ಶಿಕ್ಷಣದಿಂದ ಮಾತ್ರ ಬದಕು ಹಸನು: ಸುಬ್ಬಾರೆಡ್ಡಿ

KannadaprabhaNewsNetwork | Published : Dec 28, 2023 1:45 AM

ಸಾರಾಂಶ

ಯಾವುದೇ ಜೀವನದಿ, ಕೈಗಾರಿಕೆಗಳಿಲ್ಲದ ಈ ಭಾಗದಲ್ಲಿ ಶಿಕ್ಷಣವೊಂದೇ ಬದುಕಲು ಇರುವ ದಾರಿ. ಶೈಕ್ಷಣಿಕ ಅಭಿವೃದ್ದಿ ಹೊಂದಿದರೆ ಮಾತ್ರ ಉತ್ತಮ ಜೀವನ ನಡೆಸಲು ಸಾಧ್ಯ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು.

ಶಾಂತಿ ನಿಕೇತನ ಶಾಲೆಯಲ್ಲಿ ವಾರ್ಷಿಕೋತ್ಸವ । ಸಮಾರಂಭ ಉದ್ಘಾಟಿಸಿದ ಶಾಸಕರು । ಸಾಂಸ್ಕ್ರತಿಕ ಕಾರ್ಯಕ್ರಮ ಆಯೋಜನೆ

ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ

ಯಾವುದೇ ಜೀವನದಿ, ಕೈಗಾರಿಕೆಗಳಿಲ್ಲದ ಈ ಭಾಗದಲ್ಲಿ ಶಿಕ್ಷಣವೊಂದೇ ಬದುಕಲು ಇರುವ ದಾರಿ. ಶೈಕ್ಷಣಿಕ ಅಭಿವೃದ್ದಿ ಹೊಂದಿದರೆ ಮಾತ್ರ ಉತ್ತಮ ಜೀವನ ನಡೆಸಲು ಸಾಧ್ಯ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಶಾಂತಿ ನಿಕೇತನ ಶಾಲೆಯಲ್ಲಿ ನಡೆದ 24 ನೇ ವಾರ್ಷಿಕೋತ್ಸವ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಭಾಗದಲ್ಲಿ ಯಾವುದೇ ಜೀವನದಿಗಳಿಲ್ಲ, ಶಾಶ್ವತ ನೀರಾವರಿ ಯೋಜನೆಗಳಿಲ್ಲ, ಕೈಗಾರಿಕೆಗಳಂತೂ ಇಲ್ಲವೇ ಇಲ್ಲ. ಇಂತಹ ಪ್ರದೇಶದಲ್ಲಿ ಈ ಭಾಗದ ಜನರು ಜೀವನ ನಡೆಸಲು ಪರದಾಡುವ ಪರಿಸ್ಥಿತಿಯಿದೆ. ಇಲ್ಲಿನ ಜನರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡಿದರೆ ಮಾತ್ರ ಭವಿಷ್ಯದಲ್ಲಿ ಉತ್ತಮ ಜೀವನ ಸಿಗಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಆಸ್ತಿ ಮಾಡುವ ಬದಲಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಿಸುವಂತೆ ಪೋಷಕರಿಗೆ ಕಿವಿ ಮಾತು ಹೇಳಿದರು.

ನಾನು ಯಾವುದೇ ರಾಜಕೀಯ ಕುಟುಂಬದಿಂದಲೋ, ಇಲ್ಲವೇ ಶ್ರೀಮಂತ ಕುಟುಂಬದಿಂದಲೋ ಬಂದವನಲ್ಲ, ನಾನೂ ಸಾಮಾನ್ಯ ರೈತ ಕುಟುಂಬದಿಂದ ಬಂದವನು. ಶಿಕ್ಷಣ, ವ್ಯಾಪಾರ ಸೇರಿದಂತೆ ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೆ ಬರಬೇಕು ಎನ್ನುವ ಛಲ, ಹಠದಿಂದ ಇಂದು ವ್ಯಾಪಾರದಲ್ಲಿ ಮತ್ತು ರಾಜಕೀಯದಲ್ಲಿ ಉನ್ನತ ಸ್ಥಾನಗಳನ್ನು ಪಡೆಯಲು ಸಾಧ್ಯವಾಯಿತು ಎಂದರು.

ಗುರಿ ಸಾಧಿಸಬೇಕೆಂಬ ಛಲ,ಉತ್ತಮವಾಗಿ ಬದುಕುಬೇಕೆಂಬ ಆಸೆಯ ಜೊತೆಗೆ ಹಠದಿಂದ ಕಷ್ಟಪಟ್ಟು ಓದುವ ಬದಲಿಗೆ ಇಷ್ಟಪಟ್ಟು ಓದುವುದನ್ನು ಬಾಲ್ಯದಿಂದಲ್ಲೇ ರೂಢಿಸಿಕೊಂಡಾಗ ಮಾತ್ರ ನಿಮ್ಮ ಗುರಿಯನ್ನು ಸಾಧಿಸಲು ಸಾಧ್ಯ.ಯಾವುದೇ ಒಬ್ಬ ವಿದ್ಯಾರ್ಥಿಯ ಶೈಕ್ಷಣಿಕ ಅಭಿವೃದ್ದಿಯಲ್ಲಿ ಶಿಕ್ಷಕರು ಹಾಗೂ ಪೋಷಕರು ಪ್ರಮುಖ ಪಾತ್ರವಹಿಸಬೇಕಾದ ಅಗತ್ಯವಿದೆ ಎಂದರು.

ಶಾಂತಿ ನಿಕೇತನ್ ಶಾಲೆಯ ಅಧ್ಯಕ್ಷ ಚಿಕ್ಕನರಸಿಂಹಯ್ಯ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವುದು 11 ಮತ್ತು 12ನೇ ತರಗತಿಯಲ್ಲಿ. ಆದರೆ, ಇಲ್ಲಿ ವಿದ್ಯಾರ್ಥಿಗಳು ತಮ್ಮ ಭವಿಷ್ಯ ಉತ್ತಮಪಡಿಸಿಕೊಳ್ಳುವ ಅವಕಾಶಗಳಿಗಿಂತಲೂ ಹಾಳು ಮಾಡಿಕೊಳ್ಳುವ ಅವಕಾಶಗಳೇ ಹೆಚ್ಚಾಗಿರುತ್ತವೆ. ಈ ನಿಟ್ಟಿನಲ್ಲಿ ಪೋಷಕರು ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಹೆಚ್ಚಿನ ನಿಗಾವಹಿಸಬೇಕೆಂದು ಪೋಷಕರಿಗೆ ಕಿವಿ ಮಾತು ಹೇಳಿದರು.

ಕೇವಲ ಬಿಇ, ವೈದ್ಯಕೀಯಕ್ಕೆ ಸೀಮಿತರಾಗದೇ ಐಎಎಸ್, ಐಪಿಎಸ್, ಕೆಎಎಸ್ ಸೇರಿದಂತೆ ಉದ್ಯೋಗವಕಾಶಗಳು ಸಿಗುವಂತಹ ಕೋರ್ಸ್‍ಗಳ ಕಡೆ ಆಸಕ್ತಿವಹಿಸುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಡಿಡಿಪಿ ಬೈಲಾಂಜಿನಪ್ಪ, ಇಸ್ರೋ ವಿಜ್ಞಾನಿ ಗುರ್ರಪ್ಪ, ಬಿಇಓ ತನುಜಾ, ವಿಧಾನ ಸೌಧದ ಮುಖ್ಯಮಂತ್ರಿಗಳ ಪರಿಹಾರ ನಿಧಿ ಕಾರ್ಯನಿರ್ವಾಹಣಾಧಿಕಾರಿ ವೆಂಕಟೇಶ್, ವೆಂಕಟರಮಣಪ್ಪ, ಶಾಲೆಯ ಪ್ರಾಂಶುಪಾಲ ನವೀನ್, ಶಾಲೆಯ ಮುಖ್ಯಸ್ಥ ರಘು, ಶಾಲೆಯ ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.

----

ಬಾಗೇಪಲ್ಲಿಯಲ್ಲಿ ನಡೆದ ಶಾಂತಿನಿಕೇತನ್ ಶಾಲೆಯ 24ನೇ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಉದ್ಘಾಟಿಸಿದರು.

Share this article