ಸಾರ್ವಜನಿಕರಿಂದ ಎಡಿಜಿಪಿ ಅಲೋಕಕುಮಾರ್‌ಗೆ ಮನವಿ , ಸಂಚಾರ ವ್ಯವಸ್ಥೆ ಸರಿಪಡಿಸಲು ಕ್ರಮ, ಹೆಲ್ಮೆಟ್ ಕಡ್ಡಾಯ
ಕನ್ನಡಪ್ರಭ ವಾರ್ತೆ ದಾವಣಗೆರೆಕ್ರಿಕೆಟ್ ಬೆಟ್ಟಿಂಗ್‌ಗೆ ಕಡಿವಾಣ ಹಾಕಿ, ಶಾಲಾ-ಕಾಲೇಜು-ಹಾಸ್ಟೆಲ್ ಬಳಿ ಹೆಚ್ಚುತ್ತಿರುವ ಗಾಂಜಾ ಮಾರಾಟ ಮಟ್ಟ ಹಾಕಬೇಕು, ದಿನದಿನಕ್ಕೂ ಹೆಚ್ಚುತ್ತಿರುವ ಸಂಚಾರ ದಟ್ಟಣೆ, ಸಂಚಾರ ನಿಯಮ ಉಲ್ಲಂಘನೆ ತಡೆಯಬೇಕು, ಪೊಲೀಸರಿಂದ ವಿನಾಕಾರಣ ದಾಖಲಾಗುತ್ತಿರುವ ಪ್ರಕರಣಗಳಿಂದ ಮುಕ್ತಿ ಕೊಡಿಸಿ,...
ಹೀಗೆ ಹತ್ತು ಹಲವು ಮನವಿ, ಸಲಹೆ, ದೂರುಗಳು ದಾವಣಗೆರೆ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಸಾರ್ವಜನಿಕ ಕುಂದು ಕೊರತೆ ಸಭೆಗೆ ಆಗಮಿಸಿದ್ದ ಎಡಿಜಿಪಿ ಅಲೋಕ ಕುಮಾರ ಸಮ್ಮುಖದಲ್ಲಿ ಕೇಳಿ ಬಂದವು. ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದ್ದು, ಕ್ರಿಕೆಟ್ ಬೆಟ್ಟಿಂಗ್ ಜೋರಾಗಿದೆ. ಈಗಂತೂ ಆ್ಯಪ್ ಮೂಲಕ ಕ್ರಿಕೆಟ್ ಬೆಟ್ಟಿಂಗ್ ಜಾಲ ಸಕ್ರಿಯವಾಗಿದೆ. ಇದರಿಂದಾಗಿ ಸಾಕಷ್ಟು ವಿದ್ಯಾರ್ಥಿ , ಯುವ ಜನರು ದಾರಿ ತಪ್ಪುತ್ತಿದ್ದಾರೆ. ಕ್ರಿಕೆಟ್ ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕಿ, ಜನರಿಗೆ ನೆಮ್ಮದಿ ಕಲ್ಪಿಸಬೇಕು ಎಂಬುದಾಗಿ ಕೆಲವರು ಆಗ್ರಹಿಸಿದರು.ದಂಡ ವಸೂಲಿ ಕೆಲಸ ಮಾಡಿ:
ಈ ವೇಳೆ ಮಾತನಾಡಿದ ಎಡಿಜಿಪಿ ಅಲೋಕಕುಮಾರ, ದಾವಣಗೆರೆ ಜಿಲ್ಲೆಯಲ್ಲಿ 1.11 ಲಕ್ಷ ದಂಡ ವಸೂಲಾತಿ ಚಲನ್ ಪ್ರಕರಣ ಬಾಕಿ ಇದೆ. ಈ ದಂಡ ವಸೂಲಿ ಸಂಬಂಧಿಸಿದ ವ್ಯಕ್ತಿಗಳ ಮನೆ ಮನೆಗಳ ಕದಗಳ ತಟ್ಟಿ, ವಸೂಲಿ ಮಾಡಬೇಕು. ಸಂಚಾರಿ ಪೊಲೀಸ್ ಅಧಿಕಾರಿ, ಸಿಬ್ಬಂದಿ ಇದಕ್ಕೆ ಇತರೆ ಪೊಲೀಸರ ಸಹಕಾರ ಪಡೆದು, ದಂಡ ವಸೂಲಿ ಕೆಲಸ ಮಾಡಿ ಎಂದು ಸೂಚಿಸಿದರು.ಮಹಮ್ಮದ್ ಜಬೀವುಲ್ಲಾ ಮಾತನಾಡಿ, ನಗರದಲ್ಲಿ ಹೆಚ್ಚುತ್ತಿರುವ ಗಾಂಜಾ ಮಾರಾಟ, ಸೇವನೆ ಪ್ರಕರಣಕ್ಕೆ ಕಡಿವಾಣ ಹಾಕಬೇಕೆಂದರು. ಅದಕ್ಕೆ ಅಲೋಕ ಕುಮಾರ, ಗಾಂಜಾ ಮಾರಾಟ, ಸೇವನೆ ಪ್ರಕರಣಗಳ ಬಗ್ಗೆ ಮಾಹಿತಿ ಇದ್ದರೆ ಇಲಾಖೆಯೊಂದಿಗೆ ಹಂಚಿಕೊಳ್ಳಬೇಕು. ಮಾದಕ ವಸ್ತುಗಳ ಮಾರಾಟ ಬಗ್ಗೆ ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಈ ಜಿಲ್ಲೆಯಲ್ಲೂ ಅಧಿಕಾರಿ, ಸಿಬ್ಬಂದಿ ಗಾಂಜಾ, ಡ್ರಗ್ಸ್ ಪ್ರಕರಣ ಗಂಭೀರವಾಗಿ ಪರಿಗಣಿಸಿ. ಬೇರು ಮಟ್ಟದಿಂದ ಕಿತ್ತು ಹಾಕಿ, ಅದನ್ನು ಹತೋಟಿಗೆ ತನ್ನಿ ಎಂದು ಆದೇಶಿಸಿದರು.
ಅದಕ್ಕೆ ಸಾರ್ವಜನಿಕರು ಈಗ ಶಾಲಾ-ಕಾಲೇಜು-ಹಾಸ್ಟೆಲ್‌ಗಳ ಬಳಿ, ಆವರಣದಲ್ಲಿ ಗಾಂಜಾ ಮಾರಾಟ ನಡೆದಿದೆ. ದಾವಣಗೆರೆ ಉತ್ತರ, ದಕ್ಷಿಣದಲ್ಲಿ ಹೆಲ್ಮೆಟ್ ಇಲ್ಲದೇ, 3-4 ಜನ ಒಂದೇ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಾ, ಕರ್ಕಶವಾದ ಧ್ವನಿ ಮಾಡುತ್ತಿದ್ದರೂ ಪೊಲೀಸರು ಅಂತಹವ ವಿರುದ್ಧ ಯಾಕೆ ಕೇಸ್ ದಾಖಲಿಸುತ್ತಿಲ್ಲ ಎಂದು ದೂರಿದರು.ಹೆಲ್ಮೆಟ್ ಕಡ್ಡಾಯ:
ಎಡಿಜಿಪಿ ಅಲೋಕಕುಮಾರ, ಕಳೆದ ವರ್ಷ ರಾಜ್ಯದಲ್ಲಿ ರಸ್ತೆ ಅಪಘಾತದಲ್ಲಿ 11,732 ಜನ ಸಾವನ್ನಪ್ಪಿದ್ದಾರೆ. ಇದರಲ್ಲಿ ಶೇ.60ಕ್ಕೂ ಅಧಿಕ ಜನರು ದ್ವಿಚಕ್ರ ವಾಹನ ಸವಾರರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪೂರ್ಣ ಪ್ರಮಾಣದ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ. ಹೆಲ್ಮೆಟ್ ವಿಚಾರದಲ್ಲಿ ಯಾವುದೇ ರಿಯಾಯಿತಿ ನೀಡಲು ಪೊಲೀಸ್ ಇಲಾಖೆಗೂ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದರು.ಪೂರ್ವ ವಲಯ ಐಜಿಪಿ ಡಾ.ತ್ಯಾಗರಾಜನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಎಎಸ್ಪಿ ರಾಮಗೊಂಡ ಬಿ.ಬಸರಗಿ, ಮಾಜಿ ಮೇಯರ್ ಎಸ್.ಟಿ.ವೀರೇಶ, ಯಾದವ ಸಮಾಜದ ಮುಖಂಡ ಬಾಡದ ಆನಂದರಾಜ, ಹರಿಹರದ ಟಿ.ಜಿ.ಮುರುಗೇಶ, ಸಾಹಸ ಕ್ರೀಡಾ ತರಬೇತುದಾರ ಎನ್.ಕೆ.ಕೊಟ್ರೇಶ ಇತರರು ಇದ್ದರು. ಹಿಂದೆ ದಾವಣಗೆರೆ ಎಸ್ಪಿಯಾಗಿದ್ದ ವೇಳೆ ಅಲೋಕಕುಮಾರ್‌ರ ಸೇವೆಯನ್ನು ಜನರು ಮೆಲಕು ಹಾಕಿದರು.
......................ಆರ್‌ಟಿಐ ಕಾರ್ಯಕರ್ತರ ಹೆಸರಿನಲ್ಲಿ ಕಾನೂನು ದುರ್ಬಳಕೆ ಹೆಚ್ಚಾಗುತ್ತಿದೆ. ಆರ್‌ಟಿಒ ಹೆಸರಿನಲ್ಲಿ ಅದನ್ನು ದುರ್ಬಳಕೆ ಮಾಡಿಕೊಂಡು, ಡಕಾಯಿತರಂತೆ ವರ್ತಿಸುತ್ತಾ, ಪೊಲೀಸ್ ಇಲಾಖೆ, ಕಾನೂನು ಮತ್ತು ಸರ್ಕಾರಿ ವ್ಯವಸ್ಥೆಯನ್ನೇ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇಂತಹವರನ್ನು ಮಟ್ಟ ಹಾಕಿದರೆ ಬಹುತೇಕ ಸಮಸ್ಯೆಗಳು ಬಗೆಹರಿಯುತ್ತವೆ.
ಎಸ್.ಟಿ.ವೀರೇಶ, ಬಿಜೆಪಿ ಮಾಜಿ ಮೇಯರ್................................ ಹರಿಹರ ನಗರ ಹಿಂದಿನಿಂದಲೂ ಸಾಕಷ್ಟು ಹಿಂದುಳಿತ ತಾಲೂಕು ಕೇಂದ್ರ. ಪೊಲೀಸ್ ಸ್ಟೇಷನ್ ವೃತ್ತದಲ್ಲಿ ಪ್ರತಿಮೆ ಸ್ಥಾಪಿಸಿ, ವೃತ್ತವನ್ನು ಮಾಡಬೇಕು. ಆದರೆ, ಹರಿಹರದಲ್ಲಿ ಒಳ್ಳೆಯ ರಸ್ತೆಗಳಿಲ್ಲ. ಪಕ್ಕದಲ್ಲೇ ತುಂಗಭದ್ರಾ ನದಿ ಇದ್ದರೂ ಕುಡಿಯಲು ನೀರಿಲ್ಲ. ಶುದ್ಧ ನೀರು ಸಿಗುತ್ತಿಲ್ಲ. ವಿದ್ಯುತ್ ಸಹ ಸರಿಯಾಗಿ ಪೂರೈಕೆಯಾಗುತ್ತಿಲ್ಲ. ದಾವಣಗೆರೆಯಷ್ಟೇ ಸ್ಮಾರ್ಟ್ ಸಿಟಿ ಆಯ್ತಷ್ಟೇ. ಹರಿಹರ ಮಾತ್ರ ಸಂಪೂರ್ಣ ನಿರ್ಲಕ್ಷ್ಯಕ್ಕೆ ಗುರಿಯಾಗುತ್ತಲೇ ಇದೆ.
ಟಿ.ಜಿ.ಮುರುಗೇಶ, ಹರಿಹರ ನಿವಾಸಿ.............................. ದಾವಣಗೆರೆ ರೇಣುಕಾ ಮಂದಿರ ಬಳಿ ಚಿಕ್ಕದಾಗಿ ಬ್ಯಾರಿಕೇಡ್ ಹಾಕಿದ್ದರಿಂದ ವಾಹನ ಸವಾರರಿಗೆ ಸಾಕಷ್ಟು ಅನಾನುಕೂಲವಾಗುತ್ತಿದೆ. ಅದನ್ನು ಸರಿಪಡಿಸುವಂತೆ ಪೊಲೀಸ್ ಇಲಾಖೆಗೆ ಸಾಕಷ್ಟು ಸಲ ಮನವಿ ಮಾಡಿದ್ದೇವೆ.
ಎನ್.ಕೆ.ಕೊಟ್ರೇಶ್, ಸಾಹಸ ಕ್ರೀಡಾ ತರಬೇತುದಾರ....................................
ದಾವಣಗೆರೆ ರೇಣುಕಾ ಮಂದಿರ ಬಳಿ ಬ್ಯಾರಿಕೇಡ್ ಸಮಸ್ಯೆ ವಿಚಾರದ ಬಗ್ಗೆ ಪರಿಶೀಲಿಸಿ, ಮುಂದಿನ ಒಂದೆರೆಡು ದಿನಗಳಲ್ಲೇ ಸಮಸ್ಯೆ ಪರಿಹರಿಸಲಾಗುವುದು.ಉಮಾ ಪ್ರಶಾಂತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.
............................