ಗದಗ: ರಾಜರ ಕಾಲದಲ್ಲಿ ಹಂಸ ಪಕ್ಷಿಯ ಮೂಲಕ ಸಂದೇಶ ತಲುಪುತ್ತಿದ್ದವು. ಅದಕ್ಕಾಗಿಯೇ ಹಂಸ ಎಂದರೆ ಅಂಚೆ ಎಂಬ ಹೆಸರು ಬಂದಿದೆ. ಮನುಷ್ಯನ ಅಂತರಾಳದ ಭಾವನೆ ಪ್ರಬಲವಾಗಿ ಅಭಿವ್ಯಕ್ತಿಸುವ ಮಾಧ್ಯಮ ಪತ್ರ. ಇಂತಹ ಪತ್ರ ಬರವಣಿಗೆ ಇಂದು ಕಣ್ಮರೆಯಾಗುತ್ತಿದೆ ಎಂದು ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ಹೇಳಿದರು.
ಪತ್ರ ವ್ಯವಹಾರಗಳಲ್ಲಿ ಹಲವು ಪ್ರಕಾರಗಳಿವೆ, ಔಪಚಾರಿಕ ಪತ್ರ, ಅನೌಪಚಾರಿಕ ಪತ್ರ. ಪತ್ರಗಳು ವಿಮರ್ಶಾತ್ಮಕ ಓದುವಿಕೆ, ಆತ್ಮಾಭಿವ್ಯಕ್ತಿಯ ಬರಹ, ಚರ್ಚಾಸ್ಪದ ಬರಹ ಹೀಗೆ ಉಪಯೋಗಿಸಲಾಗುತ್ತಿತ್ತು. ಮಕ್ಕಳು ತಂದೆ, ತಾಯಿಗೆ, ಮಾವನಿಗೆ, ಅಣ್ಣನಿಗೆ ಹಾಗೆಯೇ ಕಚೇರಿಗಳಿಗೆ ವ್ಯವಹಾರ ಮುಂತಾದವುಗಳಿಗೆ ಯಾವ ರೀತಿ ಬರೆಯಬೇಕು ಎಂಬ ಮಹತ್ವ ತಿಳಿಯುತ್ತಿದ್ದರು. ಬರಹದಲ್ಲಿ ಭಾವನೆ, ಕ್ಷೇಮ, ಸಮಾಚಾರ, ಎಲ್ಲವೂ ಗೊತ್ತಾಗುತ್ತಿತ್ತು. ಈಗ ಆ ಪತ್ರದ ಸೊಗಸಿಲ್ಲ, ಅಂಚೆಯ ಅಣ್ಣ ಬಂದಿಹನು, ಅಣ್ಣನ ಕಾಗದ ತಂದಿಹನು ಎಂಬ ಹಾಡುಗಳು ಈಗೆಲ್ಲಿ. ಎಲ್ಲ ಇ-ಮೇಲ್, ಎಸ್‌ಎಂಎಸ್, ವಾಟ್ಸಪ್ ಇವುಗಳ ಮಧ್ಯೆ ಬರವಣಿಗೆ ಕಮರಿದೆ ಎಂದರು.
ಅಂಚೆ ಬ್ಯಾಂಕುಗಳಿಗೆ ಸರಿಸಮಾನವಾಗಿ ಕಾರ್ಯ ನಿರ್ವಹಿಸುತ್ತಿದೆ. ಬ್ಯಾಂಕಿನ ಎಲ್ಲ ಸೇವೆಗಳನ್ನು ಅಂಚೆ ಇಲಾಖೆಯಲ್ಲಿ ಪಡೆಯಬಹುದು. ಆದರೆ ಅಂಚೆಯ ಎಲ್ಲ ಸೇವೆಗಳನ್ನು ಬ್ಯಾಂಕಿನಲ್ಲಿ ಪಡೆಯಲಾಗುವುದಿಲ್ಲ. ಪ್ರಾಚೀನ ಕಾಲದಿಂದಲೂ ಅಂಚೆಯ ಸಂದೇಶ ಉತ್ತಮವಾಗಿ ಸಾಗಿ ಬಂದಿದೆ ಹಾಗೂ ವಿವಿಧ ಸೌಲಭ್ಯ ಪ್ರಾಮಾಣಿಕವಾಗಿ ನಿರ್ವಹಿಸುತ್ತಿದೆ ಎಂದರು.ಅಂಚೆ ಇಲಾಖೆಯ ಅಧೀಕ್ಷಕ ಜಯದೇವ ಕಡಗಿ ಮಾತನಾಡಿ, ಅಂಚೆ ಇಲಾಖೆಯಲ್ಲಿ ಸಿಗುವ 32 ಸೌಲಭ್ಯಗಳ ಬಗ್ಗೆ ವಿವರಿಸಿ ಅವುಗಳನ್ನು ಹೇಗೆ ಪಡೆಯಬೇಕು ಎಂಬ ಮಾಹಿತಿ ಸವಿಸ್ತಾರವಾಗಿ ತಿಳಿಸಿದರು.
ಈ ವೇಳೆ ಗದಗ ಜಿಲ್ಲೆಯಲ್ಲಿ ಅತ್ಯುತ್ತಮ ಅಂಚೆ ಸೇವಕರಾಗಿ ಕಾರ್ಯ ನಿರ್ವಹಿಸಿದ ವೀರಪ್ಪ ಚನ್ನಬಸಪ್ಪ ಕುಪ್ಪಸ್ತ ಹಾಗೂ ಶಿವಲೀಲಾ ಅಶೋಕ್ ಸರ್ವಿ ಹಾಗೂ ಕರ್ನಾಟಕ ಕೃಷಿ ವಿಶ್ವವಿದ್ಯಾಲಯ ಧಾರವಾಡದಿಂದ ಶ್ರೇಷ್ಠ ಕೃಷಿ ಮಹಿಳೆ ಪ್ರಶಸ್ತಿ ಪಡೆದ ಶಿಲ್ಪಾ ರಮೇಶ್ ಕುರಿ ಅವರನ್ನು ಸನ್ಮಾನಿಸಲಾಯಿತು.ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ್ ಸುತಾರ ಸಂಗೀತ ಸೇವೆ ನೀಡಿದರು. ಚಂದನಾ.ಎಸ್. ದಂಡಿನ ಧರ್ಮಗ್ರಂಥ ಪಠಿಸಿದರು ಹಾಗೂ ವಚನ ಚಿಂತನ ಸೃಷ್ಟಿ.ಎನ್.ಸುಳ್ಳದ ನೆರವೇರಿಸಿದರು. ದಾಸೋಹ ಸೇವೆ ಅಂಚೆ ಪ್ರತಿನಿಧಿ ಗವಿಸಿದ್ದಪ್ಪ ರಾಚಯ್ಯ ಪತ್ರಿಮಠ ಹಾಗೂ ಸಿದ್ದಲಿಂಗಪ್ಪ ಕಾತರಕಿ, ಕುಟುಂಬ ವರ್ಗದವರು ವಹಿಸಿದ್ದರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಉಮೇಶ ಪುರದ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸೋಮಶೇಖರ ಪುರಾಣಿಕ, ನಾಗರಾಜ ಹಿರೇಮಠ, ಮಹೇಶ ಗಾಣಿಗೇರ, ಬಸವರಾಜ ಕಾಡಪ್ಪನವರ, ಶಿವಾನಂದ ಹೊಂಬಳ ಇದ್ದರು. ಶಿವಾನುಭವ ಸಮಿತಿಯ ಚೇರಮನ್ ಐ.ಬಿ. ಬೆನಕೊಪ್ಪರ ಸ್ವಾಗತಿಸಿದರು. ವಿದ್ಯಾವತಿ ಪ್ರಭು ಗಂಜಿಹಾಳ ನಿರೂಪಿಸಿದರು.