ಗುರುವಿನ ಉಪದೇಶ ಪಾಲನೆಯಿಂದ ಬದುಕು ಪಾವನ-ಮಂಜುನಾಥ

KannadaprabhaNewsNetwork |  
Published : Nov 18, 2026, 02:30 AM IST
ರಾಣಿಬೆನ್ನೂರು ತಾಲೂಕಿನ ಅಂಕಸಾಪುರ ಗ್ರಾಮದಲ್ಲಿ ಏರ್ಪಡಿಸಿದ್ದ  ಧಾರ್ಮಿಕ ಕಾರ್ಯಕ್ರಮವನ್ನು ಹದಡಿಯ ಮುರಳಿಧರ ಶ್ರೀಗಳು ಉದ್ಘಾಟಿಸಿದರು | Kannada Prabha

ಸಾರಾಂಶ

ಇಂದಿನ ಆಧುನಿಕ ಜಗತ್ತಿನಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ಸಂಸ್ಕಾರ, ಸಂಸ್ಕೃತಿ ಹಾಗೂ ಧಾರ್ಮಿಕ ಮನೋಭಾವನೆಗಳನ್ನು ಬೆಳೆಸುವುದು ಅತ್ಯವಶ್ಯಕವಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ಹೇಳಿದರು.

ರಾಣಿಬೆನ್ನೂರು: ಇಂದಿನ ಆಧುನಿಕ ಜಗತ್ತಿನಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ಸಂಸ್ಕಾರ, ಸಂಸ್ಕೃತಿ ಹಾಗೂ ಧಾರ್ಮಿಕ ಮನೋಭಾವನೆಗಳನ್ನು ಬೆಳೆಸುವುದು ಅತ್ಯವಶ್ಯಕವಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ಹೇಳಿದರು.

ತಾಲೂಕಿನ ಅಂಕಸಾಪುರ ಗ್ರಾಮದಲ್ಲಿ ಶ್ರೀ ಸದ್ಗುರು ಶಿವನಪಾದ ಶಿವಾನಂದ ಮಹಾಸ್ವಾಮಿಗಳ 40ನೇ ವರ್ಷದ ಹಾಗೂ ಶ್ರೀ ಈಶ್ವರಾನಂದ ಮಹಾಸ್ವಾಮಿಗಳ 3ನೇ ವರ್ಷದ ಪುಣ್ಯಾರಾಧನೆ ಅಂಗವಾಗಿ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಣ ಎಷ್ಟು ಮುಖ್ಯವೋ, ಅವರಲ್ಲಿ ನೈತಿಕ ಮೌಲ್ಯಗಳು, ಗುರುಹಿರಿಯರನ್ನು ಗೌರವಿಸುವ ಹಾಗೂ ಪೂಜಿಸುವ ಮತ್ತು ಮಾನವೀಯತೆ ಹಾಗೂ ಪರೋಪಕಾರದ ಗುಣಗಳನ್ನು ಬೆಳೆಸುವುದೂ ಅಷ್ಟೇ ಮುಖ್ಯ. ಈ ನಿಟ್ಟಿನಲ್ಲಿ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಮಹತ್ತರ ಜವಾಬ್ದಾರಿ ತಾಯಂದಿರ ಮೇಲಿದೆ ಎಂದರು.

ಹದಡಿಯ ಶ್ರೀ ಸಿದ್ಧಾರೂಢ ಮಠದ ಮುರಳೀಧರ ಶ್ರೀಗಳು ಮಾತನಾಡಿ, ಜ್ಞಾನವನ್ನು ಸಂಪಾದಿಸಬೇಕಾದರೆ ಗುರುವಿನ ಸನ್ಮಾರ್ಗ ಹಾಗೂ ಮಾರ್ಗದರ್ಶನ ಅತ್ಯಂತ ಮುಖ್ಯ. ಗುರುವಿನ ಉಪದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯುವವರ ಬದುಕು ಪಾವನವಾಗುತ್ತದೆ. ಗುರುಗಳು ತೋರಿದ ದಾರಿಯಲ್ಲಿ ನಡೆಯುವುದರಿಂದ ವ್ಯಕ್ತಿಯಲ್ಲಿ ಜ್ಞಾನ, ವಿನಯ, ವಿವೇಕ ಹಾಗೂ ಸನ್ನಡತೆ ಬೆಳೆಯುತ್ತವೆ. ಅಧಿಕಾರ, ಅಂತಸ್ತು, ಐಶ್ವರ್ಯ ಯಾವುದೂ ಶಾಶ್ವತವಲ್ಲ. ಮನುಷ್ಯನ ಜೀವನದಲ್ಲಿ ಇರುವಷ್ಟು ದಿನ ಧಾರ್ಮಿಕ ಮನೋಭಾವನೆ ಬೆಳೆಸಿಕೊಂಡು, ಪರರಿಗೆ ಒಳಿತು ಮಾಡುವ ಮನಸ್ಸು ಹೊಂದಿರಬೇಕು. ಮತ್ತೊಬ್ಬರಿಗೆ ಉಪದೇಶ ನೀಡುವ ಮೊದಲು ನಾವು ಒಳ್ಳೆಯವರಾಗಬೇಕು. ನಮ್ಮ ನಡೆ-ನುಡಿ ಇತರರಿಗೆ ಮಾದರಿಯಾಗಬೇಕು. ದ್ವೇಷ, ಅಹಂಕಾರ ಹಾಗೂ ಸ್ವಾರ್ಥವನ್ನು ಬದಿಗಿಟ್ಟು ಪ್ರೀತಿ, ವಿಶ್ವಾಸ, ಸಹಬಾಳ್ವೆ ಮತ್ತು ಮಾನವೀಯತೆಯಿಂದ ಬದುಕುವುದೇ ನಿಜವಾದ ಧರ್ಮದ ಆಚರಣೆಯಾಗಿದೆ ಎಂದರು.

ಶ್ರೀಮಠದ ದಯಾನಂದ ಶ್ರೀಗಳು ಮಾತನಾಡಿ, ಮಠಮಾನ್ಯಗಳು ಕೇವಲ ಧಾರ್ಮಿಕ ಆಚರಣೆಗಳ ಕೇಂದ್ರಗಳಲ್ಲ. ಅವು ಸಮಾಜದಲ್ಲಿ ಸಂಸ್ಕಾರ, ಸಂಸ್ಕೃತಿ, ಜ್ಞಾನ, ಭಕ್ತಿ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ಶ್ರದ್ಧಾಕೇಂದ್ರಗಳಾಗಿವೆ. ಸರ್ವರಿಗೂ ಒಳಿತಾಗಲಿ, ಎಲ್ಲರೂ ಉತ್ತಮ ಸಂಸ್ಕಾರ ಹಾಗೂ ಧಾರ್ಮಿಕ ಮನೋಭಾವನೆಯೊಂದಿಗೆ ಬದುಕು ಪಾವನವಾಗಿಸಿಕೊಳ್ಳಲಿ ಎಂಬ ಉದ್ದೇಶದಿಂದಲೇ ಮಠಮಾನ್ಯಗಳು ಪರಂಪರೆಯಿಂದ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಾ ಬಂದಿವೆ ಎಂದರು.

ನಂದೀಶ್ವರ ಶಿವಾಚಾರ್ಯರು, ಗಜದಂಡ ಶ್ರೀಗಳು, ಶ್ರೀ ಗುರುಜಯಾನಂದ ಪ್ರಸಾದ ಮೂರ್ತಿ ಸ್ವಾಮಿಗಳು, ಕುಮಾರ ಸಿದ್ಧಾರೂಢ ಶ್ರೀಗಳು, ಶ್ರೀ ಪ್ರಕಾಶಾನಂದ ಸ್ವಾಮಿಗಳು, ಬಸವರಾಜ ಶ್ರೀಗಳು, ಮರುಳ ಶಂಕರ ಶ್ರೀಗಳು, ಪ್ರಭುಸ್ವಾಮಿ ಹಿರೇಮಠ, ಕಾಶಿನಾಥ ಶಾಸ್ತ್ರಿಗಳು, ಅಜ್ಜಯ್ಯ ಸ್ವಾಮಿ, ವಿ.ಎಂ. ಹಿರೇಮಠ, ಚನ್ನವೀರ ಶಾಸ್ತ್ರಿಗಳು ಗಣ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡಿ
ವಿಶ್ವಮಟ್ಟದ ಶ್ರೇಷ್ಠ ವಾಸ್ತುಶಿಲ್ಪಗಳ ತಾಣ ವಿಜಯಪುರ