ಕನ್ನಡಪ್ರಭ ವಾರ್ತೆ ವಿಜಯಪುರ
ಪತ್ನಿ ಸರ್ಕಾರಿ ನೌಕರಿಯಲ್ಲಿದ್ದರೂ ತವರು ಮನೆಯಿಂದ ವರದಕ್ಷಿಯಣೆ ತರುವಂತೆ ಪೀಡಿಸಿ ಕೊಲೆ ಮಾಡಿದ್ದ ಮೃತಳ ಅತ್ತೆ, ಪತಿ, ನಾದಿನಿ, ಮೈದುನ ಸೇರಿ ಒಟ್ಟು ಆರು ಜನ ಅಪರಾಧಿಗಳಿಗೆ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿ ಆದೇಶಿಸಿದೆ.₹5 ಲಕ್ಷ ವರದಕ್ಷಿಣೆ ತರುವಂತೆ ಪೀಡಿಸಿ ನಗರದ ಗಣೇಶ ನಗರದಲ್ಲಿನ ಮನೆಯಲ್ಲಿ ಪತ್ನಿ ನಿಕತಕೌಸರ ಚಪ್ಪರಬಂದಳನ್ನು 2020 ಮೇ 14ರಂದು ಕೊಲೆ ಮಾಡಲಾಗಿತ್ತು.
ನಿಕತಕೌಸರಳ ಅತ್ತೆ ಬಾನುಬಿ ಚಪ್ಪರಬಂದ, ಪತಿ ರಿಯಾಜಅಹಮ್ಮದ ಚಪ್ಪರಬಂದ, ಮೈದುನ ನಿಸಾರಅಹಮ್ಮದ ಚಪ್ಪರಬಂದ, ನಾದಿನಿ ಮಾಹೇದಾ ಚಪ್ಪರಬಂದ ಹಾಗೂ ಮೊದಲ ಆರೋಪಿ ಬಾನುಬಿಯ ಅಣ್ಣಂದಿರಾದ ಮೌಲಾಲಿ ಚಪ್ಪರಬಂದ ಹಾಗೂ ಮೈಬೂಬಸಾಬ ಶೇಖ ಶಿಕ್ಷೆಗೆ ಒಳಗಾದ ಅಪರಾಧಿಗಳು. ಈ ಪ್ರಕರಣದ ಕುರಿತು ವಿಚಾರಣೆ ನಡೆಸಿದ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮದ್ವೇಶ ದಬೇದ ಅವರು ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಆರೋಪಿಗಳು ಅಪರಾಧಿಗಳೆಂದು ತೀರ್ಪು ನೀಡಿದ್ದಾರೆ. ವರದಕ್ಷಿಣೆ ಆಸೆಗಾಗಿ ಕೊಲೆ ಮಾಡಿದ ಎಲ್ಲ ಆರು ಆರೋಪಿಗಳಿಗೆ ಆಜೀವ ಕಾರಾಗೃಹ ವಾಸ ಹಾಗೂ ತಲಾ ₹2,80,000 ದಂತೆ ಒಟ್ಟು ₹16,80,000 ದಂಡ ವಿಧಿಸಿ ನ್ಯಾಯಾಧೀಶರು ಆದೇಶಿಸಿದರು.ಸರ್ಕಾರದ ಪರವಾಗಿ ಅಭಿಯೋಜಕ ಎ.ಎಸ್.ತಮಗೊಂಡ ವಾದ ಮಂಡಿಸಿದ್ದರು. ನಿಕತಕೌಸರ ಚಪ್ಪರಬಂದ ಕೊಲೆಯ ಕುರಿತು ಜಲನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು.
