ಕನ್ನಡಪ್ರಭ ವಾರ್ತೆ ಸೊರಬ

ಮಲೆನಾಡಿನ ಐತಿಹಾಸಿಕ ತಾಣ ತಾಲೂಕಿನ ಚಂದ್ರಗುತ್ತಿ ಗ್ರಾಮದ ಒಡಲಲ್ಲಿ ವಿಜಯನಗರ ಸಾಮ್ರಾಜ್ಯದ ಆರಂಭಿಕ ಕಾಲದ ಅಪೂರ್ವ ವೀರಗಲ್ಲು ಶಾಸನವೊಂದು ಪತ್ತೆಯಾಗಿದ್ದು, ಇತಿಹಾಸ ಸಂಶೋಧಕರಲ್ಲಿ ಹೊಸ ಕುತೂಹಲ ಮೂಡಿಸಿದೆ. ಇಲ್ಲಿಯವರೆಗೂ ಈ ಭಾಗದಲ್ಲಿ ಪೂರ್ಣ ಪ್ರಮಾಣದ ಶಾಸನಗಳು ಲಭ್ಯವಿರಲಿಲ್ಲ. ಆದರೆ ಈ ಹೊಸ ಶೋಧನೆಯು ಗುತ್ತಿನಾಡಿನ ರಾಜಕೀಯ ಮತ್ತು ಭೌಗೋಳಿಕ ವ್ಯಾಪ್ತಿಯ ಮೇಲೆ ಹೊಸ ಬೆಳಕು ಚೆಲ್ಲಿದೆ.

ಚಂದ್ರಗುತ್ತಿ ಬೆಟ್ಟದ ಉತ್ತರ ಭಾಗದಲ್ಲಿ ಪತ್ತೆಯಾದ ಈ ಶಾಸನವನ್ನು ಸ್ಥಳೀಯರಾದ ಯಶವಂತಪ್ಪ ಮಾಸ್ತರ್ ಗುರುತಿಸಿದ್ದಾರೆ. ಸುಮಾರು ೧೯೫ ಸೆಂ.ಮೀ. ಎತ್ತರ ಹಾಗೂ ೬೮ ಸೆಂ.ಮೀ. ಅಗಲ ಇರುವ ಬೃಹತ್ ವೀರಗಲ್ಲು ಸರಿಸುಮಾರು ಕ್ರಿ.ಶ. ೧೩೫೦ರ ಕಾಲದ್ದಾಗಿದೆ. ಇದರಲ್ಲಿ ಹತ್ತು ಸಾಲುಗಳ ಬರಹವಿದ್ದು, ಕಾಲಘಟ್ಟದ ಪ್ರಭಾವದಿಂದ ಅಲ್ಲಲ್ಲಿ ಅಕ್ಷರಗಳು ಸವಕಲಾಗಿದ್ದರೂ ಸಂಶೋಧಕರು ಇದರ ಲಿಪಿಯನ್ನು ಯಶಸ್ವಿಯಾಗಿ ಓದಿದ್ದಾರೆ.

ಈ ವೀರಗಲ್ಲನ್ನು ಐದು ಆಕರ್ಷಕ ಪಟ್ಟಿಕೆಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿ ವೀರನೊಬ್ಬ ಯುದ್ಧ ಮಾಡುತ್ತಿರುವ ದೃಶ್ಯ ಮತ್ತು ಆ ವೀರ ಮರಣ ಹೊಂದಿದ ನಂತರ ಸುರಾಂಗನೆಯರು ಅವನನ್ನು ಪಲ್ಲಕ್ಕಿಯಲ್ಲಿ ಸ್ವರ್ಗಕ್ಕೆ ಕರೆದೊಯ್ಯುವ ಮೆರವಣಿಗೆಯ ಚಿತ್ರಗಳನ್ನು ಅತ್ಯಂತ ಕಲಾತ್ಮಕವಾಗಿ ಕೆತ್ತಲಾಗಿದೆ.

ಸಂಶೋಧಕರಾದ ರಮೇಶ್ ಹಿರೇಜಂಬೂರು ಮತ್ತು ಮಂಜಪ್ಪ ಚುರ್ಚುಗುಂಡಿ ಅವರ ಅಧ್ಯಯನದ ಪ್ರಕಾರ ವಿಜಯನಗರದ ಸ್ಥಾಪಕ ಅರಸರಲ್ಲಿ ಒಬ್ಬರಾದ ವೀರ ಹರಿಯಪ್ಪ ಒಡೆಯರ ಕಾಲದಲ್ಲಿ ಅವರ ಸಹೋದರ ಮಾರಪ್ಪ ಈ ಗುತ್ತಿ ಪ್ರದೇಶವನ್ನು ಆಳುತ್ತಿದ್ದನು. ಆ ಸಂದರ್ಭದಲ್ಲಿ ಆರಗದ ಅರಸರು ದಂಡೆತ್ತಿ ಬಂದಾಗ ಅವರ ವಿರುದ್ಧ ಹೋರಾಡಿ ವೀರ ಮರಣ ಹೊಂದಿದ ಸಂಡದ ಹಾಲಪ್ಪ ಎಂಬ ವೀರನ ನೆನಪಿಗಾಗಿ ಈ ವೀರಗಲ್ಲನ್ನು ಸ್ಥಾಪಿಸಲಾಗಿದೆ. ಶಾಸನದಲ್ಲಿ ಅಂಕೋಲೆ ಮತ್ತು ಪದುಮಲದೇವಿ ಎಂಬ ಹೆಸರುಗಳ ಉಲ್ಲೇಖವಿದ್ದು ಇದು ಅಂದಿನ ಕಾಲದ ರಾಜಕೀಯ ಸಂಬಂಧ ಮತ್ತು ಗುತ್ತಿ ರಾಜ್ಯದ ವ್ಯಾಪ್ತಿಯು ಸಮುದ್ರ ತೀರದವರೆಗೂ ಹಬ್ಬಿತ್ತು ಎಂಬುದಕ್ಕೆ ಸಾಕ್ಷಿ ನೀಡುತ್ತದೆ.


ಚಂದ್ರಗುತ್ತಿಯು ಹಿಂದೆ ನಾಥ ಪಂಥದ ಪ್ರಮುಖ ತಾಂತ್ರಿಕ ಕೇಂದ್ರವಾಗಿತ್ತು. ಈಗ ದೊರೆತಿರುವ ಶಾಸನವು ವಿಜಯನಗರದ ಆರಂಭದ ದಿನಗಳ ಆಡಳಿತಾತ್ಮಕ ಮಾಹಿತಿಯನ್ನು ನೀಡುತ್ತಿದ್ದು, ಇಲ್ಲಿ ಇನ್ನಷ್ಟು ವ್ಯವಸ್ಥಿತ ಶೋಧಕಾರ್ಯ ನಡೆದರೆ ಹಲವು ನಿಗೂಢ ಸತ್ಯಗಳು ಹೊರಬರಲಿವೆ ಎಂದು ಇತಿಹಾಸ ಸಂಶೋಧಕ ಶ್ರೀಪಾದ ಬಿಚ್ಚುಗತ್ತಿ ಅವರು ಅಭಿಪ್ರಾಯಪಟ್ಟಿದ್ದಾರೆ.

ಶೋಧನಾ ಕಾರ್ಯದಲ್ಲಿ ಸಂಶೋಧಕ ಶ್ರೀಪಾದ ಬಿಚ್ಚುಗತ್ತಿ, ಯಶವಂತಪ್ಪ ಮಾಸ್ತರ್ ಸ್ಥಳೀಯ ವರದಿಗಾರ ಪುರುಷೋತ್ತಮ ಎನ್. ಚಂದ್ರಗುತ್ತಿ, ಮತ್ತು ರವಿ ಉಪಸ್ಥಿತರಿದ್ದರು.