ಗದಗ: ರಾಜಕೀಯದಲ್ಲಿ ಇಂದು ಸತ್ಯಕ್ಕಿಂತ ಸುಳ್ಳೇ ಹೆಚ್ಚು ರಾರಾಜಿಸುತ್ತಿದೆ, ಇದು ಅತ್ಯಂತ ಬೇಸರದ ಸಂಗತಿ. ರಾಜಕೀಯ ವಸ್ತುನಿಷ್ಠವಾಗಿರಬೇಕು. ರಾಜಕೀಯ ಬದುಕಿನ ವಿಷಯಗಳ ಮೇಲೆ ನಡೆಯಬೇಕು. ಜಾತಿಗಳ ಆಧಾರದಲ್ಲಿ ಅಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಸಂವಿಧಾನದ ಮೂಲ ಆಶಯವೇ ಸಮ ಸಮಾಜ ನಿರ್ಮಾಣವಾಗಿದೆ. ಆದರೆ ನಾವು ಚುನಾಯಿತರಾಗಿ ಬಂದರೆ ಸಂವಿಧಾನವನ್ನೇ ಬದಲಿಸುತ್ತೇವೆ ಎನ್ನುವವರಿಗೆ ಈ ಬಾರಿ ಚುನಾವಣೆಯಲ್ಲಿ ಒಂದು ಸ್ಪಷ್ಟವಾದ ಉತ್ತರವನ್ನು ಮತದಾನದ ಮೂಲಕ ಎಲ್ಲರೂ ನೀಡಬೇಕಿದೆ. ಬಡವರಿಗೆ ಸೌಲಭ್ಯ ನೀಡಿದರೆ ಇವರಿಗೆ ತೊಂದರೆಯಾಗುತ್ತದೆ. ಇವರು ನಿತ್ಯವೂ ಶ್ರೀಮಂತರನ್ನು ಮತ್ತಷ್ಟು ಶ್ರೀಮಂತರನ್ನಾಗಿ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಇದರಿಂದಾಗಿ ಸಮಾಜದಲ್ಲಿ ಮತ್ತೆ ಶ್ರೇಣೀಕೃತ ವ್ಯವಸ್ಥೆಗಿಂತಲೂ ಅಪಾಯಕಾರಿ ನಿಲುವುಗಳು ಗೋಚರವಾಗುತ್ತಿವೆ.
ಪ್ರತಿ ಹಂತದಲ್ಲಿ ಪ್ರಜಾಪ್ರಭುತ್ವ ನಮಗೆ ಬೇಕು. ಆದರೆ ಪ್ರಜಾಪ್ರಭುತ್ವದ ಮೂಲ ಆಶಯಕ್ಕೆ ಕೊಡಲಿ ಪೆಟ್ಟನ್ನು ನೀಡಿ, ತಮ್ಮ ದಮನಕಾರಿ ಆಲೋಚನೆಗಳು, ಪ್ರವೃತ್ತಿಗಳಿಂದಾಗಿ ಹಿಂದುಳಿದ, ಬಡವ ದಲಿತ ಹೀಗೆ ಸದಾ ಸಮಸ್ಯೆಯಲ್ಲಿಯೇ ಇರುವ ಸಮುದಾಯಗಳನ್ನು ಮತ್ತಷ್ಟು ಸಮಸ್ಯೆಗೆ ಸಿಕ್ಕಿಸುವ ಪ್ರಯತ್ನಗಳು ಅವ್ಯಾಹತವಾಗಿ ನಡೆಯುತ್ತಿವೆ. ಇದನ್ನು ನಾವು ನೀವೆಲ್ಲ ಸೇರಿ ಬಲವಾಗಿ ಖಂಡಿಸಬೇಕು. ಮತದಾನ ಮೂಲಕ ಸಂದೇಶ ರವಾನಿಸಿ ಅವರನ್ನು ಅಧಿಕಾರದಿಂದೆ ಕೆಳಗಿಸಬೇಕು ಎಂದರು.ಆನಂತರ ಪಿಪಿಟಿ ಮೂಲಕ ರಾಜ್ಯಕ್ಕೆ ತೆರಿಗೆಯಲ್ಲಿ, ಬರ ಪರಿಹಾರದಲ್ಲಿ ಜಿಎಸ್ಟಿಯಲ್ಲಿ, ಪೆಟ್ರೋಲ್, ಡೀಸೆಲ್, ತೆರಿಗೆಯಲ್ಲಿ ಹೀಗೆ ಉತ್ತರ ರಾಜ್ಯಗಳಿಗೆ ಹೇಗೆ ಅನುಕೂಲ ಮಾಡುತ್ತಿದ್ದಾರೆ? ದಕ್ಷಿಣ ರಾಜ್ಯಗಳಿಗೆ ಎಷ್ಟು ಅನ್ಯಾಯ ಮಾಡುತ್ತಿದ್ದಾರೆ? ಎನ್ನುವ ಬಗ್ಗೆ ಪ್ರತಿಯೊಂದು ಅಂಕಿ-ಅಂಶಗಳ ಸಹಿತ ಸುದೀರ್ಘವಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ದಲಿತ ಕಲಾ ಮಂಡಳಿಯ ಷರೀಫ ಬಿಳಿಯಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂವಿಧಾನ ತೆಗೆದು ಹಾಕಲು ಬರುತ್ತಿದ್ದಾರೆ, ಅದಕ್ಕೆ ಅವಕಾಶ ನೀಡಬೇಡಿ. ಸಂವಿಧಾನ ಉಳಿಸೋಣ ನಾವೆಲ್ಲ ಎಂದರು.
ರೈತ ಸಂಘದ ಜೆ.ಎಂ. ವೀರಸಂಗಯ್ಯ, ಜಿಲ್ಲಾ ರೈತ ಸಂಘದ ಅಧ್ಯಕ್ಷ ಮುತ್ತಣ್ಣ ಚೌಡರಡ್ಡಿ, ಜಾಗ್ರತ ಕರ್ನಾಟಕದ ರಾಜಶೇಖರ ಅಕ್ಕಿ, ಮಾಜಿ ಶಾಸಕ ಡಿ.ಆರ್. ಪಾಟೀಲ ಉಪಸ್ಥಿತರಿದ್ದರು. ಮುತ್ತು ಬಿಳೆಯಲಿ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲೆಯ ವಿವಿಧ ತಾಲೂಕುಗಳಿಂದ ರೈತ ಸಂಘ, ದಲಿತ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು, ಅಭಿಮಾನಿಗಳು ಪಾಲ್ಗೊಂಡಿದ್ದರು.