ಭದ್ರಾವತಿ: ನಡೆದು ಹೋಗುತ್ತಿದ್ದ ಯುವಕನಿಗೆ ಆಯುಧದಿಂದ ಬೆನ್ನಿಗೆ ಇರಿದಿರುವ ಘಟನೆ ಸೋಮವಾರ ರಾತ್ರಿ ನಡೆದಿದ್ದು, ಘಟನೆ ಸಂಬಂಧ ನಗರದಲ್ಲಿ ಗೊಂದಲ ಪರಿಸ್ಥಿತಿ ನಿರ್ಮಾಣಗೊಂಡಿದೆ. ಹೊಸಮನೆ ಹನುಮಂತ ನಗರದಲ್ಲಿ ನಂದಕುಮಾರ್ (32) ಎಂಬ ಯುವಕ ನಡೆದುಕೊಂಡು ಹೋಗುತ್ತಿದ್ದಾಗ ಆಯುಧದಿಂದ ಆತನ ಬೆನ್ನಿಗೆ ಇರಿಯಲಾಗಿದೆ. ಗಾಯಗೊಂಡ ನಂದಕುಮಾರ್ ಅವರನ್ನು ತಕ್ಷಣವೇ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ರಾತ್ರಿ ಆಸ್ಪತ್ರೆ ಮುಂಭಾಗ ಗುಂಪು ಜಮಾಯಿಸಿತು. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನಿಲ್‌ಕುಮಾರ್ ಭೂಮರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ. ಮಿಥುನ್‌ಕುಮಾರ್ ಅವರು, ಮೊಬೈಲ್ ಅಡಮಾನ ಇಟ್ಟಿರುವ ವಿಚಾರಕ್ಕೆ ಸಂಬಂಧಿಸಿದಂತೆ ಯುವಕನ ಬೆನ್ನಿಗೆ ಆಯುಧದಿಂದ ಇರಿಯಲಾಗಿದೆ ಎಂದು ತಿಳಿಸಿದ್ದಾರೆ. ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಆಸ್ಪತ್ರೆ ಬಳಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. - - - -ಡಿ10ಬಿಡಿವಿಟಿ: ಭದ್ರಾವತಿಯಲ್ಲಿ ಯುವಕನ ಬೆನ್ನಿಗೆ ಆಯುಧದಿಂದ ಇರಿದಿರುವ ಘಟನೆ ಸೋಮವಾರ ರಾತ್ರಿ ನಡೆದಿದ್ದು, ಈ ಹಿನ್ನೆಲೆ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.