ನನ್ನನ್ನು ಶಾಸಕನನ್ನಾಗಿ ಮಾಡಿದ್ದರ ಪ್ರತಿಫಲವಾಗಿ ರಾಜ್ಯದಲ್ಲಿಯೇ ವಿಜಯಪುರವನ್ನು ಮಾದರಿ ನಗರವಾಗಿ ಅಭಿವೃದ್ಧಿಪಡಿಸಲು ಸಾಧ್ಯವಾಯಿತು. ರಾಜ್ಯದ ಮುಖ್ಯಮಂತ್ರಿ ಆಗಲು ಆಶೀರ್ವದಿಸಿದರೆ, ಇಡೀ ರಾಜ್ಯದ ಚಿತ್ರಣವನ್ನೇ ಬದಲಿಸುವೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ವಿಜಯಪುರ : 2018ರಲ್ಲಿ ನನ್ನನ್ನು ಶಾಸಕನನ್ನಾಗಿ ಮಾಡಿದ್ದರ ಪ್ರತಿಫಲವಾಗಿ ರಾಜ್ಯದಲ್ಲಿಯೇ ವಿಜಯಪುರವನ್ನು ಮಾದರಿ ನಗರವಾಗಿ ಅಭಿವೃದ್ಧಿಪಡಿಸಲು ಸಾಧ್ಯವಾಯಿತು. ರಾಜ್ಯದ ಮುಖ್ಯಮಂತ್ರಿ ಆಗಲು ಆಶೀರ್ವದಿಸಿದರೆ, ಇಡೀ ರಾಜ್ಯದ ಚಿತ್ರಣವನ್ನೇ ಬದಲಿಸುವೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದ ವಾರ್ಡ್ ನಂ.32ರಲ್ಲಿ ಜೋರಾಪುರ ಪೇಠ ದುರ್ಗಾದೇವಿ ದೇವಸ್ಥಾನದ ಹತ್ತಿರ 2025-26ನೇ ಸಾಲಿನ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ 20 ಲಕ್ಷ ರೂ. ಮತ್ತು ಧಾರ್ಮಿಕ ದತ್ತಿ ಇಲಾಖೆಯಿಂದ ಮಂಜೂರಾದ 10 ಲಕ್ಷ ರೂ. ಸೇರಿ ಒಟ್ಟು 30 ಲಕ್ಷ ರೂ. ಅನುದಾನದಲ್ಲಿ ಸಮುದಾಯ ಭವನ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.ದೂಳಾಪುರವಾಗಿದ್ದ ವಿಜಯಪುರ ನಗರದಲ್ಲಿ ಸುಸಜ್ಜಿತ ಸಿಸಿ ರಸ್ತೆಗಳು, ಒಳಚರಂಡಿ ನಿರ್ಮಾಣ, ಉದ್ಯಾನಗಳ ಅಭಿವೃದ್ಧಿ, ರಸ್ತೆ ಮಹಾಪುರುಷರ ಹೆಸರು ನಾಮಕರಣ, ವೃತ್ತಗಳ ನಿರ್ಮಾಣ, ಕಾಯಿಪಲ್ಲೆ ಮಾರುಕಟ್ಟೆ, ದೇವಸ್ಥಾನಗಳು ಜೀರ್ಣೋದ್ಧಾರ, ಸಮುದಾಯ ಭವನಗಳ ನಿರ್ಮಾಣ, ಶಾಲಾ ಕೊಠಡಿಗಳು ಹೀಗೆ ಹತ್ತಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರಿಂದ ವಿಜಯಪುರ ಅತ್ಯಂತ ಶುದ್ಧ ಗಾಳಿ ಬಿಸುವ ಮತ್ತು ಮಾದರಿ ನಗರವಾಗಿ ರೂಪುಗೊಳ್ಳಲು ಸಾಧ್ಯವಾಗಿದೆ ಎಂದರು.
ಶೀಘ್ರದಲ್ಲೇ ರಸ್ತೆ ಅಗಲೀಕರಣ
ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಶಿವಾಜಿ ವೃತ್ತದಿಂದ ಡಾ.ಬಾಬು ಜಗಜೀವನರಾಮ ವೃತ್ತದವರೆಗೆ ಶೀಘ್ರದಲ್ಲೇ ರಸ್ತೆ ಅಗಲೀಕರಣಗೊಳಿಸಿ, ಅನುಷ್ಠಾನಗೊಳಿಸಲು ಅಗತ್ಯವಿರುವ 32 ಕೋಟಿ ರೂ. ಅನುದಾನವನ್ನು ನೀಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ರಸ್ತೆ ಆಗಲೀಕರಣದಲ್ಲಿ ಬರುವ ಖಾಸಗಿ ಒಡೆತನದ ಆಸ್ತಿಗಳಿಗೆ ಪರಿಹಾರ ನೀಡಿಯೇ ಆದಷ್ಟು ಬೇಗ ಕಾಮಗಾರಿ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ಮಹಾನಗರ ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ ಮಾತನಾಡಿದರು. ಪಾಲಿಕೆ ಸದಸ್ಯ ರಾಹುಲ ಜಾಧವ, ಮುಖಂಡರು, ಹಿತೈಷಿಗಳು, ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.
ನನ್ನ ವಾಟ್ಸಪ್ ನಂಬರಿಗೆ ಮಾಹಿತಿ ನೀಡಿ,
ಮಹಾನಗರ ಪಾಲಿಕೆಯಲ್ಲಿ ಇ-ಸ್ವತ್ತು ಮಾಡಲು ಮತ್ತಿತರೆ ಕೆಲಸಗಳಿಗಾಗಿ ವಿನಾಕಾರಣ ವಿಳಂಬ ಮಾಡಿದರೆ, ಲಂಚ ಕೇಳಿದರೆ ನನ್ನ ವಾಟ್ಸಪ್ ನಂಬರಿಗೆ ಮಾಹಿತಿ ನೀಡಿ, ತಕ್ಷಣ ಸಂಬಂಧಿಸಿದ ಅಧಿಕಾರಿ/ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
-ಬಸನಗೌಡ ಪಾಟೀಲ ಯತ್ನಾಳ, ಶಾಸಕ