ಮನುಷ್ಯನಿಗೆ ಬದುಕಿನ ಅನುಭವ ಮುಖ್ಯ: ನಿಜಗುಣಪ್ರಭು ತೋಂಟದಾರ್ಯ ಶ್ರೀ

KannadaprabhaNewsNetwork |  
Published : Apr 29, 2026, 02:30 AM IST
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪದಕ ಪುರಸ್ಕೃತ ಹೆಡ್ ಕಾನ್ ಸ್ಟೇಬಲ್ ಜಾಫರ್ ಬಚ್ಚೇರಿ ಹಾಗೂ ಅತ್ಯುತ್ತಮ ಗ್ರಂಥಪಾಲಕ ಹಾಲಪ್ಪ ಕೊರ್ಲಹಳ್ಳಿ ಅವರನ್ನು ನಿಜಗುಣಪ್ರಭ ತೋಂಟದಾರ್ಯ ಸ್ವಾಮೀಜಿ ಸನ್ಮಾನಿಸಿದರು. | Kannada Prabha

ಸಾರಾಂಶ

ಮನುಷ್ಯನಿಗೆ ದೇವರ ಅನುಭವಕ್ಕಿಂತ ಬದುಕಿನ ಅನುಭವ ಇದ್ದರೆ ಸಾಕು. ಹೀಗಾಗಿ ಶರಣರು ಮನುಷ್ಯನಿಗೆ ಬಹಳ ಸ್ವಚ್ಛವಾಗಿ ಅನುಭವವನ್ನು ಹೇಳಿದ್ದಾರೆ. ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎನ್ನುವುದನ್ನು ಕೊನೆಯವರೆಗೂ ತಿಳಿದುಕೊಳ್ಳದಿದ್ದರೆ ಅವನು ಮನುಷ್ಯನೇ ಅಲ್ಲ.

ಮುಂಡರಗಿ: ಸಕ್ಕರೆಯ ರುಚಿ ಹೇಗಿದೆ ಎಂದು ಪುಸ್ತಕ ಓದಿದರೆ ತಿಳಿಯುವುದಿಲ್ಲ. ಸಕ್ಕರೆಯನ್ನು ತಿಂದು ನೋಡುವುದೇ ಅನುಭಾವ. ಗುರು ಹೇಳಿಕೊಟ್ಟಿದ್ದನ್ನು ಕೇಳಿಸಿಕೊಳ್ಳುವುದು ಅನುಭಾವವಲ್ಲ, ಸಾಧನೆ ಮಾಡಿ ಅದನ್ನು ಕಂಡುಕೊಳ್ಳುವುದು ಅನುಭಾವ ಎಂದು ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ತಿಳಿಸಿದರು.

ಪಟ್ಟಣದ ತೋಂಟದಾರ್ಯ ಮಠದಲ್ಲಿ ಸೋಮವಾರ ಸಂಜೆ ಜರುಗಿದ 62ನೇ ತ್ರೈಮಾಸಿಕ ಶಿವಾನುಭ ಹಾಗೂ ಬಸವ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ನಮಗಿಂದು ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎನ್ನುವುದನ್ನು ತಿಳಿದುಕೊಳ್ಳುವ ಅನುಭಾವ ಅವಶ್ಯವಾಗಿದೆ. ಇದನ್ನು ತಿಳಿಯಲು ದೊಡ್ಡ ವಿದ್ಯೆಯ ಅವಶ್ಯಕತೆ ಇಲ್ಲ ಎಂದರು.

ಮನುಷ್ಯನಿಗೆ ದೇವರ ಅನುಭವಕ್ಕಿಂತ ಬದುಕಿನ ಅನುಭವ ಇದ್ದರೆ ಸಾಕು. ಹೀಗಾಗಿ ಶರಣರು ಮನುಷ್ಯನಿಗೆ ಬಹಳ ಸ್ವಚ್ಛವಾಗಿ ಅನುಭವವನ್ನು ಹೇಳಿದ್ದಾರೆ. ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎನ್ನುವುದನ್ನು ಕೊನೆಯವರೆಗೂ ತಿಳಿದುಕೊಳ್ಳದಿದ್ದರೆ ಅವನು ಮನುಷ್ಯನೇ ಅಲ್ಲ ಎಂದರು.

ವಿಶ್ರಾಂತ ಪ್ರಾಧ್ಯಾಪಕ ಪ್ರಭು ಸೊಪ್ಪಿನ ಮಾತನಾಡಿ, ಬಸವಣ್ಣನವರು ಅನುಭವ ಮಂಟಪದ ಮೂಲಕ ಚರ್ಚೆ, ವಚನಗಳ ಮೂಲಕ ಜಾಗೃತಿ, ಕಾಯಕ- ದಾಸೋಹದ ಮೂಲಕ ಸಮಾಜ ಕಟ್ಟಿದರು. ಅದಕ್ಕಾಗಿ ಜನಪದರು ಅನುಭಾವದ ನಿಧಿ ಬಸವಣ್ಣ ಎಂದು ಕರೆದರು. ಕಾಯಕದಲ್ಲಿ ಮೇಲು ಕೀಳೆಂಬುದಿಲ್ಲ. ಯಾವುದೇ ಕಾಯಕವ ಮಾಡಿದರೂ ಭಕ್ತಿ ಶ್ರದ್ಧೆಯಿಂದ ಮಾಡಬೇಕು ಎಂದರು.

ಶಿವಾನುಭ ಕಾರ್ಯಕ್ರಮದ ಭಕ್ತಿ ಸೇವೆ ವಹಿಸಿಕೊಂಡಿದ್ದ ಶಿಕ್ಷಕ ಸಾಹಿತಿ ಡಾ. ನಿಂಗು ಸೊಲಗಿ ಮಾತನಾಡಿ, ನಾಡಿಗೆ ತೋಂಟದಾರ್ಯ ಮಠದ ಕೊಡುಗೆ ಅಪಾರವಾಗಿದೆ. ಲಿಂ. ತೋಂಟದ ಸಿದ್ದಲಿಂಗ ಸ್ವಾಮೀಜಿಯವರ ಕಾರ್ಯಗಳನ್ನು ಇಂದಿನ ಮುಂಡರಗಿ ಮಠದ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಚಾಚೂ ತಪ್ಪದೇ ಮಾಡಿಕೊಂಡು ಹೋಗುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪದಕ ಪುರಸ್ಕೃತ, ಅಪರಾಧ ವಿಭಾಗದ ಹೆಡ್ ಪೊಲೀಸ್ ಕಾನ್ ಸ್ಟೇಬಲ್ ಜಾಫರ್ ಬಚ್ಚೇರಿ ಹಾಗೂ ಮೇವುಂಡಿಯ ಅತ್ಯುತ್ತಮ ಗ್ರಂಥಪಾಲಕ ಪ್ರಶಸ್ತಿ ಪುರಸ್ಕೃತ ಹಾಲಪ್ಪ ಕೊರ್ಲಹಳ್ಳಿ ಹಾಗೂ ಎಸ್ಎಸ್ಎಲ್‌ಸಿ. ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದು ತಾಲೂಕಿಗೆ ಪ್ರಥಮ, ದ್ವಿತಿಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಸನ್ಮಾನಿತರ ಪರವಾಗಿ ಜಾಫರ್ ಬಚ್ಚೇರಿ ಮಾತನಾಡಿ, ಪಾಲಕರು ತಮ್ಮ ಮಕ್ಕಳ ಬಗ್ಗೆ ಹೆಚ್ಚಿನ ಖಾಳಜಿ ವಹಿಸಬೇಕು. ಮಕ್ಕಳ ಕೈಗೆ ಮೊಬೈಲ್ ಕೊಡುವ ಮೊದಲು ಅವರು ಅದನ್ನು ಯಾವುದಕ್ಕಾಗಿ ಬಳಕೆ ಮಾಡುತ್ತಾರೆ ಎನ್ನುವುದನ್ನು ಗಮನಿಸಬೇಕು. ಯಾವುದೇ ಕರೆಗಳು ಬಂದು ನಿಮಗೆ ಒಟಿಪಿ ಮತ್ತು ಯಾವುದಾದರೂ ನಿಮ್ಮ ಬ್ಯಾಂಕ್ ಖಾತೆಯ ಕುರಿತು ಮಾಹಿತಿ ಕೇಳಿದರೆ ಹೇಳಬಾರದು ಎಂದರು.

ಸುಧಾ ಗುಡಿ ಧರ್ಮಗ್ರಂಥ ಪಠಣ ಮಾಡಿದರು. ನಂದಿತಾ ದಂಡಿನ ವಚನ ಚಿಂತನ ಮಾಡಿದರು. ಕಾರ್ಯಕ್ರಮದಲ್ಲಿ ಬಸಯ್ಯ ಗಿಂಡಿಮಠ, ಈಶಣ್ಣ ಬೆಟಗೇರಿ, ಶಿವಯೋಗಿ ಗಡ್ಡದ, ಎಸ್.ವಿ. ಕೊಪ್ಪಳ, ಪಾಲಾಕ್ಷಿ ಗಣದಿನ್ನಿ, ಗಿರೀಶಗೌಡ ಪಾಟೀಲ, ಪವನ್ ಚೋಪ್ರಾ, ಸದಾಶಿವಯ್ಯ ಕಬ್ಬೂರಮಠ, ವಿಶ್ವನಾಥ ಉಳ್ಳಾಗಡ್ಡಿ, ಉಮೇಶ ಹಿರೇಮಠ, ಸಿದ್ದಲಿಂಗೇಶ ಕಬ್ಬೂರಮಠ, ವೀರಣ್ಣ ಕಾಶಿಗಾವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕೊಟ್ರೇಶ ಅಂಗಡಿ ಸ್ವಾಗತಿಸಿ, ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಡವರನ್ನು ಮುಖ್ಯವಾಹಿನಿಗೆ ತರಲು ಗ್ಯಾರಂಟಿ ಯೋಜನೆ ಸಹಕಾರಿ: ಶಾಸಕ ಜಿ.ಎಸ್. ಪಾಟೀಲ
ಕಾಂಗ್ರೆಸ್ ಪಂಚ ಗ್ಯಾರಂಟಿ ದೇಶದೆಲ್ಲೆಡೆ ಅನುಷ್ಠಾನ: ಶರಣಪ್ಪ ಬೆಟಗೇರಿ