ಹೃದಯಾಘಾತ : ಹಾಸ್ಯನಟ ರಾಕೇಶ್‌ ಪೂಜಾರಿ ಕುಸಿದು ನಿಧನ

KannadaprabhaNewsNetwork |  
Published : May 13, 2025, 01:22 AM ISTUpdated : May 13, 2025, 11:00 AM IST
ರಾಕೇಶ್ ಪೂಜಾರಿ ಪಾರ್ಥಿವ ಶರೀರ | Kannada Prabha

ಸಾರಾಂಶ

ಕಿರುತೆರೆ ವಾಹಿನಿಯಲ್ಲಿ ಪ್ರಸಾರವಸಗುತ್ತಿದ್ದ ‘ಕಾಮಿಡಿ ಕಿಲಾಡಿಗಳು ಸೀಸನ್ -3’ ವಿಜೇತರಾಗಿದ್ದ ಹಾಸ್ಯನಟ ರಾಕೇಶ್ ಪೂಜಾರಿ (34) ಮದುವೆ ಮೆಹಂದಿ ಕಾರ್ಯಕ್ರಮದಲ್ಲಿ ಕುಸಿದು ಬಿದ್ದು ನಿಧನ 

 ಕಾರ್ಕಳ :  ಕಿರುತೆರೆ ವಾಹಿನಿಯಲ್ಲಿ ಪ್ರಸಾರವಸಗುತ್ತಿದ್ದ ‘ಕಾಮಿಡಿ ಕಿಲಾಡಿಗಳು ಸೀಸನ್ -3’ ವಿಜೇತರಾಗಿದ್ದ ಹಾಸ್ಯನಟ ರಾಕೇಶ್ ಪೂಜಾರಿ (34) ಮದುವೆ ಮೆಹಂದಿ ಕಾರ್ಯಕ್ರಮದಲ್ಲಿ ಕುಸಿದು ಬಿದ್ದು ನಿಧನರಾದ ಘಟನೆ ಭಾನುವಾರ ರಾತ್ರಿ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದಲ್ಲಿ ನಡೆದಿದೆ. 

ಅವರು ತಾಯಿ ಮತ್ತು ಸಹದೋರಿಯನ್ನು ಅಗಲಿದ್ದಾರೆ. ರಾಕೇಶ್‌ ಪೂಜಾರಿ ಮಲ್ಪೆ ಸಮೀಪದ ಹೂಡೆ ಗ್ರಾಮದ ನಿವಾಸಿ. ಭಾನುವಾರ ರಾತ್ರಿ ಇಲ್ಲಿನ ನಿಟ್ಟೆ ಗ್ರಾಮದ ಮಿಯಾರು ಎಂಬಲ್ಲಿ ಸಂಬಂಧಿಕರ ಮನೆಯಲ್ಲಿ ಮದುವೆಯ ಮುನ್ನಾದಿನ ನಡೆಯುವ ಮೆಹಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕುಣಿಯುತ್ತಿದ್ದರು. ಈ ವೇಳೆ ಏಕಾಏಕಿ ಕುಸಿದು ಬಿದ್ದರು. ತಕ್ಷಣ ಅವರನ್ನು ನಿಟ್ಟೆ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ, ಅವರು ಅದಾಗಲೇ ಮೃತಪಟ್ಟಿದ್ದರು. ವೈದ್ಯರು ರಾಕೇಶ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಸೋಮವಾರ ಬೆಳಗ್ಗೆ ಕಾರ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಮನೆಯವರಿಗೆ ಹಸ್ತಾಂತರಿಸಲಾಯಿತು. ಸಂಜೆ ಸಾವಿರಾರು ಮಂದಿ ಸಂಬಂಧಿಕರು ಮತ್ತು ಊರವರ ಉಪಸ್ಥಿತಿಯಲ್ಲಿ ಹೂಡೆ ಸಮುದ್ರ ತೀರದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು. ಕಿರುತೆರೆಯ ರಿಯಾಲಿಟಿ ಶೋ, ಧಾರವಾಹಿಗಳಲ್ಲದೇ ರಾಕೇಶ್ ಪೂಜಾರಿ ಹಿಟ್ಲರ್ ಕಲ್ಯಾಣ ಮತ್ತು ತುಳು ಸಿನಿಮಾಗಳಲ್ಲಿಯೂ ನಟಿಸುತಿದ್ದರು. ಇದೀಗ ಚಿತ್ರೀಕರಣ ನಡೆಯುತ್ತಿರುವ ಕಾಂತಾರ ಚಾಪ್ಟರ್‌ 1 ಸಿನಿಮಾದಲ್ಲೂ ಅವರು ಅಭಿನಯಿಸುತ್ತಿದ್ದರು. ಜೊತೆಗೆ, ಸ್ಥಳೀಯವಾಗಿ ನಾಟಕಗಳಲ್ಲಿ ಅಭಿನಯಿಸಿ ಗುರುತಿಸಿಕೊಂಡಿದ್ದರು.

ರಾಕೇಶ್ ಕನ್ನಡದಲ್ಲಿ ‘ಪೈಲ್ವಾನ್’, ‘ಇದು ಎಂಥಾ ಲೋಕವಯ್ಯ’ ಚಿತ್ರಗಳಲ್ಲಿ ನಟಿಸಿದ್ದಾರೆ. ತುಳು ಭಾಷೆಯ ‘ಪೆಟ್ಕಮ್ಮಿ’, ‘ಅಮ್ಮೆ‌ರ್ ಪೊಲೀಸ್’, ‘ಪಮ್ಮನ್ನೆ ದಿ ಗ್ರೇಟ್‌’, ‘ಉಮಿಲ್’, ‘ಇಲ್ಲೋಕ್ಕೆಲ್’ ಸೇರಿದಂತೆ ಹಲವು ಸಿನಿಮಾಗಳಿಗೆ ಬಣ್ಣ ಹಚ್ಚಿದ್ದರು. ಇನ್ನು ಕರಾವಳಿಯ ರಿಯಾಲಿಟಿ ಶೋಗಳಾದ ‘ಬಲೆ ತೇಲಿಪಾಲೆ’, ‘ಮೇ 22’, ‘ಸ್ಟಾರ್’, ‘ತುಯಿನಾಯೆ ಪೋಯೆ’ ಸೇರಿದಂತೆ ಕೆಲ ನಾಟಕಗಳಲ್ಲಿ ಅಭಿನಯಿಸಿದ್ದಾರೆ.ಕಳೆದ ಎರಡು ವರ್ಷದ ಹಿಂದೆ ರಾಕೇಶ್ ತಂದೆ ಮೃತರಾಗಿದ್ದರು. ಕುಟುಂಬ ಜವಾಬ್ದಾರಿ ಆತನ ಹೆಗಲಿಗೇರಿತ್ತು. ಸಹೋದರಿ ರಕ್ಷಿತಾ ಮದುವೆ ಮಾಡಿಸುವುದೇ ರಾಕೇಶ್ ಅವರ ಕನಸಾಗಿತ್ತು. ಅದ್ಧೂರಿ ವಿವಾಹ ಮಾಡಿಸಿ, ಅವರ ಸಂತೋಷದ ದಾಂಪತ್ಯ ಜೀವನವನ್ನು ಕಣ್ತುಂಬಿಕೊಳ್ಳುವ ಆಸೆ ಇತ್ತು ಎಂದು ಸ್ನೇಹಿತರು ತಿಳಿಸಿದ್ದಾರೆ. 

ಕಲಾವಿದರು, ಗಣ್ಯರ ದಂಡು:

ರಾಕೇಶ್‌ ನಿಧನದ ಸುದ್ದಿ ತಿಳಿದು ಅವರ ಕಿರುತೆರೆಯ ಸ್ನೇಹಿತರಾದ ಅನೀಶ್, ವಾಣಿ, ಹಿತೇಶ್, ಸೂರಜ್, ನಟಿ ನಯನಾ, ನಟ ಶಿವರಾಜ್ ಕೆಆರ್ ಪೇಟೆ ಮುಂತಾದವರು ಬೆಂಗಳೂರಿನಿಂದ ಧಾವಿಸಿ ಬಂದು, ಮನೆಯಿಂದ ಬೀಚಿನವರೆಗೆ ನಡೆದ ಅಂತಿಮ ಮೆರವಣಿಗೆಯಲ್ಲಿ ಭಾಗವಹಿಸಿದರು.

ಚಿತ್ರ ನಟಿ ರಕ್ಷಿತಾ ಪ್ರೇಮ್, ನಟ ಮಾಸ್ಟರ್ ಆನಂದ್, ನಿರೂಪಕಿ ಅನುಶ್ರೀ, ಸಂಗೀತ ನಿರ್ದೇಶಕ ಯೋಗರಾಜ್ ಭಟ್, ಕಾಮಿಡಿ ಕಿಲಾಡಿಗಳ ತಂಡದ ಶಿವರಾಜ್ ಕೆ‌‌ಆರ್ ಪೇಟೆ, ನಯನಾ, ವಾಣಿ, ಸೂರಜ್, ಹಿತೇಶ್, ಅನೀಶ್, ಬಿಗ್ ಬಾಸ್ ಖ್ಯಾತಿಯ ಧನರಾಜ್, ತುಕಾಲಿ ಸಂತು ಮತ್ತಿತರರು ಆಗಮಿಸಿ ಅಂತಿಮ ದರ್ಶನ ಪಡೆದರು.. ಶಾಸಕ ಯಶ್ಪಾಲ್, ಮಾಜಿ ಶಾಸಕ ರಘುಪತಿ ಭಟ್, ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌