ಕನ್ನಡಪ್ರಭ ವಾರ್ತೆ ಮಂಗಳೂರು
ರಂಗಸ್ಥಳದಲ್ಲಿ ತನ್ನ ಪಾತ್ರ ಮುಗಿಸಿ, ಚೌಕಿಯಲ್ಲಿ ವೇಷ ಕಳಚಿ, ಬಣ್ಣ ತೆಗೆಯುವಾಗಲೇ ಹೃದಯಾಘಾತದಿಂದ ಕಲಾವಿದ ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಕೋಟ ಗಾಂಧಿ ಮೈದಾನದಲ್ಲಿ ಬುಧವಾರ ತಡರಾತ್ರಿ ನಡೆದಿದೆ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಕಲಾವಿದ ಗಂಗಾಧರ ಜೋಗಿ ಪುತ್ತೂರು (59) ಮೃತರು.ಬುಧವಾರ ಉಡುಪಿ ಜಿಲ್ಲೆಯ ಕೋಟ ಗಾಂಧಿ ಮೈದಾನದಲ್ಲಿ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟದ ಅಂತಿಮ ಘಟ್ಟದಲ್ಲಿ ಅವರು ಕುಕ್ಕಿತ್ತಾಯನ ವೇಷ ನಿರ್ವಹಿಸಿದರು. ಚೌಕಿಗೆ ಮರಳಿ ಕಿರೀಟ ಆಭರಣಗಳನ್ನು ತೆಗೆದಿಟ್ಟು ಮುಖದ ಬಣ್ಣ ತೆಗೆಯುತ್ತಿದ್ದ ಹಾಗೆ, ರಾತ್ರಿ ಸುಮಾರು 12.25ಕ್ಕೆ ಮಂಗಳ ಆಗುವ ವೇಳೆಗೇ ತೀವ್ರ ಹೃದಯಾಘಾತದಿಂದ ಚೌಕಿಯಲ್ಲೇ ನಿಧನರಾದರು ಎಂದು ತಿಳಿದುಬಂದಿದೆ.
ಗಂಗಾಧರ ಜೋಗಿ ಶ್ರೀ ಧರ್ಮಸ್ಥಳ ಮೇಳದ ಸವ್ಯಸಾಚಿ ಕಲಾವಿದ ಕಲಾವಿದ. ಇದೇ ಮೇಳದಲ್ಲಿ 42 ವರ್ಷಗಳ ತಿರುಗಾಟ ನಡೆಸಿದ್ದಾರೆ. ಕರ್ಗಲ್ಲು ಯಕ್ಷರೂಪಕ ತಂಡದಲ್ಲಿ ಒಂದು ವರ್ಷ, ಮುಳಿಯಾಲ ಭೀಮ ಭಟ್ಟರ ತಂಡದಲ್ಲಿ 10 ವರ್ಷ, 26 ವರ್ಷ ನಿಡ್ಲೆ ಮಹಾಗಣಪತಿ ಯಕ್ಷಗಾನ ಮಂಡಳಿಯ ಮಳೆಗಾಲದ ಕಾರ್ಯಕ್ರಮಗಳಲ್ಲೂ ಭಾಗವಹಿಸಿದ ಅನುಭವಿ.ತನಗೆ ನೀಡಿದ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದ ಅವರು, ಸ್ತ್ರೀವೇಷ, ಪುಂಡುವೇಷ, ಕಿರೀಟ ವೇಷ, ಹಾಸ್ಯ, ಅನಿವಾರ್ಯವಾದರೆ ಕೇಶಾವರೀ ಬಣ್ಣದ ವೇಷಕ್ಕೂ ಅವರು ತಯಾರಾಗುತ್ತಿದ್ದರು. ಹೆಣ್ಣುವೇಷಗಳಲ್ಲಿ ಬಣ್ಣದ ವೇಷಗಳನ್ನೂ ನಿರ್ವಹಿಸುತ್ತಿದ್ದರು. ಹೀಗಾಗಿ ಮೇಳಕ್ಕೆ ಅನಿವಾರ್ಯ ಕಲಾವಿದರಾಗಿದ್ದರು.
ಪುತ್ತೂರು ತಾಲೂಕು ಕೋಡಿಂಬಾಡಿ ಸಮೀಪ ಸೇಡಿಯಾಪು ಎಂಬಲ್ಲಿ ಜನಿಸಿದ ಅವರು, ಏಳನೇ ತರಗತಿವರೆಗೆ ಓದಿ ಬಳಿಕ ಕುಂಬಳೆ ಶ್ರೀಧರ ರಾಯರ ಮಾರ್ಗದರ್ಶನದಲ್ಲಿ ಶ್ರೀ ಧರ್ಮಸ್ಥಳ ಯಕ್ಷಗಾನ ಕಲಿಕಾ ಕೇಂದ್ರಕ್ಕೆ ಸೇರಿದರು. ಅಲ್ಲಿ ಹಿರಿಯರಾದ ಗೋವಿಂದ ಭಟ್ ಮತ್ತು ಕರ್ಗಲ್ಲು ವಿಶ್ವೇಶ್ವರ ಭಟ್ಟರಿಂದ ಹೆಜ್ಜೆಗಾರಿಕೆಯನ್ನು ಕಲಿತು, ಶ್ರೀ ಧರ್ಮಸ್ಥಳ ಮೇಳಕ್ಕೆ ಬಾಲಕಲಾವಿದನಾಗಿ ಸೇರ್ಪಡೆಗಿ ಹಂತ ಹಂತವಾಗಿ ಬೆಳೆದರು. ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯ ಮಾಲತಿ ಪಾತ್ರ ಸಹಿತ, ಕಸೆ ಸ್ತ್ರೀವೇಷ, ಗರತಿ ವೇಷಗಳು ಅಲ್ಲದೆ ಶೃಂಗಾರ ವೇಷಗಳಲ್ಲಿ ಮಿಂಚಿ ಪ್ರಮುಖ ಕಲಾವಿದರೊಂದಿಗೆ ಕೆಲಸ ಮಾಡಿದರು. ಪತ್ನಿ, ಪುತ್ರನನ್ನು ಅಗಲಿದ್ದಾರೆ.ಕಲಾವಿದ ಗಂಗಾಧರ ನಿಧನಕ್ಕೆ ಹೆಗ್ಗಡೆ ಸಂತಾಪಧರ್ಮಸ್ಥಳ: ನಮ್ಮ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಯಕ್ಷಗಾನ ಮಂಡಳಿಯ ಪ್ರತಿಭಾವಂತ ಕಲಾವಿದರಾದ ಪುತ್ತೂರು ಗಂಗಾಧರರವರು ಹೃದಯಾಘಾತದಿಂದ ನಿಧನರಾದ ವಿಚಾರ ತಿಳಿದು ಆಘಾತವಾಯಿತು. ತನ್ನ ೧೪ನೇ ವಯಸ್ಸಿನಲ್ಲಿ ಕ್ಷೇತ್ರದಲ್ಲಿರುವ ಯಕ್ಷಗಾನ ತರಬೇತಿ ಕೇಂದ್ರದಲ್ಲಿ ವಿದ್ಯಾರ್ಥಿಯಾಗಿ ಸೇರಿದ ಅವರು ವಿದ್ಯಾರ್ಜನೆ ಮುಗಿದ ಬಳಿಕ ನಮ್ಮ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯಲ್ಲಿ ಕಲಾವಿದರಾಗಿ ೪೨ ವರ್ಷಗಳ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದಾರೆ. ಹಾಸ್ಯದಿಂದ ಪ್ರಾರಂಭಿಸಿ ರಾಜನ ಪಾತ್ರದವರೆಗೆ ಎಲ್ಲ ತರಹದ ವೇಷವನ್ನು ಮಾಡಬಲ್ಲ ಸಮರ್ಥ ಕಲಾವಿದರಾಗಿದ್ದರು. ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಹಾಗೂ ಅವರ ಕುಟುಂಬವರ್ಗದವರಿಗೆ ಉಂಟಾದ ದು:ಖವನ್ನು ಸಹಿಸುವ ಶಕ್ತಿ, ತಾಳ್ಮೆಯನ್ನು ಶ್ರೀ ಮಂಜುನಾಥ ಸ್ವಾಮಿ ಅನುಗ್ರಹಿಸಲೆಂದು ಪ್ರಾರ್ಥಿಸುತ್ತೇನೆ ಎಂದು ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗೆಡೆ ಅವರು ಸಂತಾಪ ಸೂಚಿಸಿದ್ದಾರೆ.