ಹುಬ್ಬಳ್ಳಿ:
ಪ್ರೀತಿ ನಿರಾಕರಿಸಿದ್ದಕ್ಕೆ ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಅಂಜಲಿಯನ್ನು ಹತ್ಯೆಗೈದ ಆರೋಪಿಗೆ ಭಾರತೀಯ ದಂಡ ಸಂಹಿತೆ (ಐಪಿಸಿ) ಕಲಂ 302ರಡಿ ಜೀವಾವಧಿ ಶಿಕ್ಷೆ ಜತೆಗೆ ₹25 ಸಾವಿರ ದಂಡ, ಸಾಕ್ಷ್ಯ ನಾಶಪಡಿಸಿದ್ದಕ್ಕೆ ಕಲಂ 201ರಡಿ 3 ವರ್ಷ ಶಿಕ್ಷೆ ಜತೆಗೆ ₹10 ಸಾವಿರ ದಂಡ ಹಾಗೂ ಮನೆಗೆ ಅಕ್ರಮವಾಗಿ ನುಗ್ಗಿದ್ದಕ್ಕೆ ಕಲಂ 451ರಡಿ 2 ವರ್ಷ ಶಿಕ್ಷೆ ಜತೆಗೆ ₹10 ಸಾವಿರ ದಂಡ ವಿಧಿಸಿದೆ. ಒಟ್ಟು ₹45 ಸಾವಿರ ದಂಡದಲ್ಲಿ ₹43 ಸಾವಿರವನ್ನು ಅಂಜಲಿಯ ಸಹೋದರಿ ಯಶೋಧಾಗೆ ಪರಿಹಾರವಾಗಿ ಹಾಗೂ ₹2 ಸಾವಿರ ಹಣವನ್ನು ಸರ್ಕಾರಕ್ಕೆ ಪಾವತಿಸುವಂತೆ ನ್ಯಾಯಾಧೀಶರಾದ ಪಲ್ಲವಿ ಬಿ.ಆರ್. ಆದೇಶಿಸಿದ್ದಾರೆ.
ನ. 21ರಂದು ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ್ದ ನ್ಯಾಯಾಲಯವೂ, ಆರೋಪಿಯನ್ನು ಅಪರಾಧಿ ಎಂದು ಘೋಷಿಸಿತ್ತು. ಆದರೆ, ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿರಲಿಲ್ಲ.435 ಪುಟಗಳ ದೋಷಾರೋಪ ಪಟ್ಟಿ:
2026ರ ಮಾರ್ಚ್‌ನಲ್ಲಿ ವಿಚಾರಣೆ ಆರಂಭವಾಗಿದ್ದು, ಒಟ್ಟು 46 ಸಾಕ್ಷಿಗಳ ವಿಚಾರಣೆ ನಡೆಸಲಾಗಿದೆ. ಅಭಿಯೋಜನೆ ಪರವಾಗಿ 179 ದಾಖಲೆ ಹಾಗೂ 18 ಮುದ್ದೆಮಾಲು (ಸಂಗ್ರಹಿಸಿದ ಸಾಕ್ಷ್ಯ)ಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಸರ್ಕಾರದ ಪರ ವಿಶೇಷ ಸರ್ಕಾರಿ ಅಭಿಯೋಜಕ ಆರ್.ಕೆ. ಕಾಳೆ ವಾದ ಮಂಡಿಸಿದ್ದರು.
ಅಂಜಲಿ ವೀರಾಪುರ ಓಣಿಯ ನಿವಾಸಿಯಾಗಿದ್ದು ಯಲ್ಲಾಪುರ ಓಣಿಯ ಗಿರೀಶ ಪ್ರೀತಿಸುವಂತೆ ನಿತ್ಯ ಪೀಡಿಸುತ್ತಿದೆ. ಇದನ್ನು ಅಂಜಲಿ ನಿರಾಕರಿಸಿದ್ದರಿಂದ ಕುಪಿತಗೊಂಡಿದ್ದ ಆತ, 2024ರ ಮೇ 15ರಂದು ಬೆಳಗಿನ ಜಾವ ಅಂಜಲಿ ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಹತ್ಯೆಗೈದು ಪರಾರಿಯಾಗಿದ್ದ. ಬಳಿಕ ಆತನನ್ನು ದಾವಣಗೆರೆ ರೈಲು ನಿಲ್ದಾಣದಲ್ಲಿ ಬಂಧಿಸಲಾಗಿತ್ತು.