ಧಾರವಾಡ: ಜೀವನದಲ್ಲಿ ಬುದ್ಧರ ಏಕಾಗ್ರತೆ, ತತ್ವ, ಬೋಧನೆಗಳನ್ನು ಬೆಳೆಸಿಕೊಂಡರೆ, ಜೀವನ ಸೇರಿದಂತೆ ಎಲ್ಲವೂ ಸರಳ ರೀತಿಯಲ್ಲಿ ಸುಂದರವಾಗಿರುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಹೇಳಿದರು.
ಭಗವಾನ ಬುದ್ಧರ ಬೋಧನೆಗಳು ಅತ್ಯವಶ್ಯಕ. ಅವರು ತೋರಿಸಿಕೊಟ್ಟ ಮಾರ್ಗದಲ್ಲಿ ಮುಂದೆ ನಡೆಯೋಣ. ಏಕಾಗ್ರತೆ ಎಂಬುದು ಮನುಷ್ಯನಿಗೆ ಬಹಳ ಮುಖ್ಯವಾದ ಸಂಗತಿ. ಮನೆಯಲ್ಲಿ ತಾಯಂದಿರು ಮಕ್ಕಳಿಗೆ ಬುದ್ಧರು ಬೋಧಿಸಿರುವ ತಾಳ್ಮೆ, ಏಕಾಗ್ರತೆ ಶಾಂತಿಯನ್ನು ತಿಳಿಸಿ, ಬೆಳೆಸುವ ಪ್ರಯತ್ನ ಮಾಡಬೇಕು ಮತ್ತು ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಮಕ್ಕಳಿಗೆ ಭಗವಾನ ಬುದ್ಧರ ಬೋಧನೆಗಳನ್ನು ಹೇಳುವ ಮೂಲಕ ಅವರಲ್ಲಿ ನೈತಿಕ ಜಾಗೃತಿಯ ಬಗ್ಗೆ ಅರಿವು ಮೂಡಿಸಿ ಎಂದರು.
ಆಯುಷ್ಮತಿ ಡಾ. ಪುಟ್ಟಮಣಿ ದೇವಿದಾಸ ಮಾತನಾಡಿ, ಬುದ್ಧರು ನಮಗೆ ಸತ್ ಸಂಗತಿಗಳನ್ನು ಬೋಧನೆ ಮಾಡಿದ್ದಾರೆ. ಅದನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡರೆ ಭಗವಾನ್ ಬುದ್ಧರ ಜಯಂತಿ ಮಾಡಿರುವುದಕ್ಕೆ ಸಾರ್ಥಕವಾಗುತ್ತದೆ. ಕೋಪ, ತಾಪ, ಮೋಹ, ರಾಗ, ದ್ವೇಷ ಇವೆಲ್ಲವನ್ನೂ ಬಿಟ್ಟು ಒಳ್ಳೆಯ ವಿಚಾರಗಳನ್ನು ಮಾಡಿ, ಅದರಿಂದ ಜೀವನ ಸುಂದರವಾಗಿಸಿಕೊಳ್ಳಬೇಕು ಎಂದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿದರು. ಡಾ. ಅನಿಲ ಮೇತ್ರಿ ಮತ್ತು ವೃಂದದವರು ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಆರತಿ ದೇವಶಿಖಾಮಣಿ ನಿರೂಪಿಸಿದರು.