ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಸ್ವೇಚ್ಛಾಚಾರದ ಆಡಳಿತ: ಕಾಗೇರಿ

KannadaprabhaNewsNetwork |  
Published : Oct 11, 2023, 12:45 AM IST

ಸಾರಾಂಶ

ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ಕುರಿತು ಮಾಜಿ ಸ್ಪೀಕರ್ ಪ್ರತಿಕ್ರಿಯಿಸಿ ಕಾನೂನು ಬಾಹಿರವಾಗಿ ಚಟುವಟಿಕೆ ಮಾಡಿ ಗಲಭೆ ಮಾಡಿದವರನ್ನು ಕಾಂಗ್ರೆಸ್ ಬೆಂಬಲಿಸುತ್ತಿದೆ ಎಂದಿದ್ದಾರೆ.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಬಹುಮತ ಪಡೆದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷ ಇದೀಗ ಕನ್ನಡಿಗರ ಭಾವನೆಯನ್ನು ಧಿಕ್ಕರಿಸಿ ಮನಬಂದಂತೆ ಆಡಳಿತ ನಡೆಸುತ್ತಿದೆ. ಇದೊಂದು ಸ್ವೇಚ್ಛಾಚಾರದ ಸರ್ಕಾರ. ಸಿದ್ದರಾಮಯ್ಯಗೆ ಮುಖ್ಯಮಂತ್ರಿಯಾಗಿ ಎಷ್ಟು ದಿನ ಮುಂದುವರಿಯುತ್ತೇನೆ ಎಂಬ ಬಗ್ಗೆ ಖಾತ್ರಿ ಇಲ್ಲ ಎಂದು ಮಾಜಿ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಜನರು ತಲೆ ತಗ್ಗಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದರು.

ಕಾನೂನು ಬಾಹಿರವಾಗಿ ಚಟುವಟಿಕೆ ಮಾಡಿ ಗಲಭೆ ಮಾಡಿದವರನ್ನು ಕಾಂಗ್ರೆಸ್ ಬೆಂಬಲಿಸುತ್ತಿದೆ. ಓಲೈಕೆಯ ರಾಜಕಾರಣದಲ್ಲಿ ಕಾನೂನು ಸುವ್ಯವಸ್ಥೆ ಹಾಳು ಮಾಡುತ್ತಿದ್ದಾರೆ. ಶಾಂತಿ ಕದಡುವ ಮನಸ್ಥಿತಿಯ ಜನರಿಗೆ ಕಾಂಗ್ರೆಸ್ ಸರಕಾರ ಬೆಂಬಲ ನೀಡುತ್ತಿದೆ. ಅಭಿವೃದ್ಧಿ ಶೂನ್ಯವಾಗಿದೆ ಎಂದರು.

ಸಿದ್ದರಾಮಯ್ಯ ಎಷ್ಟು ದಿನ ಮುಖ್ಯಮಂತ್ರಿಯಾಗಿರುತ್ತಾರೋ ಎಂಬುದು ಅವರಿಗೆ ಗೊತ್ತಿಲ್ಲ. ಹೀಗಾಗಿ ಬೇಕಾಬಿಟ್ಟಿಯಾಗಿ ಅಧಿಕಾರ ನಡೆಸುತ್ತಿದ್ದಾರೆ ಎಂದರು.

ಇನ್ನು ಸರಕಾರ ಯಾವುದೇ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ ಮತ್ತು ಜವಾಬ್ದಾರಿಯೂ ಇಲ್ಲವಾಗಿದೆ. ಕಾವೇರಿ ನದಿ ನೀರು ಹಂಚಿಕೆ ಮತ್ತು ಬರ ನಿರ್ವಹಣೆ ಬಗ್ಗೆ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಬರ ಇದ್ದರೂ ಇನ್ನೊಂದು ರಾಜ್ಯಕ್ಕೆ ನೀರು ಕೊಡುವ ಪರಿಸ್ಥಿತಿಗೆ ಸರಕಾರ ತಂದು ನಿಲ್ಲಿಸಿದೆ. ಇನ್ನು ಹುಬ್ಬಳ್ಳಿ, ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆಕೋರರ ಬಿಡುಗಡೆಗೆ ಮಂತ್ರಿಗಳು ಪತ್ರ ಬರೆಯುತ್ತಿದ್ದಾರೆ. ಸರಕಾರ ಸಮಾಜಘಾತುಕ ಶಕ್ತಿಗಳನ್ನು ಬೆಂಬಲಿಸಿ ಸಮಾಜಕ್ಕೆ ಯಾವ ಸಂದೇಶ ರವಾನಿಸುತ್ತಿದೆ ಎಂದು ಪ್ರಶ್ನಿಸಿದರು.

ಹಣ ಮಾಡುವುದೇ ಕೆಲಸ:

ಸದ್ಯ ವರ್ಗಾವಣೆ ದಂಧೆಯಲ್ಲಿ ಮುಳುಗಿರುವ ಸರಕಾರದ ವಿರುದ್ಧ ಯಾವುದಾದರೂ ಗಂಭೀರ ಆರೋಪಗಳು ಬಂದಾಗ ಅದನ್ನು ಡೈವರ್ಟ್ ಮಾಡುವ ಕೆಲಸ ಆಗುತ್ತಿದೆ. ಇದರಲ್ಲಿ ಸರಕಾರದ ಹಸ್ತಕ್ಷೇಪ ಆಗುತ್ತಿದೆ ಎಂಬ ಅನುಮಾನವಿದೆ ಎಂದು ಗಂಭೀರವಾಗಿ ಆರೋಪಿಸಿದ ಕಾಗೇರಿ, ಮಂತ್ರಿಗಳಾದ ಡಾ. ಸುಧಾಕರ ಮತ್ತು ಚಲುವರಾಯಸ್ವಾಮಿ ವಿರುದ್ಧ ಆರೋಪ ಕೇಳಿ ಬಂದಾಗ ಅದನ್ನು ಡೈವರ್ಟ್‌ ಮಾಡುವ ಕೆಲಸ ಆಗುತ್ತಿದೆ. ಶಿವಮೊಗ್ಗದಲ್ಲಿ ಗಲಭೆ ನಡೆಯಿತು. ಇದರಿಂದ ಮಂತ್ರಿಗಳ ಮೇಲಿನ ವಿಷಯ ಗೌಣ್ಯಗೊಂಡಿತು ಎಂದರು.

ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಅರವಿಂದ್ ಬೆಲ್ಲದ್, ವಿ.ಪ. ಸದಸ್ಯ ಪ್ರದೀಪ್ ಶೆಟ್ಟರ, ಸಂದೀಪ ದೇಶಪಾಂಡೆ, ಸಂದೀಪ ಬೂದಿಹಾಳ, ರವಿ ದಂಡಿನ, ರವಿ ನಾಯ್ಕ ಸೇರಿದಂತೆ ಹಲವರಿದ್ದರು.

28 ಸ್ಥಾನಗಳಲ್ಲೂ ಗೆಲವು

ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯನ್ನು ತುಂಬು ಹೃದಯದಿಂದ ಸ್ವಾಗತ ಮಾಡುತ್ತೇನೆ. ಇದು ರಾಜ್ಯದ ಅಭಿವೃದ್ಧಿಗೆ ಪೂರಕವಾಗುತ್ತದೆ. ಬರುವ ಲೋಕಸಭೆಯಲ್ಲಿ ಬಿಜೆಪಿ 28 ಸ್ಥಾನಗಳಲ್ಲಿ ಜಯಗಳಿಸಲಿದೆ. 28 ಸ್ಥಾನ ನಾವೇ ಅಂದರೆ ಅದರಲ್ಲಿ ಕೆಲವೊಂದಿಷ್ಟು ಜೆಡಿಎಸ್ ಕೂಡ ಇರುತ್ತವೆ ಎಂದು ಕಾಗೇರಿ ಹೇಳಿದರು. ನೀವು ಟಿಕೆಟ್‌ ಆಕಾಂಕ್ಷಿಯೇ ಎಂಬ ಪ್ರಶ್ನೆಗೆ, ಯಾರನ್ನು ಅಭ್ಯರ್ಥಿ ಮಾಡಬೇಕೆಂಬುದನ್ನು ಹೈಕಮಾಂಡ್‌ ನಿರ್ಧರಿಸುತ್ತದೆ. ಯಾರನ್ನೇ ಅಭ್ಯರ್ಥಿಯನ್ನಾಗಿಸಿದರೂ ಅವರನ್ನು ಗೆಲ್ಲಿಸುವ ಕೆಲಸ ಮಾಡುತ್ತೇವೆ ಎಂದು ಉತ್ತರಿಸಿದರು.

ವಿಪಕ್ಷ ನಾಯಕ ಸ್ಥಾನವನ್ನು ಶೀಘ್ರದಲ್ಲೇ ಹೈಕಮಾಂಡ್‌ ನೇಮಕ ಮಾಡಲಿದೆ. ನಮ್ಮ 66 ಶಾಸಕರೂ ಪ್ರತಿಪಕ್ಷದ ನಾಯಕನಂತೆ ಕಳೆದ ಅಧಿವೇಶನದಲ್ಲಿ ಕೆಲಸ ನಿರ್ವಹಿಸಿದ್ದಾರೆ ಎಂದು ಮಾಜಿ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ