ಕನ್ನಡಪ್ರಭ ವಾರ್ತೆ ಜಮಖಂಡಿ
ತಾಲೂಕಿನ ಹಿಪ್ಪರಗಿ ಕೃಷ್ಣಾ ನದಿ ತೀರದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಸುಮಾರು 86 ಮೆಟ್ರಿಕ್‌ಟನ್ ಮರಳನ್ನು ಅಧಿಕಾರಿಗಳ ತಂಡ ವಶ ಪಡಿಸಿಕೊಂಡಿದೆ. ಕೃಷ್ಣಾ ನದಿಯಲ್ಲಿ ನೀರು ಬತ್ತಿ ಹೋಗಿದ್ದರಿಂದ ಮರಳು ದಂಧೆ ಖೋರರಿಗೆ ಅನುಕೂಲವಾಗಿದ್ದು ನದಿ ಪಾತ್ರವನ್ನು ಬಗೆಯಲು ಮುಂದಾಗಿದ್ದಾರೆ.ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಮರಳು ದಂಧೆ ನಡೆಯುತ್ತಿದೆ. ಇದಕ್ಕೆ ಕಾಣದ ಕೈಗಳ ಬೆಂಲವೂ ಇದೆ. ಪತ್ರಿಕೆಗಳಲ್ಲಿ ಅಕ್ರಮ ಮರಳು ಗಾರಿಕೆಯ ಕುರಿತಾಗಿ ವರದಿಗಳು ಪ್ರಕಟವಾಗುತ್ತಿದ್ದಂತೆ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ನೇತೃತ್ವದಲ್ಲಿ ತಾಲೂಕು ಮರಳು ಉಸ್ತುವಾರಿ ಸಮಿತಿ ಸಭೆ ನಡೆಸಿದ ಅಧಿಕಾರಿಗಳು, ಅಕ್ರಮ ಮರಳು ದಂಧೆ ತಡೆಯಲು ನಿರ್ಧರಿಸಿ ತಹಸೀಲ್ದಾರ್ ಅನೀಲ ಬಡಿಗೇರ, ಗ್ರಾಮಿಣ ಪಿಎಸೈ ಗಂಗಾಧರ ಪೂಜಾರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು, ಕಂದಾಯ ಅಧಿಕಾರಿಗಳು, ತಾಲೂಕು ಪಂಚಾಯತಿ ಅಧಿಕಾರಿಗಳು ಹಾಗೂ ಸಿಬ್ಬಂದಿ ತಂಡ ಹಿಪ್ಪರಗಿಯ ನದಿ ದಡ ಹಾಗೂ ಗೈರಾಣ ಜಮೀನು, ಸ್ಮಶಾನ ಜಾಗ ಹಾಗೂ ಶಾಲಾ ಆವರಣದಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಸುಮಾರು 86 ಮೆಟ್ರಿಕ್ ಟನ್ ನಷ್ಟು ಮರಳನ್ನು ವಶ ಪಡಿಸಿಕೊಂಡಿದ್ದಾಗಿ ತಿಳಿಸಿದ್ದಾರೆ. ಸದರಿ ಮರಳನ್ನು ನದಿಪಾತ್ರದ ತಗ್ಗು ಪ್ರದೇಶಗಳನ್ನು ತುಂಬುವುದು ಹಾಗೂ ಶಾಲಾ ಆವರಣ ಇನ್ನಿತರ ಕಡೆಗಳಲ್ಲಿ ಸಂಗ್ರಹಿಸಲಾದ ಮರಳನ್ನು ಸರ್ಕಾರಿ ಕಾಮಗಾರಿಗಳಿಗೆ ನಿಯಮಾವಳಿ ಅನುಸಾರ ಉಪಯೋಗಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಕ್ರಮ ಮರಳು ಸಂಗ್ರಹಿಸುತ್ತಿದ್ದವರ ಬಗ್ಗೆ ಯಾವುದೇ ಮಾಹಿತಿ ಮಾತ್ರ ದೊರೆತಿಲ್ಲ. ಅಕ್ರಮ ಮರಳು ಗಣಿಗಾರಿಕೆ, ಸಾಗಾಣಿಕೆ ಕಂಡು ಬಂದಲ್ಲಿ ಕಟ್ಟುನಿಟ್ಟಿನ ಕ್ರಮ: ಡಿಸಿ ಸಂಗಪ್ಪ
ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಹಾಗೂ ಸಾಗಾಣಿಕೆ ಕಂಡು ಬಂದಲ್ಲಿ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಂಗಪ್ಪ ಖಡಕ್ ಎಚ್ಚರಿಕೆ ನೀಡಿದ್ದಾರೆ.ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು ಜಿಲ್ಲೆಯಾದ್ಯಂತ ನದಿ, ಹಳ್ಳ, ಕೆರೆ, ಮುಂತಾದ ಕಡೆಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ವರದಿಗಳು ಪ್ರಕಟವಾಗಿದೆ. ಅಲ್ಲದೇ ಸಾರ್ವಜನಿಕರ ದೂರುಗಳು ಬಂದಿರುವ ಹಿನ್ನೆಯಲ್ಲಿ ಜಿಲ್ಲಾ ಮರಳು ಉಸ್ತುವಾರಿ ಸಭೆ ನಡೆಸಿ ಕಠಿಣ ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. ಮರಳು ಗಣಿ ಗಾರಿಕೆಯಿಂದ ಅಂತರ್ಜಲ ಮಟ್ಟದ ಕುಸಿತ, ಪರಿಸರಹಾನಿ, ನದಿಗಳ ಪಥ ಬದಲಾವಣೆ, ಪ್ರವಾಹ ಪರಿಸ್ಥಿತಿ, ಸರ್ಕಾರಕ್ಕೆ ಆರ್ಥಿಕ ನಷ್ಟ ಜತೆಗೆ ಕಾನೂನು ಮತ್ತು ಸೂ ವ್ಯವಸ್ಥೆಯ ಮೇಲು ಗಂಭೀರ ಪರಿಣಾಮ ಬೀಳುತ್ತದೆ. ಅಕ್ರಮ ಮರಳು ಸಾಗಾಣಿಕೆ ವಾಹನಗಳು, ಯಂತ್ರಗಳನ್ನು ವಶ ಪಡಿಸಿಕೊಂಡು ಸಂಬಂಧ ಪಟ್ಟವರ ವಿರುದ್ಧ ಪ್ರಕರಣ ದಾಖಲಿಸು ವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಕ್ರಮ ಮರಳು ದಂಧೆಯಲ್ಲಿ ಅಧಿಕಾರಿಗಳು ಶಾಮೀಲಾಗಿದ್ದು ಕಂಡು ಬಂದಲ್ಲಿ ತಕ್ಷಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು.-ಸಂಗಪ್ಪ,
ಜಿಲ್ಲಾಧಿಕಾರಿ.