುನಗುಂದ- ರಾಯಚೂರು ಮಾರ್ಗದಲ್ಲಿ ನಿರ್ಮಿಸಲಾಗುವ ಬೆಳಗಾವಿ ಲೋಕಸಭಾ ವ್ಯಾಪ್ತಿಯ 43 ಕಿ.ಮೀ ರಸ್ತೆ ಕಾಮಾಗಾರಿ ಪೂರ್ವ ಅವಶ್ಯವಾದ ಭೂಸ್ವಾಧೀನ ಕಾರ್ಯದ ಬಗ್ಗೆ ಮಾಹಿತಿ ಪಡೆದುಕೊಂಡ ಸಂಸದರು, ಆದಷ್ಟು ಬೇಗನೆ ಭೂಸ್ವಾಧೀನ ಕಾರ್ಯ ಮುಗಿಸಿ, ಕಾಮಗಾರಿ ಪ್ರಾರಂಭಕ್ಕೆ ಅನುಕೂಲತೆ ಕಲ್ಪಿಸಲು ಸೂಚಿಸಿದರು. ಬೆಳಗಾವಿ ನಗರದಲ್ಲಿ ಹೋಟೆಲ್ ಸಂಕಮ್ ಮಾರ್ಗವಾಗಿ ಫ್ಲೈ ಓವರ್ ನಿರ್ಮಾಣದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿ, ಯಾವುದೇ ಕಾಮಗಾರಿ ಪ್ರಾರಂಭವಾದ ನಂತರ ನಿರಂತರವಾಗಿ ಸಾಗಿ, ಮುಗಿಯುವ ಹಂತ ತಲುಪುವ ಹಾಗೆ ನೋಡಿಕೊಂಡು ಸಾರ್ವಜನಿಕರಿಗೆ ಅನುಕೂಲವಾಗುವ ಹಾಗೆ ಮಾಡುವಂತೆ ಸೂಚಿಸಿದರು.

ಬೆಳಗಾವಿ- ಕಿತ್ತೂರು- ಧಾರವಾಡ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಸದ್ಯ ಸುಮಾರು 1200 ಏಕರೆ ಜಮೀನುಗಳ ಸ್ವಾಧೀನತೆ ಅವಶ್ಯಕತೆ ಇದ್ದು ಇದಕ್ಕನುಗುಣವಾಗಿ ಭೂಸ್ವಾಧೀನ ಕಾರ್ಯ ಬಗ್ಗೆ ಸಭೆಯಲ್ಲಿ ಅವಲೋಕಿಸಿ, ಜಮೀನು ನೀಡುವ ಹಿಡುವಳಿದಾರರಿಗೆ ಸರಕಾರವು ನೀಡಬೇಕಾದ ಪರಿಹಾರ ಧನವನ್ನು ಆದಷ್ಟು ಬೇಗನೆ ವಿತರಿಸುವ ಬಗ್ಗೆ ವಿಷಯ ಪರಿಗಣಿಸಿ ರೈತರಿಗೆ ಅನಕೂಲತೆ ಕಲ್ಪಸಿಸುವಂತೆ ಸರಕಾರದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಮತ್ತು ಮೂಲಭೂತ ಸೌಕರ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಮಾತುಕತೆ ನಡೆಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್‌, ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರ ಯೋಜನಾ ನಿರ್ದೇಶಕ ಭೂವನೇಶ ಕುಮಾರ, ಬೆಳಗಾವಿ ವಿಮಾಣ ನಿಲ್ದಾಣ ನಿರ್ದೇಶಕ ತ್ಯಾಗರಾಜನ್, ಭೂಸ್ವಾಧೀನ ಅಧಿಕಾರಿಗಳಾದ ಚೌವ್ಹಾಣ, ರಾಜಶ್ರೀ ಜೈನಾಪೂರ, ನೈರುತ್ಯ ವಲಯದ ರೇಲ್ವೆ ಅಭಿಯಂತರ ನಿಸ್ಸಾಮುದ್ದಿನ್ ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು.

Share this article