ಹೊಸಕೋಟೆ ನಗರಕ್ಕೆ 5ನೇ ಹಂತದ ಕಾವೇರಿ ನೀರು

KannadaprabhaNewsNetwork | Published : Nov 23, 2024 12:32 AM

ಸಾರಾಂಶ

ಹೊಸಕೋಟೆ: ಬೆಂಗಳೂರು ನಗರಕ್ಕೆ 5ನೇ ಹಂತದ 770 ಎಂಎಲ್‌ಡಿ ಕಾವೇರಿ ನೀರನ್ನು ತರಲಾಗುತ್ತಿದ್ದು, ಅದರಲ್ಲಿ 5 ರಿಂದ 6 ಎಂಎಲ್‌ಡಿ ಕಾವೇರಿ ನೀರನ್ನು ಹೊಸಕೋಟೆ ನಗರ ನಾಗರಿಕರಿಗೆ ಕುಡಿಯಲು ಒದಗಿಸಲಾಗುವುದು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ಹೊಸಕೋಟೆ: ಬೆಂಗಳೂರು ನಗರಕ್ಕೆ 5ನೇ ಹಂತದ 770 ಎಂಎಲ್‌ಡಿ ಕಾವೇರಿ ನೀರನ್ನು ತರಲಾಗುತ್ತಿದ್ದು, ಅದರಲ್ಲಿ 5 ರಿಂದ 6 ಎಂಎಲ್‌ಡಿ ಕಾವೇರಿ ನೀರನ್ನು ಹೊಸಕೋಟೆ ನಗರ ನಾಗರಿಕರಿಗೆ ಕುಡಿಯಲು ಒದಗಿಸಲಾಗುವುದು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ನಗರದ ವಿವೇಕಾನಂದ ನಗರದಲ್ಲಿ ಟಿಐ ಪೈಪ್‌ಲೈನ್‌ ಹಾಗೂ ಕನಕನಗರ ವಾಟರ್ ಟ್ಯಾಂಕ್ ಬಳಿ ಪಿವಿಸಿ ಪೈಪ್ ಲೈನ್ ಅಳವಡಿಕೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ನಗರದಲ್ಲಿ ಸಮರ್ಪಕ ನೀರು ಸರಬರಾಜಿಗೆ ಆದ್ಯತೆ ನೀಡಲಾಗುತ್ತಿದೆ. ನಗರದ ತಾಂತ್ರಿಕ ಶಾಖೆಯ ನೀರು ಸರಬರಾಜು ವಿಭಾಗದ ಮುಖ್ಯ ಘಟಕವಾದ ದೊಡ್ಡಬಾವಿಯಿಂದ ಟಿಜಿ ಬಡಾವಣೆಯ ಒಎಚ್‌ಟಿವರೆಗೆ ಸುಮಾರು 80 ಲಕ್ಷ ರು. ವೆಚ್ಚದಲ್ಲಿ ಡಿಐ ಪೈಪ್‌ಲೈನ್‌ ಹಾಗೂ ಕನಕನಗರದ ಬಾಲಾಜಿ ಲೇಔಟ್‌ನಿಂದ ಕನಕನಗರ ಪಂಪ್‌ಹೌಸ್‌ವರೆಗೆ ಸುಮಾರು 19 ಲಕ್ಷ ರು. ವೆಚ್ಚದಲ್ಲಿ 6 ಪಿವಿಸಿ ಪೈಪ್ ಲೈನ್ ಅಳವಡಿಕೆ ಮಾಡಲಾಗುತ್ತಿದೆ ಎಂದು ಹೇಳಿದರು. ಈ ಹಿಂದೆ ಅಳವಡಿಸಿದ್ದ ಹಳೆಯ ಪೈಪ್‌ಗಳಿಂದ ಸಾಕಷ್ಟು ಕಿರಿಕಿರಿ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ನೂತನ ಪೈಪ್‌ಲೈನ್ ಅಳವಡಿಕೆ ಮಾಡಲಾಗುತ್ತಿದೆ. ಹಾಗೆಯೇ ಹೊಸಕೋಟೆ ನಗರಸಭೆ ವ್ಯಾಪ್ತಿಯ ಎಲ್ಲಾ ವಾರ್ಡ್‌ಗಳಲ್ಲಿ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸುವ ದೃಷ್ಟಿಯಿಂದ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಶರತ್‌ ಹೇಳಿದರು.

ಬಿಎಂಆರ್‌ಡಿ ಅಧ್ಯಕ್ಷ ಕೇಶವಮೂರ್ತಿ ಮಾತನಾಡಿ, ಬೆಂಗಳೂರಿಗೆ ಕೂಗಳತೆ ದೂರದಲ್ಲಿ ಹೊಸಕೋಟೆ ಇರುವ ಕಾರಣ ನಗರದಲ್ಲಿ ದಿನದಿಂದ ದಿನಕ್ಕೆ ಜನದಟ್ಟಣೆ ಹೆಚ್ಚಾಗುತ್ತಿದೆ. ಇಂತಹ ನಗರದ ಅಭಿವೃದ್ಧಿಯನ್ನು ಗಮನಿಸುತ್ತಿರುವ ಶಾಸಕ ಶರತ್ ಬಚ್ಚೇಗೌಡ ಅವರು, ನಗರಕ್ಕೆ ಅಗತ್ಯ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸಲು ಶ್ರಮಿಸುತ್ತಿರುವುದು ಅಭಿನಂದನಾರ್ಹ. ಪ್ರಮುಖವಾಗಿ ನಗರದಲ್ಲಿ ಕಸದ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಬದ್ಧರಾಗಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ನೀಲಲೋಚನ ಪ್ರಭು, ಉದ್ಯಮಿ ಬಿವಿ.ಬೈರೇಗೌಡ, ಬಿಎಂಆರ್ ಸದಸ್ಯ ಡಾ.ಎಚ್.ಎಂ ಸುಬ್ಬರಾಜು, ನಗರಸಭೆ ಸದಸ್ಯ ಜಮುನಾ ಹರೀಶ್, ನಾಮನಿರ್ದೇಶಿತ ಸದಸ್ಯರಾದ ಗಣೇಶ್, ರಮಾದೇವಿ, ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ವಿಜಯಕುಮಾರ್, ಕಸಾಪ ಅಧ್ಯಕ್ಷ ರಾಜ ಆರ್ಟ್ಸ್ ಮುನಿರಾಜು, ಮುಖಂಡರಾದ ಗೋಪಿ, ಆರ್‌ಟಿಸಿ ಗೋವಿಂದರಾಜು, ಕುವೆಂಪುನಗರ ಮಧು ಮತ್ತಿತರರು ಹಾಜರಿದ್ದರು.

ಫೋಟೋ : 22 ಹೆಚ್‌ಎಸ್‌ಕೆ 2

ಹೊಸಕೋಟೆಯ ಕನಕನಗರ ವಾರ್ಡ್‌ನಲ್ಲಿ ಬಾಲಾಜಿ ಲೇಔಟ್‌ನಿಂದ ಕನಕನಗರ ಪಂಪ್‌ಹೌಸ್‌ವರೆಗೆ ಪಿವಿಸಿ ಪೈಪ್‌ಲೈನ್ ಅಳವಡಿಕೆ ಕಾಮಗಾರಿಗೆ ಶಾಸಕ ಶರತ್ ಬಚ್ಚೇಗೌಡ ಭೂಮಿಪೂಜೆ ನೆರವೇರಿಸಿದರು. ಬಿಎಂಆರ್‌ಡಿ ಅಧ್ಯಕ್ಷ ಕೇಶವಮೂರ್ತಿ, ನಗರಸಭೆ ಪೌರಾಯುಕ್ತ ನೀಲಲೋಚನ ಪ್ರಭು ಇತರರಿದ್ದರು.

Share this article