ಕನ್ನಡಪ್ರಭ ವಾರ್ತೆ ಭಟ್ಕಳ
ಪಟ್ಟಣದ ಲೈಫ್ ಕೇರ್ ಆಸ್ಪತ್ರೆಯ ಹೆಸರನ್ನು ಹಾಳುಮಾಡುವ ಉದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟು ಕರ್ತವ್ಯದಲ್ಲಿದ್ದ ವೈದ್ಯಾಧಿಕಾರಿಗೆ ಜೀವ ಬೆದರಿಕೆ ಹಾಕಿದ ಘಟನೆ ನಡೆದಿದೆ.ಮೂರು ವರ್ಷದ ಪುಟ್ಟ ಬಾಲಕನೋರ್ವ ಆಕಸ್ಮಿಕವಾಗಿ ಬಿಸಿ ನೀರಿನಿಂದ ಸುಟ್ಟು ಗಾಯಗೊಂಡು ರೋಗಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ದಿನಗಳ ಕಾಲ ಬಾಲಕನಿಗೆ ಕೇವಲ ಆಸ್ಪತ್ರೆಯಲ್ಲಿರುವ ವೈದ್ಯರು ಮಾತ್ರವಲ್ಲ ಹೊರಗಿನಿಂದ ನುರಿತ ತಜ್ಞ ವೈದ್ಯರನ್ನು ಕರೆಯಿಸಿ ಸೂಕ್ತ ಚಿಕಿತ್ಸೆ ನೀಡುತ್ತಿರುವ ಸಂದರ್ಭದಲ್ಲಿಯೇ ಬಾಲಕನ ಪಾಲಕರು ಆಸ್ಪತ್ರೆಯಲ್ಲಿನ ಚಿಕಿತ್ಸೆ ಸಮರ್ಪಕವಾಗಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿ, ವೈದ್ಯರಿಗೆ ನೀವು ಸರಿಯಾಗಿ ಚಿಕಿತ್ಸೆ ನೀಡಿಲ್ಲ, ಮತ್ತೆ ಬಂದು ನಿಮಗೂ ಆಸ್ಪತ್ರೆಯವರಿಗೂ ತಕ್ಕ ಪಾಠ ಕಲಿಸುತ್ತೇವೆ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಆರೋಪಿತ ಭಟ್ಕಳ ಕ್ರಿಕೆಟ್ ಗ್ರೂಪ್ ಸೇರಿದಂತೆ ಹಲವು ವಾಟ್ಸಾಪ್ ಗ್ರೂಪ್‌ಗಳಲ್ಲಿ ಆಸ್ಪತ್ರೆಯ ಕುರಿತು ಇಲ್ಲದ ಸಲ್ಲದ ಸುಳ್ಳು ಸುದ್ದಿ ಸೃಷ್ಟಿಸಿ ವಿಡಿಯೋ ಕಳಿಸಿದ್ದಾರೆ. ಇದರ ಹಿಂದೆ ಆಸ್ಪತ್ರೆಯ ಹೆಸರಿಗೆ ಕಳಂಕ ತರುವ ಉದ್ದೇಶವಿದೆ ಎಂದೂ ದೂರಿರುವ ಆಸ್ಪತ್ರೆಯ ಆಡಳಿತಾಧಿಕಾರಿ ಸಲ್ಮಾನ್ ಅಹ್ಮದ್ ಭಾಷಾ ಶೇಖ್ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಕುರಿತು ಮೊದಲು ಭಟ್ಕಳ ನಗರ ಠಾಣೆಯಲ್ಲಿ ಎನ್.ಸಿ. ಪ್ರಕರಣ ದಾಖಲಿಸಲಾಗಿತ್ತು. ನಂತರ ಸಲ್ಮಾನ್ ಅಹ್ಮದ್ ನ್ಯಾಯಾಲಯದಿಂದ ಅನುಮತಿ ಪಡೆದು, ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.ಈ ಬಗ್ಗೆ ಆಸ್ಪತ್ರೆಯಲ್ಲಿ ಪತ್ರಿಕಾ ಗೋಷ್ಟಿ ನಡೆಸಿದ ಆಸ್ಪತ್ರೆ ಆಡಳಿತಾಧಿಕಾರಿ ಸಲ್ಮಾನ್ ಅಹ್ಮದ್, ಇದೊಂದು ವ್ಯವಸ್ಥಿತ ಸಂಚಾಗಿದ್ದು ಪಾಲಕರ ನಿರ್ಲಕ್ಷದಿಂದ ಬಾಲಕ ತೀವ್ರ ಸುಟ್ಟಗಾಯಕ್ಕೊಳಗಾಗಿದ್ದಾನೆ. ನಮ್ಮಲ್ಲಿ ಉತ್ತಮ ಚಿಕಿತ್ಸೆ ನೀಡುತ್ತಿದ್ದರೂ ಕೂಡಾ ವೈದ್ಯರ ಸಲಹೆಯ ವಿರುದ್ಧ ಬಾಲಕನನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿಯೂ ಕೂಡಾ ಪೂರ್ಣ ಚಿಕಿತ್ಸೆ ಕೊಡಿಸದೇ ಮನೆಗೆ ಕರೆದುಕೊಂಡು ಬಂದಿದ್ದಾರೆ ಎಂದು ತಿಳಿದು ಬಂದಿದೆ. ನಮ್ಮ ಆಸ್ಪತ್ರೆಯ ವಿರುದ್ಧ ಯಾರ‍್ಯಾರು ಸಂಚು ರೂಪಿಸಿದ್ದಾರೆ ಅವರೆಲ್ಲರನ್ನು ಕರೆಯಿಸಿ ತನಿಖೆ ನಡೆಸುವಂತೆ ಕೋರಿದ್ದೇವೆ. ಈ ವಿಷಯದಲ್ಲಿ ಯಾರ ಮೇಲೂ ಕನಿಕರ ತೋರಿಸುವ ಪ್ರಶ್ನೆಯೇ ಇಲ್ಲ, ಆಸ್ಪತ್ರೆಯ ಹೆಸರು ಹಾಳು ಮಾಡಲು ಮುಂದಾದವರ ವಿರುದ್ಧ ಪ್ರತ್ಯೇಕ ಮಾನನಷ್ಟ ಮೊಕದ್ದಮೆ ಹೂಡುವ ಕುರಿತು ವಕೀಲರೊಂದಿಗೆ ಚರ್ಚಿಸಲಾಗಿದೆ ಎಂದೂ ಅವರು ಹೇಳಿದರು. ಇವರೊಂದಿಗೆ ವೈದ್ಯಾಧಿಕಾರಿ ಡಾ. ಮೊಹಮ್ಮದ್ ನವಾಬ್ ಹಾಗೂ ವ್ಯವಸ್ಥಾಪಕರಿದ್ದರು.